ADVERTISEMENT

ಬೆಳೆಯೂ ಹೋಯ್ತು.. ಬದುಕು ಘಾಸಿಯಾಯ್ತು...

ಹಂಚಿನಾಳ ಗ್ರಾಮದ ಜನಜೀವನ ಅಸ್ತವ್ಯಸ್ತಗೊಳಿಸಿದ ಬೆಣ್ಣಿಹಳ್ಳ ಪ್ರವಾಹ

​ಪ್ರಜಾವಾಣಿ ವಾರ್ತೆ
Published 11 ಆಗಸ್ಟ್ 2019, 19:30 IST
Last Updated 11 ಆಗಸ್ಟ್ 2019, 19:30 IST
ಹಂಚಿನಾಳ ಗ್ರಾಮದಲ್ಲಿ ಮಳೆಯಬ್ಬರಕ್ಕೆ ಕುಸಿದಿರುವ ಉಳವಪ್ಪ ಸಹದೇವಪ್ಪ ತಂಬೂರ ಅವರ ಮನೆ 
ಹಂಚಿನಾಳ ಗ್ರಾಮದಲ್ಲಿ ಮಳೆಯಬ್ಬರಕ್ಕೆ ಕುಸಿದಿರುವ ಉಳವಪ್ಪ ಸಹದೇವಪ್ಪ ತಂಬೂರ ಅವರ ಮನೆ    

ಕುಂದಗೋಳ: ಬೇಸಿಗೆಯಲ್ಲಿ ಒಂದನಿ ನೀರು ಕೊಡದ ಬೆಣ್ಣಿಹಳ್ಳ ಧಾರಾಕಾರ ಮಳೆಗೆ ಭೋರ್ಗರೆದು ತನ್ನ ತೀರದ ಹಳ್ಳಿಗಳ ಜನಜೀವನವನ್ನು ಅಸ್ತವ್ಯಸ್ತಗೊಳಿಸಿದೆ. ಕುಂದಗೋಳ ತಾಲ್ಲೂಕಿನಲ್ಲಿ ಈ ಹಳ್ಳದ ಪ್ರವಾಹಕ್ಕೆ ಅತ್ಯಂತ ಸಂಕಷ್ಟಕ್ಕೀಡಾದ ಗ್ರಾಮ ಹಂಚಿನಾಳ.

ಹಳ್ಳದಂಚಿನಲ್ಲಿರುವ ಮುಳ್ಳೂರು, ಇಂಗಳದಾಳ, ದೇವನೂರ, ಶಿರೂರ ಗ್ರಾಮಗಳ ಬೆಳೆಗಳನ್ನು ಆಹುತಿ ತೆಗೆದುಕೊಂಡಿದ್ದರೆ, ಹಂಚಿನಾಳದಲ್ಲಿ ಮಾತ್ರ ಬೆಳೆ ಜತೆಗೆ ಜನರ ಜೀವನವನ್ನು ಇನ್ನಿಲ್ಲದಂತೆ ಘಾಸಿಗೊಳಿಸಿದೆ.

ರಾತ್ರೊ ರಾತ್ರಿ ಮನೆಗೆ ನೀರು ನುಗ್ಗಿದ್ದರಿಂದ ಆತಂಕಗೊಂಡ ಜನ, ತೊಟ್ಟ ಬಟ್ಟೆಯಲ್ಲೇ ಊರಿನ ಶಾಲೆಗೆ ಬಂದು ಆಶ್ರಯ ಪಡೆದಿದ್ದಾರೆ. ಗ್ರಾಮದಲ್ಲಿ 30ಕ್ಕೂ ಅಧಿಕ ಮನೆಗಳು ಕುಸಿದಿದ್ದು, ತಾಲ್ಲೂಕು ಆಡಳಿತ ಐದು ದಿನದ ಹಿಂದೆ ಶಾಲೆಯಲ್ಲಿ ಪುನರ್ವಸತಿ ಕೇಂದ್ರ ತೆರೆದು 75 ಮಂದಿಗೆ ತಾತ್ಕಾಲಿಕ ಆಶ್ರಯ ಕಲ್ಪಿಸಿದೆ.

ADVERTISEMENT

ಅಳಿದುಳಿದ ವಸ್ತುಗಳ ಶೋಧ:ಬಿಡದೆ ಸುರಿಯುತ್ತಿದ್ದ ಮಳೆ ಭಾನುವಾರ ಕೊಂಚ ಬಿಡುವು ನೀಡಿದ್ದರಿಂದ ಹಳ್ಳದ ನೀರಿನ ಪ್ರಮಾಣ ಸ್ವಲ್ಪ ತಗ್ಗಿದೆ. ಪುನರ್ವಸತಿ ಕೇಂದ್ರದಲ್ಲಿದ್ದವರು ಮನೆಯ ಅವಶೇಷಗಳಡಿ ಅಳಿದುಳಿದ ವಸ್ತುಗಳನ್ನು ಹುಡುಕಾಡಿ ಸುರಕ್ಷಿತ ಸ್ಥಳಗಳಿಗೆ ಸಾಗಿಸುತ್ತಿದ್ದರೆ, ಜಲಾವೃತಗೊಂಡಿದ್ದ ಜಮೀನುಗಳ ಮಾಲೀಕರು ಬಿತ್ತನೆಯ ಕುರುಹು ಇಲ್ಲದಂತಾಗಿರುವ ಜಮೀನಿನ ಮುಂದೆ ನಿಂತು ವಿಧಿಯನ್ನು ಶಪಿಸುತ್ತಿದ್ದರು.

‘ಹಳ್ಳದ ಆಸುಪಾಸಿನ ಜಮೀನುಗಳಲ್ಲಿ ಬೆಳೆದಿದ್ದ ಹತ್ತಿ, ಶೇಂಗಾ, ಮೆಣಸಿನಗಿಡ ಹಾಗೂ ಹೆಸರು ಬೆಳೆ ಹೇಳ ಹೆಸರಿಲ್ಲದಂತೆ ಪ್ರವಾಹದಲ್ಲಿ ಕೊಚ್ಚಿ ಹೋಗಿದೆ. ಸಾಲ ಮಾಡಿ ಬಿತ್ತಿದ್ದ ಬೆಳೆ, ಕೈ ಸೇರುವ ಮುನ್ನವೇ ನಾಶವಾಗಿದೆ. ಮತ್ತೆ ಬಿತ್ತನೆ ಮಾಡಲು ಯಾರು ಸಾಲ ಕೊಡುತ್ತಾರೆ. ಬೆಣ್ಣಿಹಳ್ಳ ನಮ್ಮ ಬದುಕಿನ ಮೇಲೆ ಬರೆ ಎರೆದು ಮೂರಾಬಟ್ಟೆಗೊಳಿಸಿದೆ’ ಎಂದು ರೈತ ವೀರಪ್ಪ ಚನ್ನಪ್ಪ ಆಡ್ರಿಯವರ ‘ಪ್ರಜಾವಾಣಿ’ಯೊಂದಿಗೆ ಅಳಲು ತೋಡಿಕೊಂಡರು.

ಇಸ್ಕಾನ್‌ನಿಂದ ಆಹಾರ:ಪುನರ್ವಸತಿ ಕೇಂದ್ರದಲ್ಲಿರುವ ಸಂತ್ರಸ್ತರಿಗೆ ತಾಲ್ಲೂಕು ಆಡಳಿತದ ಜತೆಗೆ, ಇಸ್ಕಾನ್‌ನಿಂದಲೂ ಮಧ್ಯಾಹ್ನದ ಬಿಸಿಯೂಟದ ವ್ಯವಸ್ಥೆ ಮಾಡಲಾಗಿದೆ.

‘ಇದುವರೆಗೆ ಮಕ್ಕಳಷ್ಟೇ ಶಾಲೆಯ ಬಿಸಿಯೂಟ ಮಾಡುತ್ತಿದ್ದರು. ಪ್ರವಾಹದಿಂದಾಗಿ ನಾವು ಕೂಡ ಈ ಶಾಲೆಯಲ್ಲೇ ಉಳಿದುಕೊಂಡು ಮಕ್ಕಳೊಂದಿಗೆ ಬಿಸಿಯೂಟ ಮಾಡಬೇಕಾದ ಪರಿಸ್ಥಿತಿ ಬರುತ್ತದೆ ಎಂದು ಊಹಿಸಿರಲಿಲ್ಲ’ ಎಂದು ಪುನರ್ವಸತಿ ಕೇಂದ್ರದಲ್ಲಿ ಆಶ್ರಯ ಪಡೆದಿರುವ ಲಕ್ಷ್ಮಮ್ಮ ಬೆಂತೂರ ಕಣ್ಣೀರು ಹಾಕಿದರು.

ಗ್ರಾಮದಲ್ಲಿ ವೈದ್ಯಕೀಯ ತಂಡ:ಮಳೆ ಸಂತ್ರಸ್ತರಿಗಾಗಿ ಗ್ರಾಮದಲ್ಲಿ ಪುನರ್ವಸತಿ ಕೇಂದ್ರ ತೆರೆದ ಬೆನ್ನಲ್ಲೇ, ಸಾಂಕ್ರಾಮಿಕ ರೋಗಗಳು ಹರಡದಂತೆ ಮುನ್ನೆಚ್ಚರಿಕೆ ಕ್ರಮವಾಗಿ ತಾಲ್ಲೂಕು ಆಡಳಿತವು ಗ್ರಾಮದಲ್ಲಿ ವೈದ್ಯಕೀಯ ತಂಡವನ್ನು ನಿಯೋಜಿಸಿದೆ.

ಇಬ್ಬರು ವೈದ್ಯರು ನಿತ್ಯ ಬೆಳಿಗ್ಗೆ ಮತ್ತು ಸಂಜೆ ಕೇಂದ್ರಕ್ಕೆ ಭೇಟಿ ನೀಡಿ, ಸಂತ್ರಸ್ತರಿಗೆ ಚಿಕಿತ್ಸೆ ನೀಡಿ ಹೋಗುತ್ತಿದ್ದರೆ, ಶುಶ್ರೂಷಕರಿಬ್ಬರು ಗ್ರಾಮದಲ್ಲೇ ಉಳಿದುಕೊಂಡು ದಿನದ 24 ಗಂಟೆಯೂ ಜನರ ಆರೋಗ್ಯದ ಮೇಲೆ ನಿಗಾ ಇಟ್ಟಿದ್ದಾರೆ.

‘ಪುನರ್ವಸತಿ ಕೇಂದ್ರದಲ್ಲಿರುವವರಿಗೆ ಜ್ವರ, ಶೀತ, ಕೆಮ್ಮು ಸೇರಿದಂತೆ ಸಣ್ಣಪುಟ್ಟ ರೋಗಗಳಿಗೆ ಸೂಕ್ತ ಚಿಕಿತ್ಸೆ ನೀಡಿದ್ದೇವೆ. ಯಾವುದೇ ಸಾಂಕ್ರಾಮಿಕ ರೋಗಗಳು ಬಾರದಂತೆ ಅಗತ್ಯ ಕ್ರಮ ಕೈಗೊಂಡಿದ್ದೇವೆ. ಚಿಕಿತ್ಸೆ ಜತೆಗೆ, ಉಚಿತವಾಗಿ ಔಷಧಗಳನ್ನು ಸಹ ವಿತರಿಸಲಾಗುತ್ತಿದೆ’ ಎಂದು ಶುಶ್ರೂಷಕಿ ಮಂಜುಳಾ ರಜಪೂತ ಹೇಳಿದರು.

ದಾನಿಗಳಿಂದಲೂ ಅಗತ್ಯ ವಸ್ತು ಪೂರೈಕೆ
ಹಂಚಿನಾಳದ ಪುನರ್ವಸತಿ ಕೇಂದ್ರದಲ್ಲಿರುವ ಸಂತ್ರಸ್ತರಿಗೆ ಅಗತ್ಯ ವಸ್ತು ಹಾಗೂ ಊಟಕ್ಕೆ ಬೇಕಾದ ಅಕ್ಕಿ ಮತ್ತಿತರ ಸಾಮಗ್ರಿಗಳನ್ನು ತಾಲ್ಲೂಕು ಆಡಳಿತವಷ್ಟೇ ಅಲ್ಲದೆ, ದಾನಿಗಳು ಸಹ ಪೂರೈಕೆ ಮಾಡುತ್ತಿದ್ದಾರೆ.

‘ಹುಬ್ಬಳ್ಳಿ ಸೇರಿದಂತೆ ಕೆಲ ಊರುಗಳಿಂದ ವಾಹನಗಳಲ್ಲಿ ಬಂದಿದ್ದ ದಾನಿಗಳು ದಿನನಿತ್ಯ ಬಳಕೆಯ ವಸ್ತುಗಳು ಸೇರಿದಂತೆ ಹೊದಿಕೆ, ಸ್ವೆಟರ್, ಬ್ರೆಡ್, ಬಿಸ್ಕತ್ ಸೇರಿದಂತೆ ಆಹಾರದ ಸಾಮಾನುಗಳನ್ನು ಸಹ ತಂದು ಕೊಟ್ಟಿದ್ದಾರೆ’ ಎಂದು ಹಂಚಿನಾಳದ ಗ್ರಾಮ ಪಂಚಾಯ್ತಿ ಸದಸ್ಯ ಶಿವಾನಂದ ತಂಬೂರ ‘ಪ್ರಜಾವಾಣಿ’ಗೆ ತಿಳಿಸಿದರು.

‘ಆಗಸ್ಟ್ 13ರಿಂದ ಶಾಲೆ ಆರಂಭವಾಗಲಿದೆ. ಅಲ್ಲಿಯವರಿಗೆ ಸಂತ್ರಸ್ತರು ಇಲ್ಲೇ ಆಶ್ರಯ ಪಡೆದಿರುತ್ತಾರೆ. ಒಂದು ವೇಳೆ ಮತ್ತೆ ಮಳೆ ಜೋರಾಗಿ ತೊಂದರೆಯಾದರೆ, ಮಳೆ ನಿಲ್ಲುವವರೆಗೆ ಇಲ್ಲೇ ಆಶ್ರಯ ಕಲ್ಪಿಸುವಂತೆ ಅಧಿಕಾರಿಗಳಿಗೆ ಮನವಿ ಮಾಡಲಾಗುವುದು’ ಎಂದು ಹೇಳಿದರು.

ಬೆಟದೂರಿನಲ್ಲಿ ಜಲಾವೃತಗೊಂಡಿರುವ ಹತ್ತಿ ಹಾಗೂ ಜೋಳ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.