ADVERTISEMENT

ಎಡ್ಯುವರ್ಸ್‌ | ನೀಟ್ ಮಾದರಿ ಪರೀಕ್ಷೆ: ರೇಣುಕಾ ಪ್ರಥಮ

​ಪ್ರಜಾವಾಣಿ ವಾರ್ತೆ
Published 20 ಏಪ್ರಿಲ್ 2025, 16:02 IST
Last Updated 20 ಏಪ್ರಿಲ್ 2025, 16:02 IST
ಎಡ್ಯುವರ್ಸ್‌ ಶೈಕ್ಷಣಿಕ ಮೇಳದ ಸಿಇಟಿ ಮಾದರಿ ಪರೀಕ್ಷೆಯಲ್ಲಿ ಬಹುಮಾನ ಪಡೆದ ವಿದ್ಯಾರ್ಥಿಗಳು
ಎಡ್ಯುವರ್ಸ್‌ ಶೈಕ್ಷಣಿಕ ಮೇಳದ ಸಿಇಟಿ ಮಾದರಿ ಪರೀಕ್ಷೆಯಲ್ಲಿ ಬಹುಮಾನ ಪಡೆದ ವಿದ್ಯಾರ್ಥಿಗಳು   

ಹುಬ್ಬಳ್ಳಿ: ಪ್ರಜಾವಾಣಿ–ಡೆಕನ್‌ ಹೆರಾಲ್ಡ್‌ ಪತ್ರಿಕೆ ಆಯೋಜಿಸಿದ್ದ ಎಡ್ಯುವರ್ಸ್‌ ಶೈಕ್ಷಣಿಕ ಮೇಳದ ಎರಡನೇ ದಿನ ಭಾನುವಾರ ವಿದ್ಯಾರ್ಥಿಗಳಿಗೆ ನೀಟ್ (NEET) ಮಾದರಿ ಪರೀಕ್ಷೆ ಹಮ್ಮಿಕೊಳ್ಳಲಾಗಿತ್ತು.

ಹಾವೇರಿ ಜಿಲ್ಲೆಯ ಶಿಗ್ಗಾವಿಯ ರೇಣುಕಾ ಎಫ್‌. ಕಾಮನಹಳ್ಳಿ ಅತಿಹೆಚ್ಚು ಅಂಕ ಪಡೆದು ಪ್ರಥಮ ಬಹುಮಾನ ಪಡೆದರು. ದ್ವಿತೀಯ ಬಹುಮಾನವನ್ನು ಅಭಾ ಬೈಂದೂರು ಮತ್ತು ತೃತೀಯ ಬಹುಮಾನವನ್ನು ಶ್ರೇಯಸ್‌ ಎಸ್‌.ಪಿ. ಪಡೆದರು. ಸ್ಪರ್ಧಾತ್ಮಕ ಅಂಕ ಪಡೆದ ಅಬ್ದುಲ್‌ ನದಾಫ್‌, ಪವನ ಚನ್ನಗೌಡರ, ಸೃಷ್ಟಿ ಸನದಿ, ಭಾವನಾ, ಮಿಲನ್ ಸುಣಗಾರ, ಅಂಕಿತಾ ರುದ್ರಾ ಹಾಗೂ ರಾಹುಲ್‌ ಅರ್ಜಲಮನಿ ಅವರಿಗೂ ಬಹುಮಾನ ವಿತರಿಸಿ ಪ್ರೋತ್ಸಾಹಿಸಲಾಯಿತು.

‘ಸಿಇಟಿ ಮಾದರಿ ಪರೀಕ್ಷೆಗಳಿಗೆ ಹಾಜರಾದಾಗ ಪರೀಕ್ಷೆಯ ಮಾದರಿ ಅರ್ಥವಾಗಿ, ಆತ್ಮವಿಶ್ವಾಸ ಹೆಚ್ಚುತ್ತದೆ. ವಿದ್ಯಾರ್ಥಿ ಜೀವನದಲ್ಲಿ ಒಂದೊಂದು ನಿಮಿಷವೂ ಎಷ್ಟೊಂದು ಮುಖ್ಯ ಎನ್ನುವುದು ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಅರಿವಿಗೆ ಬರುತ್ತದೆ. ಸಾಮಾನ್ಯ ಜ್ಞಾನ ವೃದ್ಧಿ ಆಗುವುದಲ್ಲದೆ, ಪರೀಕ್ಷೆ ಬರೆಯುವ ಧೈರ್ಯ ಸಹ ಹೆಚ್ಚುತ್ತದೆ. ನಮ್ಮೆಲ್ಲರ ಸಾಧನೆಯ ಹಿಂದೆ ಹೆತ್ತವರ ಶ್ರಮವಿದೆ ಎನ್ನುವುದನ್ನು ಮರೆಯಬಾರದು’ ಎಂದು ವಿದ್ಯಾರ್ಥಿನಿ ರೇಣುಕಾ ಕಾಮನಹಳ್ಳಿ ತಿಳಿಸಿದರು.

ADVERTISEMENT

ಮಾದರಿ ಪರೀಕ್ಷೆಯನ್ನು ಆಯೋಜಿಸಿದ ನಗರದ ಆವಂತಿ ಶಿಕ್ಷಣ ಸಂಸ್ಥೆಯ ಪ್ರಾದೇಶಿಕ ವ್ಯವಸ್ಥಾಪಕ ಸಂದೀಪ ಮಾಕಣ್ಣವರ ಮಾತನಾಡಿ, ‘ಮಾದರಿ ಪರೀಕ್ಷೆ ಬರೆದ ಬಹುತೇಕ ವಿದ್ಯಾರ್ಥಿಗಳು ಒಎಂಆರ್‌ ಸೀಟ್‌ ಭರ್ತಿ ಮಾಡಲು ಅರ್ಧ ತಾಸು ತೆಗೆದುಕೊಂಡರು. ಅದರಲ್ಲೂ ಹೆಸರು, ಇನ್ನಿತರೆ ಮಾಹಿತಿ ತಪ್ಪಾಗಿ ನಮೂದಿಸಿದ್ದಾರೆ. ಇದು ಮಾದರಿ ಪರೀಕ್ಷೆ ಯಾವ ಸಮಸ್ಯೆಯೂ ಇಲ್ಲ. ಈ ತಪ್ಪು ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಯಾವ ಕಾರಣಕ್ಕೂ ಆಗಬಾರದು. ಆದಷ್ಟು ಕಡಿಮೆ ಅವಧಿಯಲ್ಲಿ ಒಂದೂ ತಪ್ಪಿಲ್ಲದೆ ಮಾಹಿತಿ ಭರ್ತಿ ಮಾಡಿ, ಕೇಳಿರುವ ಪ್ರಶ್ನೆಗಳಿಗೆ ಉತ್ತರಿಸಬೇಕು. ಇಲ್ಲದಿದ್ದರೆ ಎರಡು ವರ್ಷದ ಅಧ್ಯಯನ ವ್ಯರ್ಥವಾಗುತ್ತದೆ. ಇದೇ ಮಾದರಿಯಲ್ಲಿ ಕಾಮೆಡ್‌–ಕೆ ಪ್ರವೇಶ ಪರೀಕ್ಷೆ ನಡೆಯುತ್ತದೆ’ ಎಂದರು.

ಸಮಾರೋಪ ಸಮಾರಂಭದಲ್ಲಿ ಎಡ್ಯುವರ್ಸ್‌ ಶೈಕ್ಷಣಿಕ ಮೇಳದಲ್ಲಿ ಪಾಲ್ಗೊಂಡಿದ್ದ ವಿವಿಧ ವಿಶ್ವವಿದ್ಯಾಲಯದ ಹಾಗೂ ಶಿಕ್ಷಣ ಸಂಸ್ಥೆಗಳ ಪ್ರಮುಖರನ್ನು ಪ್ರಜಾವಾಣಿ–ಡೆಕನ್‌ ಹೆರಾಲ್ಡ್‌ ಪತ್ರಿಕೆ ಸನ್ಮಾನಿಸಿತು. ಪಾರಿತೋಷಕ ನೀಡಿ ಗೌರವಿಸಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.