
ಆರ್.ಅಶೋಕ
ಹುಬ್ಬಳ್ಳಿ: ‘ಮುಂದಿನ ಮುಖ್ಯಮಂತ್ರಿ ಕುರಿತು ಹೇಳಿಕೆ ನೀಡಲು ಡಾ. ಯತೀಂದ್ರ ಅವರಿಗೆ ಅಧಿಕಾರ ಕೊಟ್ಟಿದ್ದು ಯಾರು? ಅವರೊಬ್ಬ ವಿಧಾನಪರಿಷತ್ ಸದಸ್ಯ ಅಷ್ಟೇ’ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್.ಅಶೋಕ ಹೇಳಿದರು.
ಮುಂದಿನ ಮುಖ್ಯಮಂತ್ರಿಯಾಗಲು ಸತೀಶ ಜಾರಕಿಹೊಳಿ ಸಮರ್ಥರು ಎಂದು ಡಾ. ಯತೀಂದ್ರ ಹೇಳಿರುವುದಕ್ಕೆ ಗುರುವಾರ ಇಲ್ಲಿ ಪ್ರತಿಕ್ರಿಯಿಸಿದ ಅವರು, ‘ಎಲ್ಲವನ್ನೂ ಡಾ. ಯತೀಂದ್ರ ಹೇಳುವುದಾದರೆ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಕಥೆ ಏನಾಗಬೇಕು? ದೇವಾಲಯಗಳಿಗೆ ಭೇಟಿ ನೀಡಿ, ವಿಶೇಷ ಪೂಜೆ ಹಾಗೂ ತುಲಾಭಾರ ಸೇವೆ ಸಲ್ಲಿಸುತ್ತಿದ್ದಾರೆ’ ಎಂದರು.
‘ಯತೀಂದ್ರ ಹೇಳಿಕೆ ಸೇರಿ ಎಲ್ಲಾ ಬೆಳವಣಿಗೆಗಳ ಹಿಂದೆ ಸಿದ್ದರಾಮಯ್ಯ ಅವರ ಕುತಂತ್ರ ರಾಜಕಾರಣವಿದೆ. ನವೆಂಬರ್ ಬಳಿಕ ಸರ್ಕಾರವೇ ಬೀಳಬಹುದು. ನವೆಂಬರ್ ಕ್ರಾಂತಿ ವಿಷಯದ ಚರ್ಚೆಯೂ ಸಿದ್ದರಾಮಯ್ಯ ಅವರ ಮನೆಯಲ್ಲೇ ನಡೆದಿದೆ’ ಎಂದರು.
ಸತೀಶ ಜಾರಕಿಹೊಳಿ ಸಿಎಂ ಆಗಲಿ: ‘ವಾಲ್ಮೀಕಿ ಸಮುದಾಯಕ್ಕೆ ಸೇರಿದ ಸತೀಶ ಜಾರಕಿಹೊಳಿ ಅವರು ಮುಂದಿನ ಮುಖ್ಯಮಂತ್ರಿಯಾದರೆ ನಮಗೆ ಸಂತಸವಾಗಲಿದೆ. ಪಕ್ಷದಲ್ಲಿ ಅವರು ದುಡಿದಿದ್ದಾರೆ. ಅವಕಾಶ ಸಿಕ್ಕಲ್ಲಿ ಮುಖ್ಯಮಂತ್ರಿಯಾದರೆ, ಒಳ್ಳೆಯದು’ ಎಂದು ಮಾಜಿ ಸಚಿವ ಬಿ.ಶ್ರೀರಾಮುಲು ಹೇಳಿದರು.
‘ರಾಜ್ಯದಲ್ಲಿ ಅಘೋಷಿತ ತುರ್ತು ಪರಿಸ್ಥಿತಿಯಿದೆ. 1975ರಲ್ಲಿ ಇಂದಿರಾಗಾಂಧಿ ತಮ್ಮ ವಿರುದ್ಧ ಯಾರಾದರೂ ಮಾತನಾಡಿದದರೂ ಅವರ ವಿರುದ್ಧ ಕ್ರಮ ಕೈಗೊಳ್ಳುತ್ತಿದ್ದರು. ಅದೇ ರೀತಿ ಇಂದು ರಾಜ್ಯದಲ್ಲಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಅಘೋಷಿತ ತುರ್ತು ಪರಿಸ್ಥಿತಿ ಜಾರಿಮಾಡಿದೆ. ದ್ವೇಷದ ರಾಜಕಾರಣ ನಡೆದಿದೆ’ ಎಂದರು.
ಸಚಿವ ಪ್ರಿಯಾಂಕ್ ಖರ್ಗೆ ಅವರನ್ನು ಉಪಮುಖ್ಯಮಂತ್ರಿ ಮಾಡುವ ಹಿನ್ನೆಲೆಯಲ್ಲಿ ಆರ್‌ಎಸ್‌ಎಸ್ ವಿಷಯವನ್ನು ಮುಂಚೂಣಿಗೆ ತರಲಾಗಿದೆ. ಆರ್‌ಎಸ್‌ಎಸ್ ಬೆಂಬಲಿಸುವವರ ವಿರುದ್ಧ ಕಾಂಗ್ರೆಸ್ ಸರ್ಕಾರ ವಿನಾಕಾರಣ ಕ್ರಮ ಕೈಗೊಳ್ಳುತ್ತಿದೆ.–ಬಿ.ಶ್ರೀರಾಮುಲು ಮಾಜಿ ಸಚಿವ
ನವೆಂಬರ್ ಕ್ರಾಂತಿಯ ಮಾತುಗಳು ಬರೀ ಊಹಾಪೋಹ. ಪಕ್ಷದಲ್ಲಿ ಅಂಥ ಯಾವುದೇ ಚರ್ಚೆಗಳು ನಡೆದಿಲ್ಲ.–ಡಾ. ಯತೀಂದ್ರ ಸಿದ್ದರಾಮಯ್ಯ ವಿಧಾನ ಪರಿಷತ್ತು ಸದಸ್ಯ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.