ADVERTISEMENT

ಮೈಸೂರು | ಬಿರುಸು ಮಳೆ; ತಂಪಾದ ಇಳೆ

​ಪ್ರಜಾವಾಣಿ ವಾರ್ತೆ
Published 11 ಮೇ 2024, 16:05 IST
Last Updated 11 ಮೇ 2024, 16:05 IST
ಹುಬ್ಬಳ್ಳಿಯಲ್ಲಿ ಶನಿವಾರ ಸುರಿದ ಮಳೆಯಲ್ಲಿ ದ್ವಿಚಕ್ರ ವಾಹನ ಸವಾರರೊಬ್ಬರು ಕೊಡೆ ಹಿಡಿದು ಸಾಗಿದರು
ಹುಬ್ಬಳ್ಳಿಯಲ್ಲಿ ಶನಿವಾರ ಸುರಿದ ಮಳೆಯಲ್ಲಿ ದ್ವಿಚಕ್ರ ವಾಹನ ಸವಾರರೊಬ್ಬರು ಕೊಡೆ ಹಿಡಿದು ಸಾಗಿದರು   

ಮೈಸೂರು/ಹುಬ್ಬಳ್ಳಿ: ರಾಜ್ಯದ ಹಲವು ಜಿಲ್ಲೆಗಳಲ್ಲಿ ಶನಿವಾರ ಗುಡುಗು, ಸಿಡಿಲಿನ ಬಿರುಸಾದ ಮಳೆ ಸುರಿದಿದೆ. ಬಿಸಿಲಿನಿಂದ ಬಸವಳಿದಿದ್ದ ಜನರಿಗೆ ತಂಪಾದ ವಾತಾವರಣವು ಹರ್ಷ ತಂದಿದೆ. ಬಹುತೇಕ ಕಡೆ ಜನರು ಮಳೆ ಕಂಡು ಸಂಭ್ರಮಿಸಿದ್ದಾರೆ.

ಧಾರವಾಡ, ಬೆಳಗಾವಿ, ಉತ್ತರ ಕನ್ನಡ, ವಿಜಯಪುರ, ಗದಗ, ಚಿತ್ರದುರ್ಗ ಜಿಲ್ಲೆಯಲ್ಲಿ ಉತ್ತಮ ಮಳೆ ಸುರಿಯಿತು. ಮೈಸೂರು ಭಾಗದ ಮೈಸೂರು, ಹಾಸನ, ಚಾಮರಾಜನಗರ, ಮಂಡ್ಯ ಹಾಗೂ ಕೊಡಗಿನಲ್ಲಿ ಶುಕ್ರವಾರ ರಾತ್ರಿ ಮತ್ತು ಶನಿವಾರ ಬಿರುಸಿನ ಮಳೆಯಾಗಿದೆ. ರೈತರು ಕೃಷಿ ಚಟುವಟಿಕೆಗೆ ಸಿದ್ಧತೆ ಕೈಗೊಂಡಿದ್ದಾರೆ.

ಹುಬ್ಬಳ್ಳಿಯಲ್ಲಿ ಬೆಳಿಗ್ಗೆಯಿಂದ ಮೋಡ ಕವಿದ ವಾತಾವರಣವಿತ್ತು. ಮಧ್ಯಾಹ್ನ 3.30ರ ಸುಮಾರಿಗೆ ಧಾರಾಕಾರವಾಗಿ ಸುರಿಯತೊಡಗಿದ ಮಳೆಯು ರಾತ್ರಿ 8ರ ನಂತರವೂ ಮುಂದುವರೆಯಿತು. ಬಿರುಗಾಳಿ, ಗುಡುಗು, ಸಿಡಿಲಿನ ಆರ್ಭಟ ಸಹಿತ ಸುರಿದ ಮಳೆಯು ಇಡೀ ವಾತಾವರಣ ಹಿತಕರಗೊಳಿಸಿತು.

ADVERTISEMENT

ಕೆಲ ದ್ವಿಚಕ್ರ ವಾಹನ ಸವಾರರು ಮಳೆಯಲ್ಲೇ ಸಾಗಿದರೆ, ಇನ್ನೂ ಕೆಲವರು ಅಂಗಡಿ ಬದಿಗಳಲ್ಲಿ, ಮೇಲ್ಸೇತುವೆಗಳ ಕೆಳಗಡೆ ಆಶ್ರಯ ಪಡೆದರು. ಹಲವೆಡೆ ಮಳೆ ನೀರು ರಸ್ತೆ ಪೂರ್ತಿ ಆವರಿಸಿಕೊಂಡ ಕಾರಣ ಬಸ್‌, ಕಾರು, ಆಟೊರಿಕ್ಷಾ ಸೇರಿದಂತೆ ಇತರ ವಾಹನಗಳು ಪ್ರಯಾಸದಿಂದ ಸಾಗಿದವು. ಹುಬ್ಬಳ್ಳಿ ನಗರ ಸುತ್ತಮುತ್ತ 30ಕ್ಕೂ ಹೆಚ್ಚು ಕಡೆ ಮರಗಳು ಉರುಳಿ ಬಿದ್ದಿವೆ. ವಿದ್ಯುತ್ ಪೂರೈಕೆ ಕಡಿತಗೊಂಡಿತು. ಕೆಲ ತಗ್ಗು ಪ್ರದೇಶದ ಹಲವು ಮನೆಗಳಿಗೆ ನೀರು ನುಗ್ಗಿತು.

ಬೆಳಗಾವಿ ನಗರ ಸೇರಿದಂತೆ ಜಿಲ್ಲೆಯ ನಿಪ್ಪಾಣಿ, ಮುನವಳ್ಳಿ, ಖಾನಾಪುರ, ಚನ್ನಮ್ಮನ ಕಿತ್ತೂರಿನಲ್ಲಿ ಗುಡುಗು–ಮಿಂಚು ಸಹಿತ ಉತ್ತಮ ಮಳೆ ಸುರಿದರೆ, ಬೈಲಹೊಂಗಲದಲ್ಲಿ ಸಾಧರಣ ಮಳೆಯಾಯಿತು.

ಉತ್ತರ ಕನ್ನಡ ಜಿಲ್ಲೆಯ ಹಳಿಯಾಳ, ಜೊಯಿಡಾ, ಮುಂಡಗೋಡ ಭಾಗದಲ್ಲಿ ಗುಡುಗು ಸಹಿತ ಮಳೆಯಾದರೆ, ದಾಂಡೇಲಿ, ಶಿರಸಿ, ಯಲ್ಲಾಪುರದಲ್ಲಿ ತುಂತುರು ಮಳೆ ಸುರಿಯಿತು. ಚಿಗಳ್ಳಿ ಸೇರಿ ಕೆಲ ಗ್ರಾಮಗಳಲ್ಲಿ ಬಿರುಸಿನ ಮಳೆಯಾಯಿತು. ವಿಜಯಪುರ ನಗರದಲ್ಲಿ ಸಾಧಾರಣ ಮಳೆಯಾಯಿತು. 

ಮೈಸೂರು ಭಾಗದಲ್ಲಿ ಬಿರುಸಿನ ಮಳೆ: ಮೈಸೂರು ಜಿಲ್ಲಾ ಕೇಂದ್ರ ಹಾಗೂ ಸುತ್ತಮುತ್ತ, ಕೊಡಗು ಜಿಲ್ಲೆಯ ಮಡಿಕೇರಿ, ಶನಿವಾರಸಂತೆ, ನಾಪೋಕ್ಲು, ಸುಂಟಿಕೊಪ್ಪ ಭಾಗದಲ್ಲೂ ಧಾರಾಕಾರ ಮಳೆಯಾಗಿದೆ.

ಚಾಮರಾಜನಗರ, ಯಳಂದೂರು ಮತ್ತು ಗುಂಡ್ಲುಪೇಟೆ ತಾಲ್ಲೂಕಿನ ವಿವಿಧೆಡೆ ಬಿರುಗಾಳಿ ಸಹಿತ ಮಳೆಯಾಗಿದೆ. ಹಾಸನ ಜಿಲ್ಲೆಯ ಅರಕಲಗೂಡು ತಾಲ್ಲೂಕಿನ ಕೊಣನೂರು ಕೆರೆಕೋಡಿ, ಹಂಡ್ರಂಗಿ, ಬೊಮ್ಮನಹಳ್ಳಿಯಲ್ಲಿ ಹಾಗೂ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದಲ್ಲೂ ಮಳೆಯಾಯಿತು.

ಕಲಬುರಗಿ ವರದಿ: ಕಲ್ಯಾಣ ಕರ್ನಾಟಕದ ರಾಯಚೂರು ಹಾಗೂ ಕೊಪ್ಪಳ ಜಿಲ್ಲೆಯ ವಿವಿಧೆಡೆ ಶನಿವಾರ ಸಂಜೆ ಮಳೆ ಸುರಿಯಿತು.  

ಕುಷ್ಟಗಿ ತಾಲ್ಲೂಕಿನ ಹಿರೇಮುಕರ್ತಿನಾಳ ಸೀಮಾಂತರದಲ್ಲಿ ಕನಕರಾಯಪ್ಪ ಕಾಟಾಪುರ (28) ಎಂಬುವರು ಸಿಡಿಲಿನಿಂದ ಮೃತಪಟ್ಟಿದ್ದಾರೆ. ರಾಯಚೂರು ಜಿಲ್ಲೆಯ ಲಿಂಗಸುಗೂರು, ಸಿರವಾರ ಹಾಗೂ ದೇವದುರ್ಗ ಪಟ್ಟಣದಲ್ಲಿ ಮಳೆಯಾಗಿದೆ.

ಉಪ್ಪಿನಂಗಡಿ (ದಕ್ಷಿಣ ಕನ್ನಡ) ವರದಿ: ಗುಂಡ್ಯ, ಇಚ್ಲಂಪಾಡಿ ಪರಿಸರದಲ್ಲಿ ಶನಿವಾರ ಗುಡುಗು ಸಿಡಿಲಿನಿಂದ ಕೂಡಿದ ಧಾರಾಕಾರ ಮಳೆಯಾಗಿದೆ. ಕಡಬ ತಾಲ್ಲೂಕಿನ ಇಚ್ಲಂಪಾಡಿಯಲ್ಲಿ ಸಿಡಿಲಿನಿಂದ ಒಬ್ಬ ಕಾರ್ಮಿಕ ಮೃತಪಟ್ಟಿದ್ದು, ಇಬ್ಬರು ಗಾಯಗೊಂಡಿದ್ದಾರೆ.

‘ಮೃತರನ್ನು ಉತ್ತರ ಪ್ರದೇಶದ ಚೈನ್‌ಪುರ್‌ನ ಶ್ರೀಕಿಸೂನ್‌ (56) ಎಂದು ಗುರುತಿಸಲಾಗಿದೆ. ಗಾಯಗೊಂಡ ಇಬ್ಬರು ಕಾರ್ಮಿಕರ ಹೆಸರು ವಿಳಾಸ ಗೊತ್ತಾಗಿಲ್ಲ’ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

‘ಈ ಕಾರ್ಮಿಕರು ಇಚ್ಲಂಪಾಡಿಯ ಬಳಿ ಗುಂಡ್ಯ ಹೊಳೆಯಲ್ಲಿ ಮರಳು ತೆಗೆಯುವ ಕೆಲಸ ಮಾಡುತ್ತಿದ್ದರು. ನದಿ ಬದಿಯಲ್ಲಿ ಶೆಡ್‌ನಲ್ಲಿ ಇವರು ಉಳಿದುಕೊಂಡಿದ್ದರು. ಮೂವರು ಕಾರ್ಮಿಕರು ಶೆಡ್‌ನಲ್ಲಿದ್ದಾಗ ಸಿಡಿಲು ಬಡಿದಿದೆ. ಒಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದು, ಇನ್ನಿಬ್ಬರು ಗಾಯಾಳುಗಳನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಚಿತ್ರದುರ್ಗ ವರದಿ: ಜಿಲ್ಲೆಯ ವಿವಿಧೆಡೆ ಶುಕ್ರವಾರ ರಾತ್ರಿ ಉತ್ತಮ ಮಳೆಯಾಗಿದೆ. ಬಿರುಗಾಳಿಗೆ ಅಲ್ಲಲ್ಲಿ ಮರಗಳು ಉರುಳಿ ಬಿದ್ದಿವೆ. ಹೊಸದುರ್ಗ ತಾಲ್ಲೂಕಿನ ಮಾಡದಕೆರೆಯಲ್ಲಿ 4.2 ಸೆಂ.ಮೀ, ಶ್ರೀರಾಂಪುರದಲ್ಲಿ 4 ಸೆಂ.ಮೀ., ಚಿತ್ರದುರ್ಗ ತಾಲ್ಲೂಕಿನಲ್ಲಿ 3.4 ಸೆಂ.ಮೀ ಮಳೆಯಾಗಿದೆ.

ದಾವಣಗೆರೆ ವರದಿ: ಸಂತೇಬೆನ್ನೂರು ಸೇರಿ ಸುತ್ತಲಿನ ಗ್ರಾಮಗಳಲ್ಲಿ ಶನಿವಾರ ಮುಂಜಾನೆ ಹದ ಮಳೆ ಸುರಿದಿದೆ. ಸಂತೇಬೆನ್ನೂರಿನಲ್ಲಿ 2.4 ಸೆಂ.ಮೀ. ಮಳೆ ದಾಖಲಾಗಿದೆ. 

ಹುಬ್ಬಳ್ಳಿಯ ವಿದ್ಯಾನಗರದ ಬಿಆರ್‌ಟಿಎಸ್ ಮಾರ್ಗ ಮತ್ತು ಅದರ ಪಕ್ಕದ ರಸ್ತೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿಯಿತು
ಹುಬ್ಬಳ್ಳಿಯಲ್ಲಿ ಶನಿವಾರ ಸುರಿದ ಮಳೆಯಿಂದ ತೋಳನಕೆರೆಯ ರೇಣುಕಾನಗರ ಕಡೆಯ ದ್ವಾರದ ಬಳಿ ರಸ್ತೆಯಲ್ಲಿ ನೀರು ನಿಂತು ಕೆರೆಯಂತಾಗಿತ್ತು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.