ADVERTISEMENT

ರಭಸದ ಗಾಳಿ, ಮಳೆ: ನೆಲಕಚ್ಚಿದ ಟೊಮೆಟೊ, ಹಾಗಲಕಾಯಿ, ಭತ್ತ

​ಪ್ರಜಾವಾಣಿ ವಾರ್ತೆ
Published 9 ಅಕ್ಟೋಬರ್ 2024, 14:18 IST
Last Updated 9 ಅಕ್ಟೋಬರ್ 2024, 14:18 IST
ಧಾರವಾಡ ತಾಲ್ಲೂಕಿನ ಕಮಲಾಪುರದ ಜಮೀನಿನಲ್ಲಿ ರೈತರೊಬ್ಬರು ಬೆಳೆದ ಹಾಗಲಕಾಯಿ ಬಳ್ಳಿ ನೆಲಕಚ್ಚಿರುವುದು
–ಪ್ರಜಾವಾಣಿ ಚಿತ್ರ
ಧಾರವಾಡ ತಾಲ್ಲೂಕಿನ ಕಮಲಾಪುರದ ಜಮೀನಿನಲ್ಲಿ ರೈತರೊಬ್ಬರು ಬೆಳೆದ ಹಾಗಲಕಾಯಿ ಬಳ್ಳಿ ನೆಲಕಚ್ಚಿರುವುದು –ಪ್ರಜಾವಾಣಿ ಚಿತ್ರ    

ಹುಬ್ಬಳ್ಳಿ: ಧಾರವಾಡ ಜಿಲ್ಲೆ, ಹುಬ್ಬಳ್ಳಿ ನಗರ ಹಾಗೂ ಉತ್ತರ ಕನ್ನಡ ಜಿಲ್ಲೆಯಾದ್ಯಂತ ಬುಧವಾರ ಬೆಳಗಿನ ಜಾವದಲ್ಲಿ ಗುಡುಗು, ಸಿಡಿಲು ಸಹಿತ ಧಾರಾಕಾರ ಮಳೆಯಾಗಿದೆ. ವಿಜಯನಗರ ಜಿಲ್ಲೆ ಹೂವಿನಹಡಗಲಿ ತಾಲ್ಲೂಕಿನಲ್ಲಿ ರಭಸದ ಗಾಳಿಗೆ ನೂರಾರು ಎಕರೆ ಭತ್ತದ ಗದ್ದೆಗೆ ಹಾನಿಯಾಗಿದೆ.

ಧಾರಾಕಾರ ಮಳೆಗೆ ಧಾರವಾಡ ತಾಲ್ಲೂಕಿನ ಕಮಲಾಪುರದಲ್ಲಿ ಜಮೀನಿನಲ್ಲಿ ಟೊಮೆಟೊ ಹಾಗೂ ಹಾಗಲಕಾಯಿ ಬೆಳೆ ನೆಲಕಚ್ಚಿವೆ. ಜಿಲ್ಲೆಯ ವಿವಿಧೆಡೆ ಉತ್ತಮ ಮಳೆಯಾಗಿದ್ದು ಕಲಘಟಗಿ ಭಾಗದಲ್ಲಿ ಹೆಚ್ಚು 5.5 ಸೆಂ.ಮೀ ಮಳೆಯಾಗಿದೆ.

ಹುಬ್ಬಳ್ಳಿ ನಗರದಲ್ಲಿ ಬೆಳಗಿನ ಜಾವ ಗುಡುಗು, ಸಿಡಿಲಿನ ಅಬ್ಬರದೊಂದಿಗೆ ಒಂದು ತಾಸಿಗೂ ಹೆಚ್ಚು ಸಮಯ ಧಾರಾಕಾರ ಮಳೆ ಬಿದ್ದಿದೆ.

ADVERTISEMENT

ಉತ್ತರ ಕನ್ನಡ ಜಿಲ್ಲೆಯ ಬಹುತೇಕ ಕಡೆಗಳಲ್ಲಿ ತಡರಾತ್ರಿ ಮಳೆಯಾಗಿದೆ. ಹೊನ್ನಾವರ, ಶಿರಸಿ, ಸಿದ್ದಾಪುರ ಭಾಗದಲ್ಲಿ ಸಾಯಂಕಾಲ ಮಳೆಯಾಗಿದೆ. ಗದಗ ಜಿಲ್ಲೆಯ ಮುಂಡರಗಿ ತಾಲ್ಲೂಕಿನ ಡಂಬಳ ಹೋಬಳಿ ಹಾಗೂ ಲಕ್ಷ್ಮೇಶ್ವರ ತಾಲ್ಲೂಕಿನಲ್ಲಿ ಮಂಗಳವಾರ ರಾತ್ರಿ ಉತ್ತಮ ಮಳೆಯಾಗಿದೆ.

ವಿಜಯನಗರ ಜಿಲ್ಲೆ ಹೂವಿನಹಡಗಲಿಯಲ್ಲಿ ತಾಲ್ಲೂಕಿನ ನದಿ ತೀರದ ಗ್ರಾಮಗಳಲ್ಲಿ ಮಂಗಳವಾರ ರಾತ್ರಿ ಮತ್ತು ಬುಧವಾರ ಬೆಳಗಿನ ಜಾವ ಸುರಿದ ಬಿರುಗಾಳಿ ಸಹಿತ ಮಳೆಗೆ ನೂರಾರು ಎಕರೆ ಭತ್ತದ ಬೆಳೆ ಹಾನಿಗೀಡಾಗಿದೆ. ಬ್ಯಾಲಹುಣ್ಸಿ, ಮಕರಬ್ಬಿ, ಹಿರೇಬನ್ನಿಮಟ್ಟಿ, ಅಂಗೂರು, ಕೋಟಿಹಾಳ ಮೊದಲಾದ ಗ್ರಾಮಗಳಲ್ಲಿ ಕಟಾವಿಗೆ ಬಂದಿರುವ ಭತ್ತದ ಬೆಳೆ ನೆಲಕ್ಕೊರಗಿದೆ.

‘ಗಾಳಿ ಮಳೆಯಿಂದ ರೈತರಿಗೆ ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿದೆ. ಅಧಿಕಾರಿಗಳು ಬೆಳೆಹಾನಿ ಸಮೀಕ್ಷೆ ನಡೆಸಿ ರೈತರಿಗೆ ಪರಿಹಾರ ದೊರಕಿಸಿಕೊಡಬೇಕು’ ಎಂದು ಬ್ಯಾಲಹುಣ್ಸಿ ಗ್ರಾಮದ ರೈತ ಲಕ್ಷ್ಮಣ ಬಾರ್ಕಿ ಆಗ್ರಹಿಸಿದ್ದಾರೆ.

ಮೆಕ್ಕೆಜೋಳ ಕಟಾವು ಮಾಡಿರುವ ರೈತರು ಫಸಲನ್ನು ಮಳೆಯಿಂದ ರಕ್ಷಿಸಿಕೊಳ್ಳಲು ಪರದಾಡಿದರು. ರಸ್ತೆ, ಕಣಗಳಲ್ಲಿ ಒಣಗಲು ಹಾಕಿರುವ ಮೆಕ್ಕೆಜೋಳದ ರಾಶಿಗಳನ್ನು ತಾಡಪಾಲಿನಿಂದ ಮುಚ್ಚಿ ರಕ್ಷಿಸಿದರು.

ಹೂವಿನಹಡಗಲಿ ತಾಲ್ಲೂಕಿನ ಬ್ಯಾಲಹುಣ್ಸಿಯಲ್ಲಿ ಗಾಳಿ ಮಳೆಯಿಂದ ಕಟಾವಿನ ಹಂತಕ್ಕೆ ಬಂದ ಭತ್ತದ ತೆನೆಗಳು ನೆಲಕ್ಕೆ ಒರಗಿರುವುದು –ಪ್ರಜಾವಾಣಿ ಚಿತ್ರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.