ADVERTISEMENT

ಧ್ವನಿವರ್ಧಕ ನಿರ್ಬಂಧ ಆದೇಶ ಪಾಲಿಸದಿದ್ದರೆ ಗುಂಡು ಹೊಡೆಯುವೆ: ಮುತಾಲಿಕ್

​ಪ್ರಜಾವಾಣಿ ವಾರ್ತೆ
Published 2 ಜೂನ್ 2022, 12:17 IST
Last Updated 2 ಜೂನ್ 2022, 12:17 IST
ಪ್ರಮೋದ್ ಮುತಾಲಿಕ್
ಪ್ರಮೋದ್ ಮುತಾಲಿಕ್   

ಹುಬ್ಬಳ್ಳಿ: ‘ಮುಂಜಾನೆ 5 ಗಂಟೆಗೆ ಶಬ್ದಮಾಲಿನ್ಯ ಉಂಟುಮಾಡುವ ಧ್ವನಿವರ್ಧಕಗಳ ನಿರ್ಬಂಧದ ಕುರಿತಾದ ಸರ್ಕಾರದ ಆದೇಶವನ್ನು ಯಾರೂ ಪಾಲಿಸುತ್ತಿಲ್ಲ. ನನಗೆ ಅಧಿಕಾರ ನೀಡಿದರೆ 24 ಗಂಟೆಗಳಲ್ಲಿ ಕಟ್ಟುನಿಟ್ಟಿನ ನಿಯಮ ಜಾರಿಗೊಳಿಸುತ್ತೇನೆ. ಪಾಲಿಸದವರಿಗೆ ಗುಂಡು ಹೊಡೆಯುತ್ತೇನೆ’ ಎಂದು ಶ್ರೀರಾಮಸೇನೆ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಹೇಳಿದರು.

ನಗರದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ದೇವಸ್ಥಾನ, ಮಸೀದಿ, ಚರ್ಚ್‌ಗಳಲ್ಲಿ ಶಬ್ದಮಾಲಿನ್ಯ ಉಂಟು ಮಾಡುವ ಧ್ವನಿವರ್ಧಕಗಳ ನಿರ್ಬಂಧದ ಕುರಿತಾಗಿ ಸುಪ್ರೀಂಕೋರ್ಟ್ ಆದೇಶ ನೀಡಿದೆ. ರಾಜ್ಯ ಸರ್ಕಾರ 15 ದಿನಗಳ ಅವಕಾಶ ನೀಡಿದ್ದರೂ ನಿರ್ಲಕ್ಷ್ಯ ವಹಿಸುತ್ತಿದ್ದಾರೆ. ಈ ಆದೇಶ ಕಸದಬುಟ್ಟಿ ಸೇರಿದೆ. ಕಟ್ಟುನಿಟ್ಟಿನ ನಿರ್ಧಾರ ಕೈಗೊಳ್ಳಲಾಗದಿದ್ದರೆ ರಾಜ್ಯ ಸರ್ಕಾರ ಅಧಿಕಾರದಿಂದ ಕೆಳಗಿಳಿದು, ನನಗೆ ಅಧಿಕಾರ ನೀಡಲಿ’ ಎಂದು ಅಗ್ರಹಿಸಿದರು.

8ರಂದು ಪ್ರತಿಭಟನೆ: ‘ಹಿಂದೂ ಸಂಘಟನೆಗಳಿಂದ ಅಧಿಕಾರದ ಗದ್ದುಗೆ ಏರಿದ ರಾಜ್ಯ ಸರ್ಕಾರ ಸೂಕ್ತ‌ ನಿರ್ಧಾರ ಕೈಗೊಳ್ಳದ ಕಾರಣ ಧ್ವನಿವರ್ಧಕ ಬಳಕೆ ಮುಂದುವರಿದಿದೆ. ಕಟ್ಟುನಿಟ್ಟಿನ ನಿರ್ಧಾರ ಜಾರಿ ಮಾಡುವ ತಾಕತ್ತು ಸರ್ಕಾರಕ್ಕಿಲ್ಲ. ಇದನ್ನು ಖಂಡಿಸಿ ಜೂನ್ 8 ರಂದು ರಾಜ್ಯವ್ಯಾಪಿ ಬಿಜೆಪಿ ಶಾಸಕರ ಕಚೇರಿಗಳ ಎದುರು ಪ್ರತಿಭಟನೆ ನಡೆಸುತ್ತೇವೆ. ಸರ್ಕಾರದ ನೀತಿಯನ್ನು ಬಟಾಬಯಲು ಮಾಡಿ, ಮುಂದಿನ ಚುನಾವಣೆಯಲ್ಲಿ ಇಂತಹವರನ್ನು ಗೆಲ್ಲಿಸಬೇಡಿ ಎಂದು ಜನರಿಗೆ ತಿಳಿಸುತ್ತೇವೆ. ಧ್ವನಿವರ್ಧಕ ಬಳಕೆ ನಿಲ್ಲುವವರೆಗೆ ಹೋರಾಟ ಬಿಡುವುದಿಲ್ಲ’ ಎಂದು ಹೇಳಿದರು.

ADVERTISEMENT

ಕಾಶ್ಮೀರ ಚಲೋ: ‘370ನೇ ವಿಧಿ ರದ್ದುಗೊಳಿಸಿದರೂ ಕಾಶ್ಮೀರದಲ್ಲಿ ಹಿಂದೂಗಳ ಹತ್ಯೆ ನಿಂತಿಲ್ಲ. ಕಾಶ್ಮೀರಿ‌ ಹಿಂದೂಗಳ ರಕ್ಷಣೆ ವಿಚಾರದಲ್ಲಿ‌ ಕೇಂದ್ರ ಸರ್ಕಾರ ವಿಫಲವಾಗಿದೆ. ನಿರಾಶ್ರಿತರ ಸಮಸ್ಯೆ ಹಾಗೂ ಹತ್ಯೆಗಳು ಹೀಗೇ ಮುಂದುವರಿದರೆ ಶ್ರೀರಾಮ ಸೇನಾ ವತಿಯಿಂದ ಕಾಶ್ಮೀರಚಲೋ ಅಭಿಯಾನ ಹಮ್ಮಿಕೊಂಡು, ಹಿಂದೂಗಳನನ್ನು ರಕ್ಷಿಸುತ್ತೇವೆ. ಸರ್ಕಾರ ಸೂಕ್ತ ಕ್ರಮ ಕೈಗೊಳ್ಳದಿದ್ದರೆ ಹಿಂದೂಗಳು ಜ್ವಾಲಾಮುಖಿಯಂತೆ ಸಿಡಿದೇಳಿದ್ದಾರೆ’ ಎಂದು ಎಚ್ಚರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.