ಧಾರವಾಡ: ‘ಮಹಿಳೆ ಮತ್ತು ಮಕ್ಕಳ ಕಳ್ಳ ಸಾಗಣೆ, ಅಕ್ರಮ ಮಾರಾಟ ಹೆಚ್ಚುತ್ತಿದೆ. ಈ ಕೃತ್ಯಗಳ ತಡೆ ನಿಟ್ಟಿನಲ್ಲಿ ಸಾಮಾಜಿಕ ಕಟ್ಟೆಚ್ಚರ ಮುಖ್ಯ’ ಎಂದು ಹಿರಿಯ ನ್ಯಾಯಾಧೀಶ ಪರಶುರಾಮ ಎಫ್.ದೊಡ್ಡಮನಿ ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಆರೋಗ್ಯ ಇಲಾಖೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಪೊಲೀಸ್ ಇಲಾಖೆ ವತಿಯಿಂದ ನಗರದ ಆಲೂರು ವೆಂಕಟರಾವ್ ಸಾಂಸ್ಕೃತಿಕ ಭವನದಲ್ಲಿ ಬುಧವಾರ ಆಯೋಜಿಸಿದ್ದ ಮಾದಕ ವಸ್ತು ಸೇವನೆ ಹಾಗೂ ಅಕ್ರಮ ಸಾಗಣೆ ವಿರೋಧಿ ದಿನಾಚರಣೆಯಲ್ಲಿ ಅವರು ಮಾತನಾಡಿದರು.
‘ಮಾದಕ ವಸ್ತು ಸೇವನೆ, ಅಕ್ರಮ ಮತ್ತು ಅನೈತಿಕ ಚಟುವಟಿಕೆಗಳು ಸಾಮಾಜಿಕ ಅಶಾಂತಿಗೆ ಎಡೆಮಾಡುತ್ತವೆ. ಇಂಥ ಚಟುವಟಿಕೆಗಳಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಸಾರ್ವಜನಿಕರ ಸಹಕಾರ ಅಗತ್ಯ. ಶಾಲಾ–ಕಾಲೇಜು, ಸಂಘ–ಸಂಸ್ಥೆಗಳಲ್ಲಿಮಹಿಳೆ ಮತ್ತು ಮಕ್ಕಳ ಮಾರಾಟ, ಅಕ್ರಮ ಸಾಗಣೆ ತಡೆ ಕುರಿತು ಜಾಗೃತಿ ಮೂಡಿಸಬೇಕು’ ಎಂದು ತಿಳಿಸಿದರು.
‘ಮಾದಕ ವಸ್ತುಗಳ ಮಾರಾಟ, ಸೇವನೆ ಅಪರಾಧ. ಕೆಲವು ದುಷ್ಕರ್ಮಿಗಳು ಇಂಥ ದಂಧೆ ಮಾಡಿಕೊಂಡಿದ್ದಾರೆ. ಇದನ್ನು ಮಟ್ಟಹಾಕಲು ಕಾನೂನುಗಳ ಜೊತೆಗೆ ಸಾರ್ವಜನಿಕರ ಸಹಕಾರ ಇದ್ದರೆ ಮಾತ್ರ ಸಾಧ್ಯ’ ಎಂದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಗೋಪಾಲ ಬ್ಯಾಕೋಡ ಮಾತನಾಡಿ, ‘ಮಾದಕ ವಸ್ತು ವ್ಯಸನವು ಅಪಾಯಕಾರಿ. ಅರಿವು ಇಲ್ಲದೆ ಕೆಲವು ಮಕ್ಕಳು, ಯುವಕರು ಮಾದಕವಸ್ತು ಸೇವನೆ ಗೀಳು ರೂಢಿಸಿಕೊಳ್ಳುತ್ತಾರೆ. ಅದನ್ನು ತಡೆಗಟ್ಟಬೇಕು’ ಎಂದರು.
ಜಿಲ್ಲಾ ಆರೋಗ್ಯಾಧಿಕಾರಿ ಡಾ.ಶಶಿ ಪಾಟೀಲ ಮಾತನಾಡಿ, ‘ಮಾದಕ ವಸ್ತು ವ್ಯಸನದಿಂದ ಮುಕ್ತಿ ನಿಟ್ಟಿನಲ್ಲಿ ವ್ಯಸನಿಗಳಿಗೆ ಸಲಹೆ, ಮಾರ್ಗದರ್ಶನ ನೀಡಲು ವ್ಯಸನಮುಕ್ತ ಕೇಂದ್ರಗಳನ್ನು ಹಾಗೂ ಸರ್ಕಾರಿ ಆಸ್ಪತ್ರೆಗಳಲ್ಲಿ ಸಮಾಲೋಚನಾ ಕೇಂದ್ರಗಳನ್ನು ತೆರೆಯಲಾಗಿದೆ’ ಎಂದು ತಿಳಿಸಿದರು.
ಜಿಲ್ಲಾ ಶಸ್ತ್ರಚಿಕಿತ್ಸಕ ಡಾ. ಸಂಗಪ್ಪ ಗಾಬಿ, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ. ಪರಶುರಾಮ ಎಫ್.ಕೆ., ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ. ಮಹೇಶ ಚಿತ್ತರಗಿ, ಡಾ. ಮಂಜುನಾಥ. ಎಸ್., ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿ ಡಾ. ರವೀಂದ್ರ ಬೊವೇರ, ತಾಲ್ಲೂಕು ವೈದ್ಯಾಧಿಕಾರಿ ಡಾ. ಕೆ.ಎನ್.ತನುಜಾ, ಎಂ.ಎನ್.ಅಗಡಿ ಇದ್ದರು.
ಯಾವುದೇ ಅಕ್ರಮ ಚಟುವಟಿಗಳು ಕಂಡುಬಂದರೆ ಸಾರ್ವಜನಿಕರು ತಕ್ಷಣ 112 ಸಹಾಯವಾಣಿಗೆ ಕರೆ ಮಾಡಿ ತಿಳಿಸಬೇಕು. ಮಾಹಿತಿ ನೀಡಿದವರ ಹೆಸರನ್ನು ಗೌಪ್ಯವಾಗಿ ಇಡಲಾಗುವುದು ಗೋಪಾಲ ಬ್ಯಾಕೋಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.