ADVERTISEMENT

ಬರದಲ್ಲಿ ಹಿತ ನೀಡಿದ ಬೇಸಿಗೆ ಮಳೆ

ಮಾವಿನ ಬೆಳೆಗೆ ಅನುಕೂಲ; ಜಾನುವಾರುಗಳಿಗೆ ನೀರು, ಮೇವು

ಬಸವರಾಜ ಸಂಪಳ್ಳಿ
Published 13 ಏಪ್ರಿಲ್ 2019, 7:40 IST
Last Updated 13 ಏಪ್ರಿಲ್ 2019, 7:40 IST
ಕಲಘಟಗಿ ತಾಲ್ಲೂಕಿನ ಮಿಶ್ರಿಕೋಟೆಯ ಮಾವಿನ ತೋಟವೊಂದರ ಗಿಡದಲ್ಲಿರುವ ಕಾಯಿಗಳು–ಪ್ರಜಾವಾಣಿ ಚಿತ್ರ
ಕಲಘಟಗಿ ತಾಲ್ಲೂಕಿನ ಮಿಶ್ರಿಕೋಟೆಯ ಮಾವಿನ ತೋಟವೊಂದರ ಗಿಡದಲ್ಲಿರುವ ಕಾಯಿಗಳು–ಪ್ರಜಾವಾಣಿ ಚಿತ್ರ   

ಹುಬ್ಬಳ್ಳಿ: ದಟ್ಟ ಬೇಸಿಗೆಯ ದಿನಮಾನದಲ್ಲಿ ದಿನಬಿಟ್ಟು ದಿನ ಧಾರಾಕಾರವಾಗಿ ಮಳೆಯಾಗುತ್ತಿರುವುದು ಜಿಲ್ಲೆಯ ರೈತ ಸಮುದಾಯ ಸೇರಿದಂತೆ ಸಾರ್ವಜನಿಕರಲ್ಲಿ ಹಿತಾನುಭ ನೀಡುತ್ತಿದೆ. ಎಲ್ಲೆಡೆ ಹಸಿರು ಚಿಗುರೊಡೆದು ವಾತಾವರಣ ತಂಪಾಗತೊಡಗಿದೆ.

ಜನವರಿ 1ರಿಂದ ಏಪ್ರಿಲ್‌ 12ರ ವರೆಗೆ ಜಿಲ್ಲೆಯಲ್ಲಿ ವಾಡಿಕೆ ಮಳೆ ಪ್ರಮಾಣ 21.8 ಮಿ.ಮೀ. ಆದರೆ, ಈ ಅವಧಿಯಲ್ಲಿ 37.5 ಮಿ.ಮೀ.ಮಳೆಯಾಗಿದೆ. ಅಂದರೆ, ಶೇ 72ರಷ್ಟು ಹೆಚ್ಚು ಮಳೆಯಾಗಿದೆ. ಏಪ್ರಿಲ್‌ನಲ್ಲಿ 10.2 ಮಿ.ಮೀ. ವಾಡಿಕೆ ಮಳೆ ಪ್ರಮಾಣ. ಆದರೆ, ಕೇವಲ 12 ದಿನಗಳಲ್ಲೇ 27.6 ಮಿ.ಮೀ. ಮಳೆಯಾಗಿದೆ.

ಮಾವಿಗೆ ಅನುಕೂಲ:‘ಮಳೆಯಾಗುತ್ತಿರುವುದರಿಂದ ಮಾವಿನ ಕಾಯಿಗಳ ಬೆಳವಣಿಗೆಗೆ ಸಹಾಯಕವಾಗಿದೆ. ಆದರೆ, ಮಳೆಯೊಂದಿಗೆ ರಭಸವಾದ ಗಾಳಿಯೂ ಬೀಸುತ್ತಿರುವುದರಿಂದ ಮಿಡಿಗಳು ಉದುರಿ ರೈತರಿಗೆ ಅಲ್ಪ ಪ್ರಮಾಣದಲ್ಲಿ ನಷ್ಟವೂ ಆಗಿದೆ. ಆಲಿಕಲ್ಲು ಮಳೆಯಿಂದ ಅಂತಹ ಹಾನಿಯಾಗಿಲ್ಲ’ ಎಂದು ತೋಟಗಾರಿಕೆ ಇಲಾಖೆ ಉಪನಿರ್ದೇಶಕ ರಾಮಚಂದ್ರ ಮಡಿವಾಳ ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

‘ಮಾವು ದ್ವೈವಾರ್ಷಿಕ ಬೆಳೆ. ಒಂದು ವರ್ಷ ಅಧಿಕ, ಇನ್ನೊಂದು ವರ್ಷ ಕಡಿಮೆ ಪ್ರಮಾಣದಲ್ಲಿ ಬೆಳೆ ಬರುತ್ತದೆ. ಜಿಲ್ಲೆಯಲ್ಲಿ ಕಳೆದ ವರ್ಷ ಭಾರಿ ಬೆಳೆ ಬಂದಿತ್ತು. ಈ ವರ್ಷ ಜಿಲ್ಲೆಯಲ್ಲಿ ಮಾವಿನ ಇಳವರಿ ಕಡಿಮೆ ಇದೆ. ಇಂತಹ ಸಂದರ್ಭದಲ್ಲಿ ಮೇಲಿಂದ ಮೇಲೆ ಮಳೆಯಾಗುತ್ತಿರುವುದು ಒಳ್ಳೆಯದೇ. ಆದರೆ, ಗಾಳಿ ಬೀಸುತ್ತಿರುವುದು ರೈತರ ಆತಂಕಕ್ಕೆ ಕಾರಣವಾಗಿದೆ’ ಎಂದು ಅವರು ಹೇಳಿದರು.

‘ಜಿಲ್ಲೆಯಲ್ಲಿ 12 ಸಾವಿರ ಹೆಕ್ಟೇರ್‌ನಲ್ಲಿ ಮಾವಿನ ತೋಟ ಇದೆ. ಅತ್ಯಧಿಕ ಪ್ರಮಾಣದಲ್ಲಿ ಅಪೂಸ್‌ ತಳಿಯ ಮಾವು ಇದೆ. ಸ್ಪಲ್ಪ ಪ್ರಮಾಣದಲ್ಲಿ ಕೇಸರ್‌ ಮತ್ತು ಮಲ್ಲಿಕಾ ತಳಿಯ ಮಾವು ಇದೆ’ ಎಂದರು.

ಜಾನುವಾರುಗಳಿಗೆ ನೀರು, ಮೇವು:ಮಳೆಯಾಗುತ್ತಿರುವುದರಿಂದ ಎರಡು ವಾರದಲ್ಲಿ ಹುಲ್ಲು ಬೆಳೆಯುವುದರಿಂದ ಬರಗಾಲದ ಈ ದಿನಗಳಲ್ಲಿ ಜಾನುವಾರುಗಳಿಗೆ ಅದರಲ್ಲೂ ವಿಶೇಷವಾಗಿ ಕುರಿಗಾಹಿಗಳಿಗೆ ಹೆಚ್ಚಿನ ಅನುಕೂಲವಾಗಲಿದೆ. ಕೃಷಿ ಹೊಂಡ, ಕೆರೆಗಳಲ್ಲಿ ನೀರು ಸಂಗ್ರಹವಾಗುವುದರಿಂದ ಜಾನುವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆಯೂ ನೀಗಲಿದೆ ಎಂದು ಜಂಟಿ ಕೃಷಿ ನಿರ್ದೇಶಕ ಟಿ.ಎಸ್‌.ರುದ್ರೇಶಪ್ಪ ‘ಪ್ರಜಾವಾಣಿ’ಗೆ ತಿಳಿಸಿದರು.

ಮೇಲಿಂದ ಮೇಲೆ ಮಳೆಯಾಗುತ್ತಿರುವುದರಿಂದ ಹೊಲಗಳನ್ನು ಹಸನುಗೊಳಿಸಿ, ಉಳಿಮೆ ಮಾಡಲು ರೈತರಿಗೆ ಅನುಕೂಲವಾಗಲಿದೆ. ಈ ಸಂದರ್ಭದಲ್ಲಿ ಹೊಲದಲ್ಲಿ ಯಾವುದೇ ಫಸಲು ಇರುವುದಿಲ್ಲ. ಬಿತ್ತನೆ ಕಾರ್ಯವೂ ಇರುವುದಿಲ್ಲ. ಹೀಗಾಗಿ ಮಳೆಯಾದರೆ ಹೆಚ್ಚು ಅನುಕೂಲ. ಭೂಮಿ ಹಸಿರಾಗುವುದರಿಂದ ಕಾವೇರಿರುವ ಭೂಮಿ ತಣ್ಣಗಾಗುತ್ತದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.