ADVERTISEMENT

ಒಬ್ಬರ ರಕ್ತದಾನ; ಮೂವರಿಗೆ ಜೀವದಾನ

ರಾಷ್ಟ್ರೋತ್ಥಾನ ರಕ್ತ ಕೇಂದ್ರದ ಟ್ರಸ್ಟಿ ದತ್ತಮೂರ್ತಿ ಕುಲಕರ್ಣಿ ಅಭಿಮತ

​ಪ್ರಜಾವಾಣಿ ವಾರ್ತೆ
Published 15 ಜೂನ್ 2022, 2:57 IST
Last Updated 15 ಜೂನ್ 2022, 2:57 IST
ದತ್ತಮೂರ್ತಿ ಕುಲಕರ್ಣಿ
ದತ್ತಮೂರ್ತಿ ಕುಲಕರ್ಣಿ   

ಹುಬ್ಬಳ್ಳಿ: ‘ಜನ್ಮದಿನ, ವಿವಾಹ ವಾರ್ಷಿಕೋತ್ಸವ, ಹಬ್ಬ, ಸಂಘ–ಸಂಸ್ಥೆಗಳ ಕಾರ್ಯಕ್ರಮಗಳನ್ನು ರಕ್ತದಾನ ಮಾಡುವ ಮೂಲಕ ಆಚರಿಸಬೇಕು. ಒಬ್ಬರು ನೀಡುವ ರಕ್ತದಿಂದ ಮೂರು ಜೀವ ಉಳಿಸಬಹುದು...’

ವಿಶ್ವ ರಕ್ತದಾನಿಗಳ ದಿನದ ಪ್ರಯುಕ್ತ ಮಂಗಳವಾರ ‘ಪ್ರಜಾವಾಣಿ’ಯ ಫೇಸ್‌ಬುಕ್‌ ಲೈವ್‌ನಲ್ಲಿ ಪಾಲ್ಗೊಂಡ ರಾಷ್ಟ್ರೋತ್ಥಾನ ರಕ್ತ ಕೇಂದ್ರದ ಟ್ರಸ್ಟಿ ದತ್ತಮೂರ್ತಿ ಕುಲಕರ್ಣಿ ಅವರು ಸಲಹೆ ನೀಡಿದ್ದು ಹೀಗೆ.

‘ಕೃತಕವಾಗಿ ರಕ್ತ ಉತ್ಪಾದನೆ ಸಾಧ್ಯವಿಲ್ಲ. ಪ್ರತಿ ನಿಮಿಷ ಯಾರಿಗಾದರೂ ರಕ್ತದ ಅವಶ್ಯಕತೆ ಇರುತ್ತದೆ. ಅಪಘಾತ, ಹೆರಿಗೆ, ಕ್ಯಾನ್ಸರ್‌, ರಕ್ತಹೀನತೆಯಿಂದ ಬಳಲುವವರಿಗೆ ತುರ್ತಾಗಿ ಬೇಕಿರುತ್ತದೆ. ಆದರೆ, ದೇಶದಲ್ಲಿ ಬೇಡಿಕೆಗೆ ತಕ್ಕಂತೆ ರಕ್ತ ಲಭ್ಯವಿಲ್ಲ. ರಾಜ್ಯದಲ್ಲಿ ತಿಂಗಳಿಗೆ 7 ಲಕ್ಷ ಯುನಿಟ್‌ ಅವಶ್ಯವಿದ್ದು, 3 ಲಕ್ಷ ಯುನಿಟ್‌ನಷ್ಟ ಮಾತ್ರ ಸಿಗುತ್ತಿದೆ’ ಎಂದು ಹೇಳಿದರು.

ADVERTISEMENT

ಸರ್ಕಾರ ಕ್ರಮ ಕೈಗೊಳ್ಳಲಿ: ‘ರಕ್ತದೊತ್ತಡ, ಮಧುಮೇಹ, ಥೈರಾಯ್ಡ್‌ ಸಮಸ್ಯೆ ಹಾಗೂ ಶಸ್ತ್ರಚಿಕಿತ್ಸೆಗೆ ಒಳಗಾದವರು ರಕ್ತದಾನ ಮಾಡಬಾರದು. ಕೆಲವು ಮಧ್ಯವರ್ತಿಗಳು ಹೆಚ್ಚಿನ ದರಕ್ಕೆ ರಕ್ತ ಮಾರಾಟ ಮಾಡುತ್ತಿದ್ದು, ಆರೋಗ್ಯ ಇಲಾಖೆ ಕಠಿಣ ಕ್ರಮ ಕೈಗೊಳ್ಳಬೇಕು. ಶಿಕ್ಷಣದಲ್ಲಿ ರಕ್ತದಾನದ ಮಹತ್ವ ತಿಳಿಸಬೇಕು. ಪೋಷಕರು, ಶಿಕ್ಷಕರು ರಕ್ತದಾನ ಮಾಡಿ, ಮಕ್ಕಳಿಗೆ ಪ್ರೇರಣೆ ನೀಡಬೇಕು. ನಿರಂತರವಾಗಿ ರಕ್ತದಾನ ಮಾಡುವವರಿಗೆ ಕಾಲೇಜಿನಲ್ಲಿ ಹೆಚ್ಚುವರಿ ಅಂಕ, ನೌಕರರಿಗೆ ಬಡ್ತಿ ಹಾಗೂ ವೇತನ ಹೆಚ್ಚಳ ಮಾಡುವಂತಹ ಕ್ರಮಗಳು ಸರ್ಕಾರದ ಮಟ್ಟದಲ್ಲಾಗಬೇಕು’ ಎಂದು ಸಲಹೆ ನೀಡಿದರು.

ಕೋವಿಡ್‌ ಸಂದರ್ಭದಲ್ಲೂ ಸೇವೆ: ‘ಕೋವಿಡ್‌ ಸಂದರ್ಭದಲ್ಲಿ ರಾಷ್ಟ್ರೋತ್ಥಾನ ರಕ್ತ ಕೇಂದ್ರ ಸ್ವಂತ ವಾಹನಗಳಲ್ಲಿ ದಾನಿಗಳಿರುವ ಕಡೆಗೆ ತೆರಳಿ, ರಕ್ತ ಸಂಗ್ರಹಿಸಿ ಅಗತ್ಯ ಇರುವವರಿಗೆ ತಲುಪಿಸಿತು. ಹಾವೇರಿ, ಬೆಂಗಳೂರು, ಗದಗ ಜಿಲ್ಲೆಗಳಿಗೂ ರಕ್ತ ರವಾನಿಸಲಾಯಿತು. ಜನ ಹೊರಗೆ ಬರಲಾಗದ ಪರಿಸ್ಥಿತಿಯಲ್ಲೂ ನಮ್ಮ ಸಂಸ್ಥೆ ಕೈಕಟ್ಟಿ ಕೂರಲಿಲ್ಲ. ಸಹಾಯವಾಣಿ ಆರಂಭಿಸಿದ್ದರಿಂದ ಹೆಚ್ಚು ಅನುಕೂಲವಾಯಿತು. ನಮ್ಮಲ್ಲಿ ರಕ್ತವನ್ನು ಕೊಟ್ಟು, ತೆಗೆದುಕೊಳ್ಳುವ ವ್ಯವಸ್ಥೆ ಇಲ್ಲ. 450 ಎಂ.ಎಲ್‌.ಗೆ ಕೇವಲ ₹850 ಹಣ ಪಡೆಯುತ್ತೇವೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.