ADVERTISEMENT

ನೂತನ ಶಿಕ್ಷಣ ನೀತಿ: ದೆಹಲಿ ಜಂತರ್ ಮಂತರ್'ನಲ್ಲಿ ಧರಣಿ ಮೇ 9ಕ್ಕೆ

​ಪ್ರಜಾವಾಣಿ ವಾರ್ತೆ
Published 29 ಏಪ್ರಿಲ್ 2022, 6:29 IST
Last Updated 29 ಏಪ್ರಿಲ್ 2022, 6:29 IST

ಹುಬ್ಬಳ್ಳಿ: 'ರಾಷ್ಟ್ರೀಯ ಶಿಕ್ಷಣ ನೀತಿ-2020 ಹಿಂಪಡೆಯುವಂತೆ ಒತ್ತಾಯಿಸಿ ಅಖಿಲ ಭಾರತ ಶಿಕ್ಷಣ ಉಳಿಸಿ ಸಮಿತಿ ವತಿಯಿಂದ ಮೇ 9ರಂದು ದೆಹಲಿಯ ಜಂತರ್ ಮಂತರ್'ನಲ್ಲಿ ಅಖಿಲ ಭಾರತ ಪ್ರತಿಭಟನಾ ಧರಣಿ ಹಮ್ಮಿಕೊಳ್ಳಲಾಗಿದೆ' ಎಂದು ಸಮಿತಿಯ ರಾಜ್ಯ ಘಟಕದ ಅಧ್ಯಕ್ಷ ಅಲ್ಲಮಪ್ರಭು ಬೆಟ್ಟದೂರು ಹೇಳಿದರು.

'ರಾಷ್ಟ್ರಮಟ್ಟದ ಈ ಹೋರಾಟದಲ್ಲಿ ರಾಜ್ಯ ಸಮಿತಿಯ 150 ಪ್ರತಿನಿಧಿಗಳು ಪಾಲ್ಗೊಳ್ಳಲಿದ್ದಾರೆ‌. ವಿವಿಧ ರಾಜ್ಯಗಳ ಪ್ರತಿನಿಧಿಗಳು, ಸಾಹಿತಿಗಳು, ವಿಶ್ವವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕರು, ವಿಜ್ಞಾನಿಗಳು, ಶಿಕ್ಷಣ ತಜ್ಞರು ಸಹ ಭಾಗವಹಿಸಲಿದ್ದಾರೆ' ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

'ಕೋವಿಡ್ ಹೆಚ್ಚುತ್ತಿರುವ ಈ ಸಂದರ್ಭದಲ್ಲಿ ಏಕಾಏಕಿ ನೂತನ ಶಿಕ್ಷಣ ನೀತಿ ಜಾರಿಗೆ ತರಲಾಗಿದೆ. ಸಂಸತ್ತಿನಲ್ಲಿ ಮತ್ತು ಸಾರ್ವಜನಿಕ ವಲಯದಲ್ಲಿ ಚರ್ಚೆಯೂ ನಡೆದಿಲ್ಲ. ಪೂರ್ವ ಶಿಕ್ಷಣದ ಬಗ್ಗೆ ಹೊಸ ಶಿಕ್ಷಣ ನೀತಿಯಲ್ಲಿ ಏನೂ ಹೇಳಿಲ್ಲ.
ಜಾಗತೀಕರಣದ ಪರಿಣಾಮ ಪಠ್ಯಕ್ರಮದಲ್ಲಿ ತೀವ್ರ ಮಾರ್ಪಾಡು ಮಾಡಲಾಗುತ್ತಿದೆ. ಸರ್ಕಾರ ತನಗೆ ಬೇಕಾದ ಹಾಗೆ ಪಠ್ಯಗಳನ್ನು ರೂಪಿಸುತ್ತಿದೆ. ಇವು ಮಕ್ಕಳ ಭವಿಷ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ' ಎಂದರು.

ADVERTISEMENT

'ಇತ್ತೀಚೆಗೆ ಶಿಕ್ಷಣ ವ್ಯಾಪಾರೀಕರಣವಾಗುತ್ತಿದ್ದು, ಅದಕ್ಕೆ ಮೂಲ ಆಂಗ್ಲ ಮಾಧ್ಯಮವಾಗಿದೆ. ಖಾಸಗಿಯವರ ಕೈಯ್ಯಲ್ಲಿ ಶಿಕ್ಷಣ ಕ್ಷೇತ್ರವಿದ್ದು, ಬಡ-ಮಧ್ಯಮ ವರ್ಗದವರ ಶೋಷಣೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಶಿಕ್ಷಣ ರಾಷ್ಟ್ರೀಕರಣವಾಗಬೇಕು. ಪಠ್ಯಪುಸ್ತಕದಲ್ಲಿ ವಸ್ತುನಿಷ್ಠ ಮಾಹಿತಿ ಇರಬೇಕು. ಕೇಂದ್ರ ಮತ್ತು ರಾಜ್ಯ ಸರ್ಕಾರ ಬಜೆಟ್'ನಲ್ಲಿ ಶಿಕ್ಷಣಕ್ಕೆ ಶೇ 10ರಷ್ಟು ಅನುದಾನ ಮೀಸಲಿಡಬೇಕು. ಭಾರತದ ಒಕ್ಕೂಟದ ವ್ಯವಸ್ಥೆಗೆ ತ್ರಿಭಾಷಾ ಸೂತ್ರವನ್ನು ಕಡ್ಡಾಯಗೊಳಿಸಿ, ಪ್ರಾದೇಶಿಕ ಭಾಷೆಗೆ ಒತ್ತು ನೀಡಬೇಕು ಎಂದು ಧರಣಿಯಲ್ಲಿ ಆಗ್ರಹಿಸಲಾಗುವುದು' ಎಂದರು.

ರಾಜ್ಯ ಸಮಿತಿ ಸದಸ್ಯರಾದ ನಾಗರತ್ನ ಮತ್ತು ಅಶ್ವಿನಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.