ADVERTISEMENT

ಶೋಷಣೆ ವಿರುದ್ಧ ದನಿ ಎತ್ತಬೇಕು: ಪ್ರೊ. ಮಲ್ಲಿಕಾ

ಕನಕದಾಸ ನೈರುತ್ಯ ರೈಲ್ವೆ ನೌಕರರ ಸಂಘದಿಂದ ಕನಕದಾಸ ಜಯಂತ್ಯುತ್ಸವ

​ಪ್ರಜಾವಾಣಿ ವಾರ್ತೆ
Published 15 ಡಿಸೆಂಬರ್ 2022, 13:31 IST
Last Updated 15 ಡಿಸೆಂಬರ್ 2022, 13:31 IST
ಹುಬ್ಬಳ್ಳಿಯ ಕನಕದಾಸ ನೈರುತ್ಯ ರೈಲ್ವೆ ನೌಕರರ ಕ್ಷೇಮಾಭಿವೃದ್ಧಿ ಸಂಘವು ನಗರದಲ್ಲಿ ಗುರುವಾರ ಆಯೋಜಿಸಿದ್ದ ಕನಕದಾಸ ಜಯಂತ್ಯುತ್ಸವದಲ್ಲಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಸಾಧಕರಿಗೆ ಸನ್ಮಾನ ನಡೆಯಿತು. ಸಂಘದ ಅಧ್ಯಕ್ಷ ಪರಶುರಾಮ ದ್ಯಾವಣ್ಣವರ, ಅಥಣಿಯ ಕವಲಗುಡ್ಡದ ಸಿದ್ದಾಶ್ರಮದ ಸಿದ್ದಯೋಗಿ ಅಮರೇಶ್ವರ ಮಹಾರಾಜರು ಇದ್ದಾರೆ– ಪ್ರಜಾವಾಣಿ ಚಿತ್ರ
ಹುಬ್ಬಳ್ಳಿಯ ಕನಕದಾಸ ನೈರುತ್ಯ ರೈಲ್ವೆ ನೌಕರರ ಕ್ಷೇಮಾಭಿವೃದ್ಧಿ ಸಂಘವು ನಗರದಲ್ಲಿ ಗುರುವಾರ ಆಯೋಜಿಸಿದ್ದ ಕನಕದಾಸ ಜಯಂತ್ಯುತ್ಸವದಲ್ಲಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಸಾಧಕರಿಗೆ ಸನ್ಮಾನ ನಡೆಯಿತು. ಸಂಘದ ಅಧ್ಯಕ್ಷ ಪರಶುರಾಮ ದ್ಯಾವಣ್ಣವರ, ಅಥಣಿಯ ಕವಲಗುಡ್ಡದ ಸಿದ್ದಾಶ್ರಮದ ಸಿದ್ದಯೋಗಿ ಅಮರೇಶ್ವರ ಮಹಾರಾಜರು ಇದ್ದಾರೆ– ಪ್ರಜಾವಾಣಿ ಚಿತ್ರ   

ಹುಬ್ಬಳ್ಳಿ: ‘ಸಾವಿರಾರು ವರ್ಷಗಳಿಂದ ತುಳಿತಕ್ಕೊಳಗಾಗಿರುವ ಕೆಳ ಸಮುದಾಯಗಳು ತಮ್ಮ ವಿರುದ್ಧದ ಶೋಷಣೆ ವಿರುದ್ಧ ದನಿ ಎತ್ತಬೇಕು. ಆಗ ಮಾತ್ರ ಇವುಗಳಿಂದ‌ ನಮಗೆ ಮುಕ್ತಿ ಸಿಗಲಿದೆ’ ಎಂದು ಹಂಪಿ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೊ. ಮಲ್ಲಿಕಾ ಘಂಟಿ ಹೇಳಿದರು.

ಕನಕದಾಸ ನೈರುತ್ಯ ರೈಲ್ವೆ ನೌಕರರ ಕ್ಷೇಮಾಭಿವೃದ್ಧಿ ಸಂಘವು ನಗರದಲ್ಲಿ ಗುರುವಾರ ಆಯೋಜಿಸಿದ್ದ ಕನಕದಾಸ ಜಯಂತ್ಯುತ್ಸವ, ಪ್ರತಿಭಾ ಪುರಸ್ಕಾರ ಹಾಗೂ ಸನ್ಮಾನ ಸಮಾರಂಭದಲ್ಲಿ ಅವರು ಮಾತನಾಡಿದರು.

‘ದಾಸಶ್ರೇಷ್ಠರಾದ ಕನಕದಾಸರು ತಮ್ಮದೇ ಆದ ರೀತಿಯಲ್ಲಿ ಹೋರಾಟಕ್ಕೆ ದಾರಿ ಮಾಡಿಕೊಟ್ಟರು. ಅವರ ಅನುಯಾಯಿಗಳಾದ ನಾವು, ಆ ಹೋರಾಟದ ಮಾರ್ಗದಲ್ಲಿ ಸಾಗಬೇಕು. ಡಾ.ಬಿ.ಆರ್. ಅಂಬೇಡ್ಕರ್ ಸೇರಿದಂತೆ ಹಲವರು ಮಹನೀಯರ ಹೋರಾಟದ ಪರಂಪರೆಯನ್ನು ಮುಂದುವರಿಸಿಕೊಂಡು ಹೋಗಬೇಕು. ಮನುಕುಲದ ಉದ್ಧಾರ ಬಯಸಿದ ಕನಕದಾಸರ ಕಾರ್ಯ ಹಾಗೂ ಕೃತಿಗಳ ಬಗ್ಗೆ ಹೆಚ್ಚು ಪ್ರಚಾರವಾಗಬೇಕು’ ಎಂದರು.

ADVERTISEMENT

‘ಆಧುನಿಕ ಯುಗದಲ್ಲಿ ಶಿಕ್ಷಣ ಪಡೆದಿರುವ ನಾವು ಸಮಾಜದಲ್ಲಿ ಉತ್ತಮ ಸ್ಥಾನಗಳನ್ನು ಪಡೆದಿದ್ದೇವೆ. ಆದರೆ ತಮ್ಮನ್ನು ಹೆತ್ತು–ಹೊತ್ತು ಬೆಳೆಸಿದ ತಂದೆ–ತಾಯಿಯನ್ನು ನಿರ್ಲಕ್ಷ್ಯ ಮಾಡುತ್ತಿದ್ದೇವೆ. ಸಂಧ್ಯಾಕಾಲದಲ್ಲಿ ಅವರನ್ನು ವೃದ್ಧಾಶ್ರಮಕ್ಕೆ ದೂಡುವುದು ಹೆಚ್ಚಾಗುತ್ತಿದೆ. ಇದು ತಪ್ಪು. ಕಡೆವರೆಗೂ ತಂದೆ–ತಾಯಿಯ ಜೊತೆಗಿದ್ದು ಚನ್ನಾಗಿ ನೋಡಿಕೊಳ್ಳಬೇಕು’ ಎಂದು ಸಲಹೆ ನೀಡಿದರು.

ನೈರುತ್ಯ ರೈಲ್ವೆ ಮಜ್ದೂರ್ ಯೂನಿಯನ್ ವಲಯ ಪ್ರಧಾನ ಕಾರ್ಯದರ್ಶಿ ಎ.ಎಂ.‌ ಡಿಕ್ರೂಜ್ ಮಾತನಾಡಿ, ‘ನಗರದ ರೈಲು ನಿಲ್ದಾಣದ ಗದಗ ರಸ್ತೆಯ ಪ್ರವೇಶ ದ್ವಾರದ ಬಳಿ ಇರುವ ಕಿತ್ತೂರು ರಾಣಿ ಚನ್ನಮ್ಮನ ಪ್ರತಿಮೆ ಬಳಿ, ಅವರ ಬಂಟ ಸಂಗೊಳ್ಳಿ ರಾಯಣ್ಣನ ಪ್ರತಿಮೆ ಪ್ರತಿಷ್ಠಾಪಿಸಬೇಕು ಎಂಬ ಬೇಡಿಕೆಯನ್ನು ನೌಕರರ ಸಂಘ ಇಟ್ಟಿದೆ. ಇದನ್ನು ನೈರುತ್ಯ ರೈಲ್ವೆಯ ಪ್ರಧಾನ ವ್ಯವಸ್ಥಾಪಕರ ಗಮನಕ್ಕೆ ತಂದಿದ್ದೇನೆ. ಶೀಘ್ರ ಮೂರ್ತಿ ಪ್ರತಿಷ್ಠಾಪನೆ ಮಾಡುವುದಾಗಿ ಅವರು ಭರವಸೆ ಕೊಟ್ಟಿದ್ದಾರೆ’

ಜಾನಪದ ತಜ್ಞ ಗವಿಸಿದ್ದಯ್ಯ ಹಳ್ಳಿಕೇರಿಮಠ ಮಾತನಾಡಿ, ‘ಸಮಾಜದ ಸುಧಾರಣೆಗಾಗಿ ತಮ್ಮನ್ನು ಅರ್ಪಿಸಿಕೊಂಡವರು ಮಾತ್ರ ಮಹಾತ್ಮರಾಗುತ್ತಾರೆ. ಅಂತಹವರಲ್ಲಿ ಕನಕದಾಸರು ಸಹ ಪ್ರಮುಖರಾಗಿದ್ದಾರೆ. ದಂಡನಾಯಕನಾಗಿದ್ದ ಅವರು, ಎಲ್ಲವನ್ನೂ ತೊರೆದು ಆಧ್ಯಾತ್ಮದತ್ತ ವಾಲಿದರು. ನಾನು ಎನ್ನದೆ, ನಾವು ಎಂದು ಸಮಾಜ ಸುಧಾರಣೆಗೆ ಮುಂದಾದರು. ಕೇವಲ‌ ಒಂದು ಜಾತಿಗಷ್ಟೇ ಸೀಮಿತರಾಗದೆ, ಇಡೀ ಮನುಷ್ಯ ಜಾತಿಯ ಉದ್ಧಾರಕ್ಕಾಗಿ ಶ್ರಮಿಸಿದರು’ ಎಂದು ಬಣ್ಣಿಸಿದರು.

ಪರೀಕ್ಷೆಗಳಲ್ಲಿ ಉತ್ತಮ ಅಂಕಗಳನ್ನು ಪಡೆದ ನೌಕರರ ಸಂಘದ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದವರನ್ನು ಸನ್ಮಾನಿಸಲಾಯಿತು.

ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ಪರಶುರಾಮ ದ್ಯಾವಣ್ಣವರ ಅತಿಥಿಗಳನ್ನು ಸ್ವಾಗತಿಸಿದರು. ಅಥಣಿಯ ಕವಲಗುಡ್ಡದ ಸಿದ್ದಾಶ್ರಮದ ಸಿದ್ದಯೋಗಿ ಅಮರೇಶ್ವರ ಮಹಾರಾಜರು ಸಾನ್ನಿಧ್ಯ ವಹಿಸಿದ್ದರು. ನೈರುತ್ಯ ರೈಲ್ವೆಯ ಅಧಿಕಾರಿಗಳಾದ ಚೇತನ್ ಕುಮಾರ್ ಡಿ, ಶ್ರೀಕಾಂತ ಗೋಕಾಕ ಹಾಗೂ ಕೆ.ಎ. ಯೇಸುದಾಸ ಇದ್ದರು. ದೇವರಾಜ್ ನಿರೂಪಣೆ ಮಾಡಿದರು. ನಂತರ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.