ADVERTISEMENT

ಹಿಂದಿ ಕಲಿಕೆಗೆ ಆದ್ಯತೆ ನೀಡಿ: ಡಾ. ಪ್ರಾಣ್‌ ಜಗ್ಗಿ

ಅಂತರರಾಷ್ಟ್ರೀಯ ಎರಡು ದಿನಗಳ ವಿಚಾರ ಸಂಕಿರಣ

​ಪ್ರಜಾವಾಣಿ ವಾರ್ತೆ
Published 7 ಸೆಪ್ಟೆಂಬರ್ 2018, 9:37 IST
Last Updated 7 ಸೆಪ್ಟೆಂಬರ್ 2018, 9:37 IST
ಹುಬ್ಬಳ್ಳಿಯಲ್ಲಿ ಶುಕ್ರವಾರ ಆರಂಭವಾದ ಎರಡು ದಿನಗಳ ಅಂತರರಾಷ್ಟ್ರೀಯ ವಿಚಾರ ಸಂಕಿರಣವನ್ನು ನಿವೃತ್ತ ಹಿಂದಿ ಪ್ರಾಧ್ಯಾಪಕ ಪ್ರೇಮಿ ಡಾ. ಪ್ರಾಣ್‌ ಜಗ್ಗಿ ಉದ್ಘಾಟಿಸಿದರು
ಹುಬ್ಬಳ್ಳಿಯಲ್ಲಿ ಶುಕ್ರವಾರ ಆರಂಭವಾದ ಎರಡು ದಿನಗಳ ಅಂತರರಾಷ್ಟ್ರೀಯ ವಿಚಾರ ಸಂಕಿರಣವನ್ನು ನಿವೃತ್ತ ಹಿಂದಿ ಪ್ರಾಧ್ಯಾಪಕ ಪ್ರೇಮಿ ಡಾ. ಪ್ರಾಣ್‌ ಜಗ್ಗಿ ಉದ್ಘಾಟಿಸಿದರು   

ಹುಬ್ಬಳ್ಳಿ: ‘ಇಂಗ್ಲಿಷ್‌ ಭಾಷೆ ಪ್ರಧಾನವಾಗಿರುವ ಅಮೆರಿಕದಲ್ಲಿ ಹಿಂದಿ ಬೆಳೆಸಲು ಸಾಕಷ್ಟು ಪ್ರಯತ್ನ ನಡೆಯುತ್ತಿದೆ. ಅಲ್ಲಿನ ಶಾಲಾ ಕಾಲೇಜು ಮತ್ತು ವಿಶ್ವವಿದ್ಯಾಲಯಗಳಲ್ಲಿ ಹಿಂದಿ ಕಲಿಸಲಾಗುತ್ತಿದೆ. ಆದ್ದರಿಂದ ನಮ್ಮ ರಾಷ್ಟ್ರಭಾಷೆಗೆ ಇನ್ನೂ ಹೆಚ್ಚಿನ ಒತ್ತು ನೀಡುವ ಅಗತ್ಯವಿದೆ’ ಎಂದು ನಿವೃತ್ತ ಹಿಂದಿ ಪ್ರಾಧ್ಯಾಫಕ ಡಾ. ಪ್ರಾಣ್‌ ಜಗ್ಗಿ ಅಭಿಪ್ರಾಯಪಟ್ಟರು.

ಕೆಎಲ್‌ಇ ಸೊಸೈಟಿಯ ಕಾಡಸಿದ್ದೇಶ್ವರ ಕಲಾ ಕಾಲೇಜು, ಎಚ್‌.ಎಸ್‌. ಕೋತಂಬ್ರಿ ವಿಜ್ಞಾನ ಸಂಸ್ಥೆ, ಕರ್ನಾಟಕ ವಿಶ್ವವಿದ್ಯಾಲಯದ ಹಿಂದಿ ಪ್ರಾಧ್ಯಾಪಕದ ಸಂಘ ಮತ್ತು ಬಹುಭಾಷಾ ಲೇಖಕರ ಸಂಘದ ಸಹಯೋಗದಲ್ಲಿ ಶುಕ್ರವಾರ ಕಾಡಸಿದ್ದೇಶ್ವರ ಕಾಲೇಜಿನಲ್ಲಿ ಆರಂಭವಾದ ‘ಸ್ವಾತಂತ್ರ್ಯ ಪೂರ್ವದಲ್ಲಿ ರಾಷ್ಟ್ರೀಯತೆ ಬೆಳೆಸುವಲ್ಲಿ ಸಾಹಿತ್ಯ ಮತ್ತು ಪತ್ರಿಕೋದ್ಯಮದ ಪಾತ್ರ’ ಕುರಿತ ಅಂತರರಾಷ್ಟ್ರೀಯ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.

‘ಕಥೆ, ಕವನ ಓದುವ ಮೂಲಕ ಅಮೆರಿಕದಲ್ಲಿ ಹಿಂದಿ ಬೆಳೆಸುವ ಕಾರ್ಯ ನಡೆಯುತ್ತಿದೆ. ಸ್ಥಳೀಯರು ಕೂಡ ಆಸಕ್ತಿಯಿಂದ ಈ ಭಾಷೆ ಕಲಿಯುತ್ತಿದ್ದಾರೆ. ಹಿಂದೂಸ್ತಾನಿ ಸಂಗೀತ ಮತ್ತು ಹಿಂದಿ ಭಾಷೆ ಎಂದರೆ ಅವರಿಗೆ ಅತೀವ ಪ್ರೀತಿಯಿದೆ. ಆದ್ದರಿಂದ ನಮ್ಮ ದೇಶದಲ್ಲಿ ಈ ಭಾಷೆಗೆ ಪ್ರಾಮುಖ್ಯತೆ ಕೊಡಬೇಕು. ಹಿಂದಿ ಕಲಿಕೆ ಕಡ್ಡಾಯ ಮಾಡಬೇಕು’ ಎಂದರು.

ADVERTISEMENT

ಕೆಎಲ್‌ಇ ಸೊಸೈಟಿಯ ಆಡಳಿತ ಮಂಡಳಿ ಸದಸ್ಯ ಶಂಕ್ರಣ್ಣ ಮುನವಳ್ಳಿ ‘ಈಗ ಎಲ್ಲ ಕ್ಷೇತ್ರಗಳಲ್ಲಿಯೂ ಸ್ಪರ್ಧೆ ಹೆಚ್ಚಾಗಿದೆ. ಆದ್ದರಿಂದ ನಾಲ್ಕು ಗೋಡೆಗಳ ನಡುವೆ ಕಲಿಯುವುದಷ್ಟೇ ಶಿಕ್ಷಣವಿಲ್ಲ. ಭಾಷಾ ಕೌಶಲ ಮತ್ತು ಸಂವಹನ ಕೌಶಲವನ್ನು ಪರಿಣಾಮಕಾರಿಯಾಗಿ ರೂಢಿಸಿಕೊಳ್ಳಬೇಕು’ ಎಂದರು.

ಎರಡು ದಿನ ನಡೆಯುವ ವಿಚಾರ ಸಂಕಿರಣದಲ್ಲಿ ಕನ್ನಡ, ಹಿಂದಿ, ಉರ್ದು, ಕೊಂಕಣಿ ಭಾಷೆಗಳ 150ಕ್ಕೂ ವಿಷಯ ಪರಿಣಿತರು ತಮ್ಮ ಅಭಿಪ್ರಾಯ ಹಂಚಿಕೊಂಡರು. ಶನಿವಾರ ಮಧ್ಯಾಹ್ನ 2 ಗಂಟೆಗೆ ಸಮಾರೋಪ ನಡೆಯಲಿದೆ.

ದೆಹಲಿ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಡಾ. ಹರೀಶ್‌ ಅರೋರಾ, ಕರ್ನಾಟಕ ವಿಶ್ವವಿದ್ಯಾಲಯದ ಹಿಂದಿ ಪ್ರಾಧ್ಯಾಪಕ ಡಾ.ಎಸ್‌. ಕೆ. ಪವಾರ್‌, ಹಿಂದಿ ಪ್ರಾಧ್ಯಾಪಕ ಸಂಘದ ಅಧ್ಯಕ್ಷೆ ಡಾ. ಕವಿತಾ ಚಂದಗಾವ್‌, ಸಂಘಟಕಿ ಡಾ. ವಿ.ಜಿ. ರಜಪೂತ್‌, ಕಾಡಸಿದ್ದೇಶ್ವರ ಕಾಲೇಜಿನ ಪ್ರಾಚಾರ್ಯ ಡಾ. ಎಲ್‌.ಡಿ. ಹೊರಕೇರಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.