ADVERTISEMENT

‘ಮಾವ’ನಿಗೆ ಬಾಡೂಟ, ‘ಅಕ್ಕ’ನಿಗೆ ಪ್ರಚಾರ ಪತ್ರ!

ಹಳ್ಳಿಗಳಲ್ಲಿ ವಿಭಿನ್ನ ಪ್ರಚಾರದ ತಂತ್ರ l ಕತ್ತಲಾದಂತೆ ರಂಗೇರುವ ಅಖಾಡ l ಕಣದಲ್ಲಿರುವ ಬಹುತೇಕರು ಕೃಷಿಕರು

ಪ್ರಮೋದ
Published 18 ಡಿಸೆಂಬರ್ 2020, 1:21 IST
Last Updated 18 ಡಿಸೆಂಬರ್ 2020, 1:21 IST
ಬಾಡೂಟ
ಬಾಡೂಟ   

ಹುಬ್ಬಳ್ಳಿ: ಮೊದಲ ಹಂತದಲ್ಲಿ ಗ್ರಾಮ ಪಂಚಾಯ್ತಿ ಚುನಾವಣೆ ನಡೆಯುತ್ತಿರುವ ಕಲಘಟಗಿ ತಾಲ್ಲೂಕಿನ ಗ್ರಾಮಗಳಲ್ಲಿ ಪ್ರಚಾರ ಕಾವು ಪಡೆದಿದೆ. ಬೆಳಿಗ್ಗೆ ಯಿಂದ ಸಂಜೆ ತನಕ ಹೊಟ್ಟೆಪಾಡಿಗೆ ದುಡಿಯಲು ಹೋಗುವ ಬಹುತೇಕ ಅಭ್ಯರ್ಥಿಗಳು ಸಂಜೆಯಾಗುತ್ತಿದ್ದಂತೆ ಪ್ರಚಾರದಲ್ಲಿ ತೊಡಗುತ್ತಾರೆ.

ಕುರುವಿನಕೊಪ್ಪ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಕುರುವಿನಕೊಪ್ಪ ಹಾಗೂ ಬಿ.ಗುಡಿಹಾಳ ಗ್ರಾಮಗಳು ಬರುತ್ತವೆ. 14 ಸದಸ್ಯರನ್ನು ಆಯ್ಕೆ ಮಾಡಬೇಕಾಗಿದ್ದು, ಒಟ್ಟು 43 ಅಭ್ಯರ್ಥಿಗಳು ‌ಕಣದಲ್ಲಿದ್ದಾರೆ. ಕುರುವಿನಕೊಪ್ಪ ಗ್ರಾಮದಿಂದ ನಾಲ್ಕೈದು ಕಿ.ಮೀ. ದೂರದಲ್ಲಿರುವ ಉಗ್ಗಿನಕೇರಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಚಳಮಟ್ಟಿ, ಕಾಡನಕೊಪ್ಪ, ಹಾರೋಗೇರಿ, ಕಾಮಧೇನು ಗ್ರಾಮಗಳಿವೆ. 18 ಸದಸ್ಯರ ಸ್ಥಾನಕ್ಕಾಗಿ 51 ಜನ ಕಣದಲ್ಲಿದ್ದಾರೆ. ಇದರಲ್ಲಿ ಬಹುತೇಕರು ಮರು ಆಯ್ಕೆ ಬಯಸಿದ್ದಾರೆ. ಕೃಷಿಯನ್ನು ನೆಚ್ಚಿಕೊಂಡವರು.

ಮತದಾನಕ್ಕೆ (ಡಿ. 22) ನಾಲ್ಕು ದಿನಗಳಷ್ಟೇ ಬಾಕಿಯಿದ್ದರೂ ಅಭ್ಯರ್ಥಿಗಳು ಹಾಗೂ ಅವರ ಬೆಂಬಲಿಗರು ಬೆಳಿಗ್ಗೆ ಸಮಯದಲ್ಲಿ ಪ್ರಚಾರದ ಗೋಜಿಗೆ ಹೋಗುವುದಿಲ್ಲ. ಕೃಷಿ ಮೇಲೆ ಅವಲಂಬಿತವಾದ ಗ್ರಾಮೀಣ ಪ್ರದೇಶದ ಜನ ಬೆಳಿಗ್ಗೆ ಮನೆಯಲ್ಲಿರುವುದಿಲ್ಲ. ಆದ್ದರಿಂದ ಬೆಳಿಗ್ಗೆ ಪ್ರಚಾರ ಮಾಡಿ ದರೆ ಹೆಚ್ಚಿನ ಮತದಾರರು ಭೇಟಿಯಾಗುವುದಿಲ್ಲ ಎನ್ನುತ್ತಾರೆ ಅಭ್ಯರ್ಥಿಗಳು. ಆದ್ದರಿಂದ ಸಂಜೆ ಆರು ಗಂಟೆಯಿಂದ ರಾತ್ರಿ 11ರ ತನಕ ಮನೆ, ಮನೆಗಳಿಗೆ ಹೋಗಿ ಪ್ರಚಾರ ಮಾಡುತ್ತಿದ್ದಾರೆ.

ADVERTISEMENT

‘ಹಳ್ಳಿ ಜನ ಕೃಷಿ ಕೆಲಸಕ್ಕೆ ಹೋಗ್ತಾರ‍್ರೀ, ಸಂಜಿ ಮುಂದ ಎಲ್ರೂ ಸಿಕ್ತಾರ‍್ರೀ, ಎರಡು ತಾಸು ಪ್ರಚಾರ ಮಾಡಿದ್ರ ಅಷ್ಟ ಸಾಕ್ರೀ...’ ಎಂದು ಎರಡನೇ ಅವಧಿಗೆ ಮರುಆಯ್ಕೆ ಬಯಸಿರುವ ಕುರುವಿನಕೊಪ್ಪದ ಗಿರೀಶ ಅಮರಗೋಳ ಹೇಳಿದರು.

ಕಣದಲ್ಲಿರುವ ತಮ್ಮ ಸಂಬಂಧಿಪರ ಪ್ರಚಾರಕ್ಕೆ ಸಜ್ಜಾಗಿದ್ದ ಉಗ್ಗಿನಕೇರಿ ಗ್ರಾಮದ ಹಿರಿಯರೊಬ್ಬರನ್ನು ಮಾತಿಗೆಳೆದಾಗ ‘ಚುನಾವಣೆಯಲ್ಲಿ ಗೆದ್ದರೆ ನಮಗೆ ರೊಕ್ಕ ಸಿಗಲ್ಲ. ಹಳ್ಳಿಗಳಲ್ಲಿ ಪ್ರತಿಷ್ಠೆ ಮುಖ್ಯವಾಗುತ್ತದೆ. ‘ಏನಾದರೂ’ ಮಾಡಿ ನಮ್ಮ ಅಭ್ಯರ್ಥಿಗಳೇ ಗೆಲ್ಲಬೇಕು’ ಎಂದು ಕಣ್ಣು ಮಿಟುಕಿಸಿದರು.

‘ಏನಾದರೂ’ ಅಂದರೆ ಏನು ಎಂದು ಕೇಳಿದರೆ, ‘ಅದು ಪೇಪರ್‌ನವ್ರ ಮುಂದ ಹೇಳುವಂತದ್ದು ಅಲ್ರೀ..’ ಎಂದರು. ಅಂತಿಮವಾಗಿ ಹೆಸರು ಬಹಿ ರಂಗಪಡಿಸಬಾರದು ಎಂಬ ಷರತ್ತಿನ ಮೇಲೆ ಪಂಚಾಯ್ತಿ ಚುನಾವಣೆಯ ಒಳಸುಳಿಗಳನ್ನು ಬಿಚ್ಚಿಟ್ಟರು.

‘ಹಳ್ಳಿಗಳಲ್ಲಿ ಹೆಣ್ಣುಮಕ್ಕಳು, ಮನೆಯ ಹಿರಿಯರು, ಪುರುಷರ ಮಾತು ಮೀರುವುದಿಲ್ಲ. ಹೀಗಾಗಿ ಮನೆಯ ಯಜಮಾನರಿಗೆ ಬಾಡೂಟ ಹಾಕಿಸುತ್ತೇವೆ. ಅದೇ ದಿನ ಸಂಜೆ ಅವರ ಮನೆಗೆ ಹೋಗಿ, ಮಾವನಿಗೆ ಹೇಳಿ ಎಲ್ಲಾ ವೋಟ್‌ ನಮಗೆ ಹಾಕಸ್ರೀ ಎಂದು ಅಕ್ಕನಿಗೆ (ಮನೆ ಹಿರಿಯಾಕೆ) ಅಭ್ಯರ್ಥಿಯ ಚಿನ್ಹೆಯ ಪತ್ರ ಕೊಡುತ್ತೇವೆ’ ಎಂದು ಮೆಲು ಧ್ವನಿಯಲ್ಲಿ ಹೇಳಿದರು.

ಮೂರು ಬಾರಿ ಉಗ್ಗಿನಕೇರಿ ಗ್ರಾಮ ಪಂಚಾಯ್ತಿ ಸದಸ್ಯರಾಗಿದ್ದ ‌‌‌ಜಿ. ಚನ್ನಪ್ಪ ಈ ಬಾರಿ ಯುವಕರಿಗೆ ಅವಕಾಶ ಬಿಟ್ಟುಕೊಟ್ಟಿದ್ದಾರೆ. ಅವರನ್ನು ಮಾತಿಗೆಳೆದಾಗ ‘ಹಳ್ಳಿಗಳಲ್ಲಿ ಅಕ್ಕಪಕ್ಕದ ಮನೆಯವರು, ನಮ್ಮ ಸಮಾಜದ ಜನರನ್ನು ಅಕ್ಕ, ಚಿಕ್ಕಪ್ಪ, ದೊಡ್ಡಪ್ಪ, ಮಾವ ಎಂದು ಕರೆಯುವುದು ಮಾಮೂಲು. ಕೋವಿಡ್‌ ಸಮಯದಲ್ಲಿ ಅವರಿಗೆಲ್ಲ ಮಾಸ್ಕ್‌, ದವಸ ಧಾನ್ಯ ಕೊಟ್ಟಿದ್ದೇವೆ. ಅವರ ಮನೆಗಳಲ್ಲಿ ಯಾರಾದರೂ ಮೃತಪಟ್ಟಾಗ, ಶುಭ ಸಮಾರಂಭಗಳಾದಾಗ ನೆರವಾಗಿದ್ದೇವೆ. ಅವೆಲ್ಲವೂ ಈಗ ವೋಟಿನ ರೂಪದಲ್ಲಿ ಸಿಗುತ್ತವೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.