ADVERTISEMENT

ಹುಬ್ಬಳ್ಳಿ: ಕಾರ್ಮಿಕ ಸಂಘಟನೆಗಳಿಂದ ಪ್ರತಿಭಟನೆ, ಬೇಡಿಕೆ ಈಡೇರಿಕೆಗೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 9 ಜನವರಿ 2020, 10:29 IST
Last Updated 9 ಜನವರಿ 2020, 10:29 IST
ಹುಬ್ಬಳ್ಳಿಯ ಸಂಗೊಳ್ಳಿ ರಾಯಣ್ಣ ವೃತ್ತದ ಬಳಿ ಬುಧವಾರ ಕಾರ್ಮಿಕ ಮಹಿಳೆಯರು ಪ್ರತಿಭಟನೆ ನಡೆಸಿದರು
ಹುಬ್ಬಳ್ಳಿಯ ಸಂಗೊಳ್ಳಿ ರಾಯಣ್ಣ ವೃತ್ತದ ಬಳಿ ಬುಧವಾರ ಕಾರ್ಮಿಕ ಮಹಿಳೆಯರು ಪ್ರತಿಭಟನೆ ನಡೆಸಿದರು   

ಹುಬ್ಬಳ್ಳಿ: ಕೇಂದ್ರ ಸರ್ಕಾರದ ರೈತ, ಕಾರ್ಮಿಕ ಮತ್ತು ಜನ ವಿರೋಧಿ ನೀತಿಗಳನ್ನು ಖಂಡಿಸಿ ಕೇಂದ್ರೀಯ ಕಾರ್ಮಿಕ ಸಂಘಟನೆಗಳು ಬುಧವಾರ ದೇಶವ್ಯಾಪಿ ಮುಷ್ಕರಕ್ಕೆ ನೀಡಿದ್ದ ಕರೆಗೆ, ವಾಣಿಜ್ಯನಗರಿಯಲ್ಲಿ ವಿವಿಧ ಕಾರ್ಮಿಕ ಸಂಘಟನೆಗಳು ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದವು.

ನಗರದ ಡಾ. ಬಿ.ಆರ್. ಅಂಬೇಡ್ಕರ್‌ ವೃತ್ತದಿಂದ ರಾಯಣ್ಣ ವೃತ್ತದವರೆಗೆ ಕಾರ್ಮಿಕ ಸಂಘಟನೆಯ ಜಂಟಿ ಸಮಿತಿ ನೇತೃತ್ವದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದವು. ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗುತ್ತ, ಸರ್ಕಾರದ ಕಾರ್ಮಿಕ ವಿರೋಧಿ ಖಂಡಿಸುವ ಬ್ಯಾನರ್‌ ಹಾಗೂ ನಾಮಫಲಕ ಹಿಡಿದು ಆಕ್ರೋಶ ವ್ಯಕ್ತಪಡಿಸಿದರು.

ರಾಯಣ್ಣ ವೃತ್ತದ ಬಳಿ ಸಭೆ ಸೇರಿದ ಕಾರ್ಮಿಕರು, ವಿವಿಧ ಬೇಡಿಕೆಗಳ ಈಡೇರಿಕೆಗೆ ಹಕ್ಕೊತ್ತಾಯ ಮಾಡಿದರು. ಮುಂಬರುವ ಕೇಂದ್ರ ಬಜೆಟ್‌ನಲ್ಲಿ ಕಾರ್ಮಿಕರಿಗಾಗಿ ವಿಶೇಷ ಅನುದಾನ ಮೀಸಲಿಡಬೇಕು ಎಂದು ಆಗ್ರಹಿಸಿದರು.

ADVERTISEMENT

ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಮಹೇಶ ಪತ್ತಾರ ಮಾತನಾಡಿ, ‘ಕೇಂದ್ರ ಸರ್ಕಾರ ಕಾರ್ಮಿಕರ ನೀತಿ ತಿದ್ದುಪಡಿ ಮಾಡುವ ಮೂಲಕ ಕಾರ್ಮಿಕರ ಹಕ್ಕನ್ನು ಕಿತ್ತುಕೊಳ್ಳಲು ಮುಂದಾಗುತ್ತಿದೆ. ₹21 ಸಾವಿರ ಕನಿಷ್ಠ ವೇತನ ನೀಡಬೇಕೆಂದು ಐದಾರು ವರ್ಷಗಳಿಂದ ಒತ್ತಾಯಿಸುತಿದ್ದರೂ, ಅದನ್ನು ಕಾನೂನು ಮಾಡಲು ಮುಂದಾಗುತ್ತಿಲ್ಲ. ಲಾಭದಾಯಕ ಬ್ಯಾಂಕ್‌ಗಳನ್ನು ತಮ್ಮ ಹಿತಾಸಕ್ತಿಗಾಗಿ ವಿಲೀನ ಮಾಡಿ, ಅಲ್ಲಿರುವ ಉದ್ಯೋಗಿಗಳನ್ನು ನಿರುದ್ಯೋಗಿಗಳನ್ನಾಗಿ ಮಾಡುತ್ತಿದೆ’ ಎಂದು ಆರೋಪಿಸಿದರು.

ಕಾರ್ಮಿಕ ಮುಖಂಡ ದೇವಾನಂದ ಜಗಾಪುರ ಮಾತನಾಡಿ, ‘ಉದ್ಯಮಿಗಳ ಪರವಾಗಿರುವ ಮತ್ತು ಕಾರ್ಮಿಕ ವಿರೋಧಿಯಾಗಿರುವ ಕಾರ್ಮಿಕ ಕಾನೂನನ್ನು ರದ್ದು ಪಡಿಸಬೇಕು. ಅಸಂಘಟಿತ ಕಾರ್ಮಿಕರಿಗೆ ಸಾಮಾಜಿಕ ಭದ್ರತೆ ಸಿಗಬೇಕು. ಬೆಲೆ ಏರಿಕೆ ನಿಯಂತ್ರಿಸಬೇಕು. ಕೃಷಿ ಉತ್ಪನ್ನಗಳಿಗೆ ಬೆಂಬಲ ಬೆಲೆ ನಿಗದಿಪಡಿಸಬೇಕು. ಗುತ್ತಿಗೆ ಪದ್ಧತಿ ನಿಷೇಧಿಸಿ, ಸಮಾನ ಕೆಲಸಕ್ಕೆ ಸಮಾನ ವೇತನ ನಿಗದಿ ಮಾಡಬೇಕು. ಅಂಗನವಾಡಿ, ಬಿಸಿಯೂಟ, ಆಶಾ ಕಾರ್ಯಕರ್ತರನ್ನು ನೌಕರರೆಂದು ಪರಿಗಣಿಸಬೇಕು’ ಎಂದು ಒತ್ತಾಯಿಸಿದರು.

ಜನ ಜೀವನ ಎಂದಿನಂತೆ: ಶಾಲಾ–ಕಾಲೇಜುಗಳು, ಸರ್ಕಾರಿ ಕಚೇರಿಗಳು ಎಂದಿನಂತೆಯೇ ಕಾರ್ಯ ನಿರ್ವಹಿಸಿದ್ದವು. ಬಸ್‌ ಹಾಗೂ ಆಟೊ ಸಂಚಾರ ಸಹ ಎಂದಿನಂತೆಯೇ ಇತ್ತು. ಎಸ್‌ಬಿಐ ಬ್ಯಾಂಕ್‌ ನೌಕರರು ಹೊರತು ಪಡಿಸಿ ಬಹುತೇಕ ಬ್ಯಾಂಕ್‌ ನೌಕರರು ಕೆಲಸಕ್ಕೆ ಹಾಜರಾಗದೇ ಮುಷ್ಕರದಲ್ಲಿ ಪಾಲ್ಗೊಂಡಿದ್ದರು. ಅಂಚೆ ಕಚೇರಿ ಸಿಬ್ಬಂದಿ ಪ್ರತಿಭಟನೆ ನಂತರ ಕರ್ತವ್ಯಕ್ಕೆ ಹಾಜರಾದರು.

ಬೆಳಿಗ್ಗೆ ಬಂದ್‌ ಆಗಿದ್ದ ಎಪಿಎಂಸಿ: ಹಮಾಲಿ ಹಾಗೂ ವರ್ತಕರ ಸಂಘ ಮುಷ್ಕರದಲ್ಲಿ ಪಾಲ್ಗೊಂಡ ಪರಿಣಾಮ ಅಮರಗೋಳ ಎಪಿಎಂಸಿಯಲ್ಲಿ ಬುಧವಾರ ಬೆಳಿಗ್ಗೆ ವಹಿವಾಟು ಸ್ಥಗಿತಗೊಂಡಿತ್ತು. ವಿಜಯಪುರ, ಗದಗ, ಬೆಳಗಾವಿ ಜಿಲ್ಲೆಗಳಿಂದ ಕೃಷಿ ಉತ್ಪನ್ನಗಳನ್ನು ತಂದಿ ರೈತರು ಮಧ್ಯಾಹ್ನ 2ರವರೆಗೂ ಕಾದು ಕುಳಿತಿದ್ದರು. ಮಧ್ಯಾಹ್ನ ವಹಿವಾಟು ನಡೆಯಿತು.

ಪೊಲೀಸ್‌ ಕಮಿಷನರ್‌ ಆರ್‌. ದಿಲೀಪ್‌ ಅವರಿದ್ದ ವಾಹನ ಲ್ಯಾಮಿಂಗ್ಟನ್‌ ರಸ್ತೆಯಿಂದ ಸಂಗೊಳ್ಳಿ ರಾಯಣ್ಣ ವೃತ್ತಕ್ಕೆ ಬಂದಿತು. ಅಲ್ಲಿಯೇ ಯು ಟರ್ನ್‌ ತೆಗೆದುಕೊಂಡು ಉಪನಗರ ಠಾಣೆಗೆ ಹೋದರು. ಈದ್ಗಾ ಮೈದಾನ ಸುತ್ತು ಹಾಕಿ ಬಾರದೆ ಸಂಚಾರ ನಿಯಮ ಉಲ್ಲಂಘಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.