ADVERTISEMENT

ಪಿಯುಸಿ ಅರ್ಧವಾರ್ಷಿಕ ಪರೀಕ್ಷೆ ಡಿ. 9ರಿಂದ: ಒತ್ತಡದಲ್ಲಿ ಬೋಧಕರು, ವಿದ್ಯಾರ್ಥಿಗಳು

ಪಿಯುಸಿ ಅರ್ಧವಾರ್ಷಿಕ ಪರೀಕ್ಷೆ ಡಿ. 9ರಿಂದ; ವಿದ್ಯಾರ್ಥಿಗಳಿಗೆ ಹೆಚ್ಚು ಅಂಕ ಗಳಿಸುವ ಸವಾಲು

ಕಲಾವತಿ ಬೈಚಬಾಳ
Published 8 ಡಿಸೆಂಬರ್ 2021, 2:14 IST
Last Updated 8 ಡಿಸೆಂಬರ್ 2021, 2:14 IST
   

ಹುಬ್ಬಳ್ಳಿ: ಪಿಯುಸಿ ಅರ್ಧ ವಾರ್ಷಿಕ ಪರೀಕ್ಷೆ ಡಿ. 9ರಿಂದ ನಿಗದಿಯಾಗಿದೆ. ಕೆಲವು ಕಾಲೇಜುಗಳಲ್ಲಿ ಪರೀಕ್ಷೆಗೆ ಬೇಕಾದ ಅಗತ್ಯ ಬೋಧನೆ ಇನ್ನೂ ಪೂರ್ಣಗೊಂಡಿಲ್ಲ. ಶಿಕ್ಷಕರಿಗೆ ಪಾಠ ಮುಗಿಸುವ ಧಾವಂತವಿದ್ದರೆ, ವಿದ್ಯಾರ್ಥಿಗಳಿಗೆ ಹೆಚ್ಚು ಅಂಕ ಗಳಿಸುವ ಒತ್ತಡ ಎದುರಾಗಿದೆ.

ಕಳೆದ ವರ್ಷ ಕೋವಿಡ್‌ ಕಾರಣದಿಂದಾಗಿ ವಾರ್ಷಿಕ ಪರೀಕ್ಷೆ ರದ್ದಾಗಿತ್ತು. ಘಟಕ ಪರೀಕ್ಷೆ ಅಂಕ ಆಧರಿಸಿ ಫಲಿತಾಂಶ ಪ್ರಕಟಿಸಲಾಗಿತ್ತು. ರಾಜ್ಯದಲ್ಲಿ ಸದ್ಯ ಓಮೈಕ್ರಾನ್‌ ಪ್ರಕರಣಗಳು ಕಾಣಿಸಿಕೊಂಡಿದ್ದು, ಮುಂಬರುವ ದಿನಗಳಲ್ಲಿ ಪರಿಸ್ಥಿತಿ ಬಿಗಡಾಯಿಸಿ, ಮತ್ತೆ ಪರೀಕ್ಷೆ ರದ್ದಾಗಲೂಬಹುದು ಎಂಬ ಮುಂದಾಲೋಚನೆಯಿಂದ ವಿದ್ಯಾರ್ಥಿಗಳು ಅರ್ಧ ವಾರ್ಷಿಕ ಪರೀಕ್ಷೆಯಲ್ಲಿ ಹೆಚ್ಚು ಅಂಕ ಗಳಿಸುವ ಸವಾಲು ಎದುರಿಸಲೇಬೇಕಾಗಿದೆ.

ಶೈಕ್ಷಣಿಕ ವರ್ಷ ಜೂನ್‌ನಲ್ಲಿ ಆರಂಭವಾಯಿತು, ಆನ್‌ಲೈನ್‌ನಲ್ಲಿ ತರಗತಿಗಳು ನಡೆಯುತ್ತಿದ್ದವು. ಆಗಸ್ಟ್‌ನಲ್ಲಿ ಭೌತಿಕ ತರಗತಿಗಳು ಆರಂಭವಾದವು. ಈ ಬಾರಿಪದವಿಪೂರ್ವ ಶಿಕ್ಷಣ ಮಂಡಳಿಯು ಪಠ್ಯಕ್ರಮವನ್ನೂ ಕಡಿಮೆ ಮಾಡಿಲ್ಲ. ಧಾರವಾಡ ಜಿಲ್ಲೆಯ ಕೆಲವು ಗ್ರಾಮಗಳಲ್ಲಿನೆಟ್‌ವರ್ಕ್‌ ಸಮಸ್ಯೆ, ಹಲವು ವಿದ್ಯಾರ್ಥಿಗಳ ಬಳಿ ಸ್ಮಾರ್ಟ್‌ ಫೋನ್‌ ಇಲ್ಲದಿರುವುದು ಇತ್ಯಾದಿ ಕಾರಣಗಳಿಂದಾಗಿ ಆನ್‌ಲೈನ್‌ ತರಗತಿಗಳು ಹಲವರಿಗೆ ತಲುಪಿಲ್ಲ. ಆಫ್‌ಲೈನ್‌ ತರಗತಿಗಳು ಆರಂಭವಾದಾಗಿನಿಂದಲೂ ವೇಗವಾಗಿ ಸಾಗಿವೆ.

ADVERTISEMENT

‘ವಿಜ್ಞಾನ ವಿಷಯಗಳು, ಲೆಕ್ಕಶಾಸ್ತ್ರ, ಸಂಖ್ಯಾಶಾಸ್ತ್ರ ವಿಷಯಗಳನ್ನು ಅರ್ಥೈಸಿಕೊಳ್ಳುವುದು ಕಷ್ಟವಾಗಿದೆ. ಪರೀಕ್ಷೆಗೆ ಸಿದ್ಧಗೊಳ್ಳಲು ಸಮಯವೂ ಕಡಿಮೆ ಇದೆ’ ಎಂದು ವಿದ್ಯಾರ್ಥಿನಿ ಸುಮಾ ಸಂಕಷ್ಟ ತೋಡಿಕೊಂಡರು.

ಪಾಠಗಳನ್ನು ಅರ್ಥೈಸಿಕೊಳ್ಳುವುದು, ನೆನಪಿನಲ್ಲಿಟ್ಟು ಕೊಳ್ಳುವುದು, ಪುನರಾವರ್ತನೆ ಮಾಡುವುದು ಹೈರಾಣ ಕೆಲಸ. ‘ಆನ್‌ಲೈನ್‌’, ‘ಆಫ್‌ಲೈನ್‌’ ನಡುವೆ ಶೈಕ್ಷಣಿಕ ಭವಿಷ್ಯದ ದೃಷ್ಟಿಯಿಂದ ಎಲ್ಲ ವಿಧಾನಗಳಿಗೂ ಸಜ್ಜಾಗಬೇಕಾದುದು ಅನಿವಾರ್ಯ ಎಂದು ವಿದ್ಯಾರ್ಥಿಗಳು ಹೇಳಿದರು.

‘ಆನ್‌ಲೈನ್‌ ತರಗತಿಗಳಿಗೆ ಎಲ್ಲ ಮಕ್ಕಳೂ ಹಾಜರಾಗಿರಲ್ಲ. ಹಾಗಾಗಿ ಭೌತಿಕ ತರಗತಿಗಳು ಆರಂಭವಾದಾಗ ಮೊದಲಿನಿಂದಲೇ ಪಾಠ ಬೋಧನೆ ಮಾಡಲಾಗಿದೆ.ಅರ್ಧವಾರ್ಷಿಕ ಪರೀಕ್ಷೆಗೆ ನಿಗದಿಯಾಗಿರುವಷ್ಟು ಪಾಠಗಳನ್ನು ಮುಗಿಸಲು ಉಪನ್ಯಾಸಕರು ಪ್ರಯತ್ನಿಸುತ್ತಿದ್ದಾರೆ. ಇನ್ನೂ ಕೆಲವು ಪಾಠಗಳನ್ನು ಬೋಧಿಸುವುದು ಬಾಕಿ ಇದೆ. ವಿಶೇಷ ತರಗತಿ, ಹೆಚ್ಚುವರಿ ತರಗತಿ ಇತ್ಯಾದಿಗಳ ಮೂಲಕ ಪಾಠ ಮುಗಿಸುವ ಕಾಯಕದಲ್ಲಿ ತೊಡಗಿದ್ದಾರೆ. ಎಲ್ಲ ಪಾಠಗಳನ್ನು ಶೀಘ್ರ ಪೂರ್ತಿ ಮಾಡುತ್ತಾರೆ’ ಎಂದು ಧಾರವಾಡದ ಕೆಸಿಡಿ ಕಾಲೇಜಿನ ವಾಣಿಜ್ಯ ವಿಭಾಗದ ಮುಖ್ಯಸ್ಥೆ ಡಾ. ಇಂದ್ರಾಯಿಣಿ ಕಟ್ಟಿ ‘ಪ್ರಜಾವಾಣಿ’ಗೆ ತಿಳಿಸಿದರು.

‘ಅತಿಥಿ ಉಪನ್ಯಾಸಕ ಕೊರತೆ; ಬೋಧನೆ ಪೂರ್ನಗೊಂಡಿಲ್ಲ’

‘ಎಸ್ಸೆಸ್ಸೆಲ್ಸಿಗೆ ಪಠ್ಯ ಕಡಿತಗೊಳಿಸಿದಂತೆ ಪಿಯುಸಿಗೂ ಕಡಿತಗೊಳಿಸಬೇಕೆಂದು ರಾಜ್ಯ ಉಪನ್ಯಾಸಕರ ಸಂಘದಿಂದ ಪದವಿ ಪೂರ್ವ ಇಲಾಖೆಗೆ ಮನವಿ ಸಲ್ಲಿಸಲಾಗಿದೆ. ಆದರೆ, ಅರ್ಧ ವಾರ್ಷಿಕಕ್ಕೆ ಬೇಕಾದಷ್ಟು ಪಠ್ಯ ಬೋಧನೆ ಮಾಡಲೇಬೇಕೆಂದು ಇಲಾಖೆ ತಿಳಿಸಿದೆ. ಕೆಲವು ಕಾಲೇಜುಗಳಲ್ಲಿ ಅತಿಥಿ ಉಪನ್ಯಾಸಕ ಕೊರತೆ ಇರುವುದರಿಂದ ಪರೀಕ್ಷೆಗೆ ಬೇಕಾದಷ್ಟು ಪಾಠ ಬೋಧನೆ ಆಗಿಲ್ಲ. ಹಾಗಾಗಿ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳಿಗೆ ತೊಂದರೆಯಾಗಬಹುದು’ ಎಂದು ಹೆಸರು ಹೇಳಲು ಇಚ್ಛಿಸದ ಪ್ರಾಚಾರ್ಯರೊಬ್ಬರು ತಿಳಿಸಿದರು.

ಉಪನ್ಯಾಸಕರು ಪರೀಕ್ಷೆಗೆ ಬೇಕಾದ ಅಗತ್ಯ ಪಾಠ ಬೋಧನೆ ಪೂರ್ತಿ ಮಾಡಿದ್ದಾರೆ. ಡಿ. 9ರಂದು ನಡೆಯುವ ಪರೀಕ್ಷಗೆ ಇಲಾಖೆ ಅಗತ್ಯ ತಯಾರಿ ಮಾಡಿಕೊಂಡಿದೆ
– ಕೆ.ಚಿದಂಬರ, ಉಪನಿರ್ದೇಶಕ, ಪದವಿಪೂರ್ವ ಶಿಕ್ಷಣ ಇಲಾಖೆ, ಧಾರವಾಡ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.