ADVERTISEMENT

ಸ್ವಚ್ಛತೆ, ಸಮಯ ಪಾಲನೆಗೆ ಆದ್ಯತೆ: ಸುರೇಶ ಅಂಗಡಿ ಭರವಸೆ

​ಪ್ರಜಾವಾಣಿ ವಾರ್ತೆ
Published 3 ಜೂನ್ 2019, 16:57 IST
Last Updated 3 ಜೂನ್ 2019, 16:57 IST
ರೈಲ್ವೆ ಖಾತೆಯ ರಾಜ್ಯ ಸಚಿವ ಸುರೇಶ ಅಂಗಡಿ ಅವರು ಪತ್ನಿ ಮಂಗಳಾ ಹಾಗೂ ಶಾಸಕ ಜಗದೀಶ ಶೆಟ್ಟರ್– ಶಿಲ್ಪಾ ಶೆಟ್ಟರ್ ದಂಪತಿ ಜತೆ ಸಿದ್ಧಾರೂಢರ ದರ್ಶನ ಪಡೆದರು – ಪ್ರಜಾವಾಣಿ ಚಿತ್ರಗಳು
ರೈಲ್ವೆ ಖಾತೆಯ ರಾಜ್ಯ ಸಚಿವ ಸುರೇಶ ಅಂಗಡಿ ಅವರು ಪತ್ನಿ ಮಂಗಳಾ ಹಾಗೂ ಶಾಸಕ ಜಗದೀಶ ಶೆಟ್ಟರ್– ಶಿಲ್ಪಾ ಶೆಟ್ಟರ್ ದಂಪತಿ ಜತೆ ಸಿದ್ಧಾರೂಢರ ದರ್ಶನ ಪಡೆದರು – ಪ್ರಜಾವಾಣಿ ಚಿತ್ರಗಳು   

ಹುಬ್ಬಳ್ಳಿ: ‘ರೈಲು ನಿಲ್ದಾಣಗಳಲ್ಲಿ ಸ್ವಚ್ಛತೆ, ರೈಲುಗಳ ಓಡಾಟದ ಸಮಯ ಪಾಲನೆಹಾಗೂ ಅಪಘಾತ ರಹಿತ ಲೆವೆಲ್ ಕ್ರಾಸಿಂಗ್‌ಗೆ ಮೊದಲ ಆದ್ಯತೆ ನೀಡಲಾಗುವುದು’ ಎಂದು ರೈಲ್ವೆ ಖಾತೆಯ ರಾಜ್ಯ ಸಚಿವ ಸುರೇಶ ಅಂಗಡಿ ಹೇಳಿದರು.

ಹುಬ್ಬಳ್ಳಿಗೆ ಸೋಮವಾರ ಭೇಟಿ ನೀಡಿದ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ‘ಕೆಂಗಲ್ ಹನುಮಂತಯ್ಯ, ಜಾಫರ್ ಷರೀಪ್, ಮಲ್ಲಿಕಾರ್ಜುನ ಖರ್ಗೆ, ಬಸನಗೌಡ ಪಾಟೀಲ ಯತ್ನಾಳ್, ಸದಾನಂದಗೌಡ ಅವರು ನಿರ್ವಹಿಸಿದಂತಹ ಖಾತೆ ಸಿಕ್ಕಿರುವುದು ನನ್ನ ಸೌಭಾಗ್ಯ. ಸದ್ಯದಲ್ಲೇ ಅಧಿಕಾರಿಗಳ ಜತೆ ಸಭೆ ನಡೆಸಿ ಮಾಡಬೇಕಾದ ಕೆಲಸಗಳ ರೂಪುರೇಷೆ ಸಿದ್ದಪಡಿಸುವೆ‘ ಎಂದರು.

ಮಠ, ಕೇಶವ ಕುಂಜಕ್ಕೆ ಭೇಟಿ:ಕೇಂದ್ರ ಸಚಿವರಾದ ಬಳಿಕ ಮೊದಲ ಸಲ ಹುಬ್ಬಳ್ಳಿಗೆ ಭೇಟಿ ನೀಡಿದ ಸುರೇಶ ಅಂಗಡಿ ಪತ್ನಿ ಮಂಗಳಾ ಹಾಗೂ ಶಾಸಕ ಜಗದೀಶ ಶೆಟ್ಟರ್ ದಂಪತಿ ಅವರೊಂದಿಗೆ, ಸಿದ್ಧಾರೂಢ ಮಠಕ್ಕೆ ಭೇಟಿ ನೀಡಿ ಸಿದ್ಧಾರೂಢ ಹಾಗೂ ಗುರುನಾಥಾರೂಢರ ಆಶೀರ್ವಾದ ಪಡೆದರು. ಮಠದ ಟ್ರಸ್ಟ್ ಕಮಿಟಿ ಪದಾಧಿಕಾರಿಗಳು ಅಂಗಡಿ ಅವರನ್ನು ಸನ್ಮಾನಿಸಿದರು.

ADVERTISEMENT

‘ಸಿದ್ಧಾರೂಢರ ಆಶೀರ್ವಾದದಿಂದ ಸತತ ನಾಲ್ಕನೇ ಸಲ ಗೆದ್ದು ಸಚಿವನಾಗಿದ್ದಾನೆ. ಇದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಮತ್ತು ಪಕ್ಷದ ಅಧ್ಯಕ್ಷರಾದ ಅಮಿತ್ ಶಾ ಅವರಿಗೆ ಧನ್ಯವಾದ ಸಲ್ಲಿಸುತ್ತೇನೆ‘ ಎಂದರು.

ಬಳಿಕ, ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕಚೇರಿ ಕೇಶವ ಕುಂಜಕ್ಕೆ ತೆರಳಿ ಡಾ. ಕೇಶವ ಬಲಿರಾಮ್ ಹೆಡಗೇವಾರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು. ‘ಸಂಘ ಹಾಗೂ ಬಿಜೆಪಿ ಕಾರ್ಯಕರ್ತರ ಶ್ರಮದಿಂದಾಗಿ, ನಾಲ್ಕು ಲಕ್ಷ ಮತ ಪಡೆದು ನಾಲ್ಕನೇ ಬಾರಿಗೆ ಸಂಸದನಾಗಿ ಆಯ್ಕೆಯಾದೆ. ಜನರು ಈ ಬಾರಿ ಜಾತಿ ಮತ್ತು ಧರ್ಮ ನೋಡದೆ ದೇಶಕ್ಕಾಗಿ ಮತ ಹಾಕಿದ್ದಾರೆ‘ ಎಂದು ಹೇಳಿದರು.

ಸಂಘದ ಉತ್ತರ ಕರ್ನಾಟಕ ಪ್ರಾಂತ ಕಾರ್ಯವಾಹಕ ಶ್ರೀಧರ ನಾಡಿಗೇರ ಮಾತನಾಡಿ, ‘ರಾಜಕಾರಣಿಗಳ ಬಗ್ಗೆ ಸಮಾಜದಲ್ಲಿ ಕೆಟ್ಟ ಭಾವನೆ ಇದೆ. ಸುರೇಶ ಅಂಗಡಿ ಅವರು ಅಂತಹ ಭಾವನೆ ಬಾರದಂತೆ ಕೆಲಸ ಮಾಡಿ, ಮುಂದಿನ ತಲೆಮಾರಿಗೆ ಮಾದರಿಯಾಗಿ’ ಎಂದು ಸಲಹೆ ನೀಡಿದರು.

ಉದ್ಯೋಗಾವಕಾಶ ಕಲ್ಪಿಸಿ:ಮೂರು ಸಾವಿರ ಮಠಕ್ಕೆ ಭೇಟಿ ನೀಡಿದ ಅಂಗಡಿ, ಗುರುಸಿದ್ಧೇಶ್ವರ ಸ್ವಾಮೀಜಿ ಗದ್ದುಗೆಗೆ ನಮಿಸಿದರು. ಬಳಿಕ, ಗುರುಸಿದ್ಧರಾಜ ಯೋಗೀಂದ್ರ ಸ್ವಾಮೀಜಿ ಅವರನ್ನು ಸನ್ಮಾನಿಸಿ ಆಶೀರ್ವಾದ ಪಡೆದರು. ‘ರೈಲ್ವೆ ಇಲಾಖೆಯಲ್ಲಿ ನಿಮ್ಮ ಅವಧಿಯಲ್ಲಿ ರಾಜ್ಯದವರಿಗೆ ಹೆಚ್ಚಿನ ಉದ್ಯೋಗಾವಕಾಶ ಕಲ್ಪಿಸಿ‘ ಎಂದು ಸ್ವಾಮೀಜಿ ಸಲಹೆ ನೀಡಿದರು.

ಬಿಜೆಪಿ ಕಚೇರಿಗೆ ಭೇಟಿ ನೀಡಿದ ಅಂಗಡಿ ಅವರನ್ನು ಪಕ್ಷದ ಜಿಲ್ಲಾ ಘಟಕದಿಂದ ಸನ್ಮಾನಿಸಲಾಯಿತು. ಶಾಸಕ ಶಂಕರ ಪಾಟೀಲ ಮುನೇನಕೊಪ್ಪ, ವಿಧಾನ ಪರಿಷತ್ ಸದಸ್ಯ ಪ್ರದೀಪ ಶೆಟ್ಟರ, ಬಿಜೆಪಿ ಮಹಾನಗರ ಘಟಕದ ಅಧ್ಯಕ್ಷ ನಾಗೇಶ ಕಲಬುರ್ಗಿ, ಜಿಲ್ಲಾ ವಕ್ತಾರ ಹನುಮಂತಪ್ಪ ದೊಡ್ಡಮನಿ, ಮುಖಂಡರಾದ ಅಶೋಕ ಕಾಟವೆ, ಮಹೇಶ ಟೆಂಗಿನಕಾಯಿ, ತಿಪ್ಪಣ್ಣ ಮಜ್ಜಗಿ, ದತ್ತಮೂರ್ತಿ ಕುಲಕರ್ಣಿ ಮುಂತಾದವರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.