ಪ್ರಾತಿನಿಧಿಕ ಚಿತ್ರ
ಹುಬ್ಬಳ್ಳಿ: ನೈರುತ್ಯ ರೇಲ್ವೆ ವಲಯದ ಬೆಂಗಳೂರು, ಹುಬ್ಬಳ್ಳಿ ಮತ್ತು ಮೈಸೂರು ವಿಭಾಗದಲ್ಲಿ ಸೆಪ್ಟೆಂಬರ್ ತಿಂಗಳು ಕೈಗೊಂಡಿದ್ದ ‘ನನ್ಹೆ ಫರಿಸ್ತೆ’ ಕಾರ್ಯಾಚರಣೆಯಲ್ಲಿ ರೈಲ್ವೆ ಭದ್ರತಾ ಸಿಬ್ಬಂದಿ 12 ಬಾಲಕಿಯರು ಸೇರಿ ಒಟ್ಟು 51 ಮಕ್ಕಳನ್ನು ರಕ್ಷಣೆ ಮಾಡಿದ್ದಾರೆ.
‘ವಿವಿಧ ಕಾರಣಗಳಿಂದ ಮಕ್ಕಳು ಮನೆ ಬಿಟ್ಟು ಬಂದಿದ್ದು, ವಿವಿಧ ನಿಲ್ದಾಣಗಳಲ್ಲಿ ದಿಕ್ಕು ತೋಚದೆ ಅಲೆಯುತ್ತಿದ್ದರು. ಕೆಲವರು ರೈಲಿನಲ್ಲಿಯೂ ಪ್ರಯಾಣ ಮಾಡುತ್ತಿದ್ದರು. ಅವರನ್ನು ಪತ್ತೆ ಮಾಡಿ, ಎನ್‌ಜಿಒ ಹಾಗೂ ಪೊಲೀಸರ ಮುಖಾಂತರ ಕುಟುಂಬಗಳಿಗೆ ಒಪ್ಪಿಸಲಾಗಿದೆ’ ಎಂದು ನೈರುತ್ಯ ರೈಲ್ವೆ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಮಂಜುನಾಥ ಕನಮಡಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಟಿಕೆಟ್ ಇಲ್ಲದೆ ಪ್ರಯಾಣಿಸುತ್ತಿದ್ದವರಿಂದ ₹3.22 ಲಕ್ಷ ದಂಡ ವಸೂಲಿ ಮಾಡಲಾಗಿದೆ. ಸಾಮಾನ್ಯ ಪ್ರಯಾಣಿಕರಿಗೆ ನ್ಯಾಯಯುತವಾಗಿ ಟಿಕೆಟ್‌ಗಳು ಲಭ್ಯವಾಗದಂತೆ ಬ್ಲ್ಯಾಕ್ ಮಾರ್ಕೆಟ್‌ನಲ್ಲಿ ಟಿಕೆಟ್ ಮಾರಾಟ ಮಾಡುವವರ ವಿರುದ್ಧ 35 ಪ್ರಕರಣಗಳನ್ನು ದಾಖಲಿಸಿಕೊಂಡು, 46 ಮಂದಿಯನ್ನು ಬಂಧಿಸಲಾಗಿದೆ. ₹1.19 ಲಕ್ಷ ಮೌಲ್ಯದ 96 ಟಿಕೆಟ್‌ಗಳನ್ನು ಹಾಗೂ ಅವಧಿ ಮುಗಿದ ₹2.02 ಲಕ್ಷ ಮೌಲ್ಯದ 140 ಟಿಕೆಟ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಹೇಳಿದ್ದಾರೆ.
14 ಮಂದಿಯನ್ನು ಬಂಧಿಸಿ ₹86 ಸಾವಿರ ಮೌಲ್ಯದ ನಿಷೇಧಿತ ವಸ್ತುಗಳನ್ನು, ₹86 ಸಾವಿರ ಮೌಲ್ಯದ 168 ಮದ್ಯದ ಬಾಟಲಿಗಳು, ₹41.26 ಲಕ್ಷ ಮೌಲ್ಯದ 53.958 ಕೆ.ಜಿ ಗಾಂಜಾ ವಶಪಡಿಸಿಕೊಳ್ಳಲಾಗಿದೆ. ಆರೈಕೆ ಮತ್ತು ರಕ್ಷಣೆಯ ಅಗತ್ಯವಿದ್ದ ಆರು ಮಂದಿ ವೃದ್ಧರನ್ನು ರಕ್ಷಿಸಿ ಅವರ ಕುಟುಂಬಗಳಿಗೆ ಹಾಗೂ ಎನ್‌ಜಿಒಗಳಿಗೆ ಹಸ್ತಾಂತರಿಸಲಾಗಿದೆ ಎಂದು ಮಾಹಿತಿ ನೀಡಿದ್ಧಾರೆ.
ಪ್ರಯಾಣಿಕರು ಬಿಟ್ಟುಹೋದ ಮೊಬೈಲ್, ಲ್ಯಾಪ್‌ಟಾಪ್, ಆಭರಣಗಳು ಸೇರಿ ₹17.33 ಲಕ್ಷ ಮೌಲ್ಯದ ವಸ್ತುಗಳನ್ನು ರಕ್ಷಿಸಿ, ಮಾಲೀಕರಿಗೆ ಹಸ್ತಾಂತರಿಸಲಾಗಿದೆ. ರೈಲ್ವೆ ಸ್ವತ್ತನ್ನು ವಶಪಡಿಸಿಕೊಂಡಿದ್ದ 14 ಮಂದಿಯನ್ನು ಬಂಧಿಸಲಾಗಿದೆ ಎಂದು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.