ADVERTISEMENT

ಸಂಘಟನೆಗಳ ಸಣ್ಣತನದಿಂದ ಗಡಿ ತಗಾದೆ: ಶಿವಸೇನಾ ರಾಜ್ಯ ಘಟಕದ ಅಧ್ಯಕ್ಷ

​ಪ್ರಜಾವಾಣಿ ವಾರ್ತೆ
Published 14 ಮಾರ್ಚ್ 2021, 8:07 IST
Last Updated 14 ಮಾರ್ಚ್ 2021, 8:07 IST

ಹುಬ್ಬಳ್ಳಿ: ಹಲವು ಸಂಘಟನೆಗಳ ಸಣ್ಣತನದಿಂದಾಗಿ ಕರ್ನಾಟಕ ಮತ್ತು ಮಹಾರಾಷ್ಟ್ರ ನಡುವಿನ ಗಡಿ ವಿವಾದ ವಿನಾಕಾರಣ ದೊಡ್ಡದಾಗುತ್ತಿದೆ. ಎರಡೂ ರಾಜ್ಯಗಳ ಮುಖ್ಯಮಂತ್ರಿಗಳು ಸೌಹಾರ್ದದಿಂದ ಇದ್ದಾಗ ಸಂಘಟನೆಗಳು ಮೂಗು ತೂರಿಸುವುದು ಸರಿಯಲ್ಲ ಎಂದು ಕರ್ನಾಟಕ ರಾಜ್ಯ ಶಿವಸೇನಾದ ರಾಜ್ಯ ಘಟಕದ ಅಧ್ಯಕ್ಷ ಕುಮಾರ ಹಕಾರಿ ಹೇಳಿದರು.

ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ‘ಗಡಿ ವಿವಾದ ಇಂದು‌ ನಿನ್ನೆಯದಲ್ಲ. ಪದೇ ಪದೇ ಇದನ್ನು ಬೆಳೆಸುವ ಬದಲು ಇತಿಶ್ರೀ ಹಾಡುವುದು ಉತ್ತಮ. ಇದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಎರಡೂ ರಾಜ್ಯಗಳ ಮುಖ್ಯಮಂತ್ರಿಗಳ ಜೊತೆ ಚರ್ಚಿಸಬೇಕು’ ಎಂದರು.

‘ಶಿವಸೇನಾ, ಭಾಷೆ ಹಾಗೂ ಗಡಿ ವಿಚಾರದಲ್ಲಿ ತನ್ನದೇ ಆದ ನಿಲುವು ಹೊಂದಿದೆ. ಕರ್ನಾಟಕದ ನೆಲ, ಜಲ ಹಾಗೂ ಭಾಷೆಯ ವಿಚಾರ ಬಂದಾಗ ಇಲ್ಲಿನ ಶಿವಸೇನಾ ಕಾರ್ಯಕರ್ತರು ಮಹಾರಾಷ್ಟ್ರದ ವಿರುದ್ಧ ಹೋರಾಡುವಂತೆ, ಅಲ್ಲಿನ ಪಕ್ಷದ ಕಾರ್ಯಕರ್ತರು ಕರ್ನಾಟಕದ ವಿರುದ್ಧ ಹೋರಾಟ ಮಾಡುವುದು ಸಹಜ. ಕೊಲ್ಹಾಪುರದಲ್ಲಿ ಶಿವಸೇನಾ ಕಾರ್ಯಕರ್ತರು ಕನ್ನಡಿಗರಿಗೆ ತೊಂದರೆ ಮಾಡಿದರೆ, ನಮ್ಮ ಪಕ್ಷದ ವಿರುದ್ಧವೇ ಹೋರಾಡಲು ನಾವು ಸಿದ್ಧ’ ಎಂದು ಎಚ್ಚರಿಸಿದರು.

ADVERTISEMENT

ರಾಜೀನಾಮೆಗೆ ಆಗ್ರಹ: ಶಾಸಕ ರಮೇಶ ಜಾರಕಿಹೊಳಿ ವಿರುದ್ಧ ಯುವತಿ ವಿಡಿಯೊ ಹೇಳಿಕೆ ಬಿಡುಗಡೆ ಮಾಡಿದ್ದು, ತನಿಖೆಯ ಮೇಲೆ ರಮೇಶ ಪ್ರಭಾವ ಬೀರುವ ಸಾಧ್ಯತೆಯಿದೆ. ಆದ್ದರಿಂದ ಶಾಸಕ ಸ್ಥಾನಕ್ಕೂ ರಾಜೀನಾಮೆ ಕೊಡಬೇಕು ಎಂದು ಹಕಾರಿ ಆಗ್ರಹಿಸಿದರು.

‘ಯುವತಿ ಕೋರಿರುವಂತೆ ಆಕೆಯ ಕುಟುಂಬಕ್ಕೆ ಸರ್ಕಾರ ರಕ್ಷಣೆ ಕೊಡಬೇಕು. ನಿಷ್ಪಕ್ಷಪಾತವಾಗಿ ತನಿಖೆಯಾಗಬೇಕು. ಘಟನೆಗೆ ಸಂಬಂಧಿಸಿದಂತೆ ಹಲವರಿಗೆ ಈಗಾಗಲೇ ಪೊಲೀಸರು ನೋಟಿಸ್‌ ಕೊಟ್ಟಿದ್ದಾರೆ. ಅದರಂತೆ ರಮೇಶ ಜಾರಕಿಹೊಳಿಗೂ ನೋಟಿಸ್ ನೀಡಬೇಕು’ ಎಂದು ಒತ್ತಾಯಿಸಿದರು.

ಪಕ್ಷದ ರಾಜ್ಯ ಘಟಕದ ಕಾರ್ಯದರ್ಶಿ ವಿನಯ ಮಾಳದಕರ, ಹುಬ್ಬಳ್ಳಿ–ಧಾರವಾಡ ಮಹಾನಗರ ಜಿಲ್ಲಾ ಘಟಕದ ಕಾರ್ಯದರ್ಶೀ ಅಣ್ಣಪ್ಪ ದೊಡ್ಡಮನಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.