ಹುಬ್ಬಳ್ಳಿ: ಸಂಸತ್ತಿನಲ್ಲಿ ಅಂಗೀಕರಿಸಿ, ಜಾರಿಗೆ ತರಲು ಮುಂದಾಗಿರುವ ನಾಲ್ಕು ಕಾರ್ಮಿಕ ಸಂಹಿತೆಗಳನ್ನು ಕೇಂದ್ರ ಸರ್ಕಾರ ಹಿಂಪಡೆಯಬೇಕೆಂದು ಆಗ್ರಹಿಸಿ ಸಿಐಟಿಯು ಕಾರ್ಮಿಕ ಸಂಘಟನೆ ನೇತೃತ್ವದಲ್ಲಿ ವಿವಿಧ ಸಂಘಟನೆಗಳ ಪದಾಧಿಕಾರಿಗಳು, ಸದಸ್ಯರು ನಗರದಲ್ಲಿ ಬುಧವಾರ ಬೃಹತ್ ಪ್ರತಿಭಟನೆ ನಡೆಸಿದರು.
ರಾಷ್ಟ್ರದಾದ್ಯಂತ ಸೋಮವಾರ ಮುಷ್ಕರ ನಡೆದಿದ್ದು, ನಗರದಲ್ಲೂ ಕಾರ್ಮಿಕ ಸಂಘಟನೆಗಳು ಬೆಂಬಲ ವ್ಯಕ್ತಪಡಿಸಿದವು. ವಾಹನಗಳ ಸಂಚಾರ ಎಂದಿನಂತೆಯೇ ಇತ್ತು. ಅಂಗಡಿಗಳು, ವಾಣಿಜ್ಯ ಸಂಕೀರ್ಣಗಳು, ಶಾಲಾ-ಕಾಲೇಜುಗಳು ಸಹ ತೆರೆದಿದ್ದವು. ಹಮಾಲಿ ಕಾರ್ಮಿಕರು ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದ್ದರಿಂದ, ಎಪಿಎಂಸಿ ಮಾರುಕಟ್ಟೆ ಸಂಜೆ 5ರವರೆಗೂ ಸ್ತಬ್ಧವಾಗಿತ್ತು.
ನಗರದ ಸಂಗೊಳ್ಳಿ ರಾಯಣ್ಣ ವೃತ್ತದಿಂದ ಸ್ಟೇಷನ್ ರಸ್ತೆ ಬಳಿಯಿರುವ ಡಾ. ಬಿ.ಆರ್. ಅಂಬೇಡ್ಕರ್ ವೃತ್ತದವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದ ಕಾರ್ಮಿಕರು, ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಫಲಕಗಳನ್ನು ಪ್ರದರ್ಶಿಸಿದರು. ತಹಶೀಲ್ದಾರ್‌ಗೆ ಮನವಿ ಪತ್ರ ಸಲ್ಲಿಸಿದರು.
‘ಸಂಸತ್ತು ಅಂಗೀಕರಿಸಿದ ನಾಲ್ಕು ಹೊಸ ಕಾರ್ಮಿಕ ಸಂಹಿತೆಗಳನ್ನು ತಕ್ಷಣ ಹಿಂಪಡೆಯಬೇಕು ಎಂಬುದು ಪ್ರಮುಖ ಬೇಡಿಕೆಯಾಗಿದೆ. ಇವುಗಳು ಜಾರಿಯಾದರೆ ಅನ್ಯಾಯದ ವಿರುದ್ಧ ಪ್ರತಿಭಟಿಸುವ ಹಕ್ಕನ್ನು ಕಳೆದುಕೊಳ್ಳುತ್ತೇವೆ. ಕೆಲಸದ ಅವಧಿ ಹೆಚ್ಚಾಗಿ ಕಾರ್ಮಿಕರು ಶೋಷಣೆಗೆ ಒಳಗಾಗಲಿದ್ದಾರೆ. ಕಾನೂನು ಮೀರಿ ವರ್ತಿಸುವ ಉದ್ಯೋಗದಾತರು ದಂಡದಿಂದ ಪಾರಾಗುತ್ತಾರೆ. ಇದರಿಂದಾಗಿ ಕಾರ್ಮಿಕರ ಹಕ್ಕುಗಳು ದುರ್ಬಲವಾಗಲಿವೆ’ ಎಂದು ಸಿಐಟಿಯು ರಾಜ್ಯ ಕಾರ್ಯದರ್ಶಿ ಮಹೇಶ ಪತ್ತಾರ ಹೇಳಿದರು.
‘ಸಾರ್ವಜನಿಕ ವಲಯದ ಉದ್ದಿಮೆಗಳ ಖಾಸಗೀಕರಣ ಹಾಗೂ ಹೊರಗುತ್ತಿಗೆ ಆಧಾರದಲ್ಲಿ ಕಾರ್ಮಿಕರನ್ನು ನೇಮಿಸಲು ಈ ಸಂಹಿತೆಗಳು ಅವಕಾಶ ನೀಡುತ್ತವೆ. ಹೊರಗುತ್ತಿಗೆ ಕಾರ್ಮಿಕರ ಉದ್ಯೋಗ ಭದ್ರತೆ, ನ್ಯಾಯಯುತ ವೇತನಕ್ಕೆ ಧಕ್ಕೆಯಾಗಲಿದೆ. ಕಾರ್ಮಿಕರ ರಕ್ಷಣಾತ್ಮಕ ಅಂಶಗಳು, ಜೀವಿಸುವ ಹಕ್ಕು, ಮೂಲಭೂತ ಹಕ್ಕುಗಳು, ವೇತನ ಕುರಿತ ವ್ಯಾಖ್ಯಾನ, ಸಾಮಾಜಿಕ ಭದ್ರತೆ, ಮಾಲೀಕ-ಕಾರ್ಮಿಕ ಸಂಬಂಧ, ವೇತನ ಚೌಕಾಸಿ, ಆರೋಗ್ಯ ಮತ್ತು ಸುರಕ್ಷತೆ ನಿಯಮಗಳನ್ನು ಮೊಟಕುಗೊಳಿಸಲಿವೆ’ ಎಂದರು.
‘ಕಲ್ಯಾಣ ರಾಜ್ಯದ ಪರಿಕಲ್ಪನೆಗಳನ್ನು ದುರ್ಬಲಗೊಳಿಸಿ, ಕಾರ್ಮಿಕರನ್ನು ನವಗುಲಾಮಗಿರಿಗೆ ತಳ್ಳಲಿರುವ ಈ ಸಂಹಿತೆಗಳು ಕಾರ್ಮಿಕರ ಮರಣ ಶಾಸನಗಳಾಗಿವೆ’ ಎಂದು ಹೇಳಿದರು.
ಸ್ಟಿಫನ್ ಜಯಚಂದ್ರ, ಗುರುಸಿದ್ದಪ್ಪ ಅಂಬಿಗೇರ, ಚನ್ನಮ್ಮ ಡೊಳ್ಳಿ, ಬಸವಣ್ಣೆಪ್ಪ ನೀರಲಗಿ, ಸುನಂದಾ ಚಿಗರಿ, ರಮೇಶ ಭೂಸ್ಲೆ, ರಮೇಶ ಹಿರೇಗೌಡರ, ಆನಂದ ಬಡಿಗೇರ, ಜಿ.ಎಂ. ವೈದ್ಯ, ಶರಣು ಗೊನವಾರ, ಮಂಜುನಾಥ ದೊಡ್ಡಮನಿ, ಬಸೀರ್ ಮುಧೋಳ, ನಾರಾಯಣ ಆರೇರ ಇದ್ದರು.
ಅಂಚೆ ನೌಕರರ ಪ್ರತಿಭಟನೆ: ಅಖಿಲ ಭಾರತ ಅಂಚೆ ನೌಕರರ ಸಂಘಗಳ ವತಿಯಿಂದ ನಗರದ ಪ್ರಧಾನ ಅಂಚೆ ಕಚೇರಿಯಲ್ಲಿ ಪ್ರತಿಭಟನೆ ನಡೆಸಲಾಯಿತು.
ಎ.ಎನ್.ದೇಸಾಯಿ, ಎಂ.ಆರ್.ನರಗುಂದ, ಎಸ್.ಎ.ವಿರಕ್ತಮಠ, ಆರ್.ಕೆ.ಕುರಹಟ್ಟಿ, ಶ್ವೇತಾ ಕಿಣಿ, ಎ.ವಿ.ಹೊಸಮನಿ, ಗಿರೀಶ ಬೈರಪ್ಪಗೌಡರ, ಕಾಸೀಮ್ ಹೊಂಬಳ ಪಾಲ್ಗೊಂಡಿದ್ದರು.
ಸಾರ್ವಜನಿಕ ಉದ್ದಿಮೆಗಳ ಖಾಸಗೀಕರಣ ನಗದೀಕರಣ ನಿಲ್ಲಬೇಕು. ಕನಿಷ್ಠ ವೇತನ ಸಾರ್ವತ್ರಿಕ ಪಿಂಚಣಿ ಸಾಮಾಜಿಕ ಭದ್ರತೆ ಜಾರಿಗೊಳಿಸಬೇಕುಆರ್.ಎಫ್. ಕವಳಿಕಾಯಿ ಕಾರ್ಮಿಕ ಮುಖಂಡ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.