ಪ್ರಾತಿನಿಧಿಕ ಚಿತ್ರ
ಹುಬ್ಬಳ್ಳಿ: ‘ಎರಡು ವರ್ಷದ ಅವಧಿಯಲ್ಲಿ ರೈಲ್ವೆ ಇಲಾಖೆಯ ವಿವಿಧ ವಲಯಗಳಲ್ಲಿ 8,440 ಮಂದಿಗೆ ಉದ್ಯೋಗ ನೀಡಲಾಗಿದೆ. ಇನ್ನೂ 3,500 ಹುದ್ದೆಗಳು ಖಾಲಿಯಿದ್ದು, ಎರಡು ವರ್ಷಗಳ ಅವಧಿಯಲ್ಲಿ ಭರ್ತಿ ಮಾಡಿಕೊಳ್ಳಲಾಗುವುದು’ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹೇಳಿದರು.
ಇಲ್ಲಿನ ಕೇಶ್ವಾಪುರದ ರೈಲ್ವೆ ಆಫಿಸರ್ಸ್ ಕ್ಲಬ್‌ನಲ್ಲಿ ರೈಲ್ವೆ, ಅಂಚೆ, ಬ್ಯಾಂಕ್ ಹಾಗೂ ಕೇಂದ್ರ ಸರ್ಕಾರದ ಇನ್ನಿತರ ಇಲಾಖೆಗಳ ಸಹಯೋಗದಲ್ಲಿ ಶನಿವಾರ ಹಮ್ಮಿಕೊಂಡಿದ್ದ ‘ರೋಜಗಾರ ಮೇಳ’ ಉದ್ಘಾಟಿಸಿ ಅವರು ಮಾತನಾಡಿದರು. ಕೇಂದ್ರದಲ್ಲಿ ಅಧಿಕಾರಕ್ಕೆ ಬರುವ ಪೂರ್ವ 10 ಲಕ್ಷ ಉದ್ಯೋಗ ನೀಡಲಾಗುವುದು ಎಂದು ಭರವಸೆ ನೀಡಲಾಗಿತ್ತು. ಹಂತ ಹಂತವಾಗಿ ಉದ್ಯೋಗಾವಕಾಶ ಕಲ್ಪಿಸಲಾಗುತ್ತಿದ್ದು, ಮುಂದಿನ ಎರಡು ವರ್ಷಗಳ ಅವಧೀಯಲ್ಲಿ ಅದು ಸಾಕಾರಗೊಳ್ಳುವ ನಿರೀಕ್ಷೆಯಿದೆ‘ ಎಂದರು.
‘ಕಳೆದ ಎರಡು ವರ್ಷಗಳ ಅವಧಿಯಲ್ಲಿ ಕೇಂದ್ರ ಸರ್ಕಾರ 16 ರೋಜಗಾರ ಮೇಳ ಆಯೋಜಿಸಿ, 7.22 ಲಕ್ಷ ಮಂದಿಗೆ ವಿವಿಧ ಇಲಾಖೆಗಳಲ್ಲಿ ಉದ್ಯೋಗ ಮಾಡಲು ನೇಮಕಾತಿ ಅದೇಶ ಪತ್ರ ವಿತರಿಸಿದೆ. ನೈರುತ್ಯ ರೈಲ್ವೆ ವಲಯದಲ್ಲಿ 1,135 ಮಂದಿಗೆ ಉದ್ಯೋಗ ನೀಡಲಾಗಿದೆ’ ಎಂದು ವಿವರಿಸಿದರು.
‘ರೈಲ್ವೆ ಹಳಿಯನ್ನು ವಿದ್ಯುದ್ದೀಕರಣ ಮಾಡುವುದರಿಂದ ಸಾಕಷ್ಟು ಇಂಧನ ಉಳಿತಾಯವಾಗಿದೆ. 2014–15ರ ಅವಧಿಗೆ ಹೋಲಿಕೆ ಮಾಡಿದರೆ, ಈಗ ಪ್ರತಿದಿನ 12 ಕಿ.ಮೀ. ರೈಲು ಮಾರ್ಗ ನಿರ್ಮಾಣವಾಗುತ್ತಿದೆ. 10 ವರ್ಷಗಳಲ್ಲಿ 43 ಸಾವಿರ ಕಿ.ಮೀ. ಹಳಿ ವಿದ್ಯುದ್ದೀಕರಣವಾಗಿದೆ. ಈ ಹಿಂದೆ ಗೇಜ್ ಪರಿವರ್ತಿಸಲು 20 ವರ್ಷ ಬೇಕಾಗಿತ್ತು. ಇಲಾಖೆಗೆ ಮೂಲಸೌಲಭ್ಯ ಒದಗಿಸಲು ರೈಲ್ವೆ ಸಚಿವಾಲಯದಿಂದ ಸಾಕಷ್ಟು ಆರ್ಥಿಕ ನೆರವು ನೀಡಲಾಗುತ್ತಿದೆ’ ಎಂದು ಹೇಳಿದರು.
ನೈರುತ್ಯ ರೈಲ್ವೆ ಹುಬ್ಬಳ್ಳಿ ವಿಭಾಗೀಯ ವ್ಯವಸ್ಥಾಪಕಿ ಬೀಲಾ ಮೀನಾ ಮಾತನಾಡಿ, ‘ಕೇಂದ್ರ ಸರ್ಕಾರದ ಅಧೀನದಲ್ಲಿ ಇರುವ ವಿವಿಧ ಇಲಾಖೆಗಳಲ್ಲಿ ಕಾರ್ಯ ನಿರ್ವಹಿಸಲು ರೋಜಗಾರ ಯೋಜನೆಯಡಿ, ಅರ್ಹ ಅಭ್ಯರ್ಥಿಗಳನ್ನು ಆಯ್ಕೆ ಮಾಡಿ ನೇಮಕಾತಿ ಪತ್ರ ನೀಡಲಾಗುತ್ತಿದೆ. ಇದು ಉದ್ಯೋಗಪತ್ರವೆಂದು ಭಾವಿಸಬಾರದು, ದೇಶದ ಸೇವೆಗೆ ದೊರೆತ ಅವಕಾಶ ಎಂದು ತಿಳಿಯಬೇಕು. ಮಾಡುವ ಕೆಲಸದಲ್ಲಿ ಕರ್ತವ್ಯ ಪ್ರಜ್ಞೆ ಹಾಗೂ ನಿಷ್ಠೆಯಿರಬೇಕು. ಎಲ್ಲ ಸಿಬ್ಬಂದಿಯೊಂದಿಗೂ ಸೌಹಾರ್ದಯುತವಾಗಿ ನಡೆದುಕೊಂಡು, ಬದುಕು ಕಟ್ಟಿಕೊಳ್ಳಬೇಕು’ ಎಂದರು.
ಬ್ಯಾಂಕ್, ಅಂಚೆ ಹಾಗೂ ರೈಲ್ವೆ ಇಲಾಖೆಗೆ ನೇಮಕವಾದ 56 ಮಂದಿಗೆ ನೇಮಕಾತಿ ಆದೇಶಪತ್ರ ವಿತರಿಸಲಾಯಿತು. ನೈಋತ್ಯ ರೈಲ್ವೆ ವಲಯದ ಪ್ರಧಾನ ವ್ಯವಸ್ಥಾಪಕ ಮುಕುಲ್‌ಸರನ್ ಮಾಥೂರ್ ಉಪಸ್ಥಿತರಿದ್ದರು.
–––
‘‘ಕಳೆದ 10 ವರ್ಷಗಳ ಅವಧಿಯಲ್ಲಿ ದೇಶದಲ್ಲಿ 23.73 ಕೋಟಿ ಉದ್ಯೋಗಿಗಳಿಂದ ಇಪಿಎಫ್ಒ ನೋಂದಣಿಯಾಗಿದೆ. ಮಹಿಳಾ ಉದ್ಯೋಗಿಗಳ ಸಂಖ್ಯೆ ಶೇ 40ರಷ್ಟು ಹೆಚ್ಚಳವಾಗಿದೆ‘‘
–ಪ್ರಲ್ಹಾದ ಜೋಶಿ, ಕೇಂದ್ರ ಸಚಿವ
‘ಉದ್ಯಮಿಯಾಗಿ, ಉದ್ಯೋಗದಾತರಾಗಿ’
‘ಖಾಸಗಿ ಕ್ಷೇತ್ರದಲ್ಲೂ ಸಾಕಷ್ಟು ಉದ್ಯೋಗಾವಕಾಶಗಳಿವೆ. ಉದ್ಯೋಗ ಬಯಸುವವರು ಸರ್ಕಾರಿ ನೌಕರಿಯ ಮೇಲೆಯೇ ಅತಿಯಾದ ಭರವಸೆ ಇಟ್ಟುಕೊಳ್ಳಬಾರದು. ಉದ್ಯಮಗಳನ್ನು ಆರಂಭಿಸಿ, ಉದ್ಯೋಗದಾತರಾಗಿ ಬೆಳೆಯಬೇಕು. ಸರ್ಕಾರಿ ಉದ್ಯೋಗಿಗಳು ಜನರೊಂದಿಗೆ ಸೌಜನ್ಯದಿಂದ ವರ್ತಿಸಬೇಕು. ಯಾವುದೇ ಒಬ್ಬ ಅಧಿಕಾರಿ ಜನರೊಂದಿಗೆ ಅನುಚಿತವಾಗಿ ವರ್ತಿಸಿದರೆ, ಇಡೀ ಇಲಾಖೆಗೆ ಕೆಟ್ಟ ಹೆಸರು ಬರುತ್ತದೆ. ಹೀಗಾಗದಂತೆ ಎಲ್ಲರೂ ಗಮನ ಹರಿಸಬೇಕು’ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.