ADVERTISEMENT

ಸಾಹಿತ್ಯ ಶಾಶ್ವತ ವಿರೋಧ ಪಕ್ಷ: ರಾಜೇಂದ್ರ ಚೆನ್ನಿ

​ಪ್ರಜಾವಾಣಿ ವಾರ್ತೆ
Published 23 ಜುಲೈ 2025, 3:00 IST
Last Updated 23 ಜುಲೈ 2025, 3:00 IST
ಧಾರವಾಡದಲ್ಲಿ ನಡೆದ ‘ಸಮಕಾಲೀನ ಕನ್ನಡ ಸಾಹಿತ್ಯ ಚಹರೆಗಳು’ ವಿಚಾರ ಸಂಕಿರಣದಲ್ಲಿ ಪ್ರೊ. ರಾಜೇಂದ್ರ ಚೆನ್ನಿ ಮಾತನಾಡಿದರು
ಧಾರವಾಡದಲ್ಲಿ ನಡೆದ ‘ಸಮಕಾಲೀನ ಕನ್ನಡ ಸಾಹಿತ್ಯ ಚಹರೆಗಳು’ ವಿಚಾರ ಸಂಕಿರಣದಲ್ಲಿ ಪ್ರೊ. ರಾಜೇಂದ್ರ ಚೆನ್ನಿ ಮಾತನಾಡಿದರು   

ಧಾರವಾಡ: ‘ಸಾಹಿತ್ಯ ಎಂದರೆ ಸತ್ಯವನ್ನು ಹೇಳುವುದು. ಸಾಹಿತ್ಯವು ಶಾಶ್ವತ ವಿರೋಧ ಪಕ್ಷ’ ಎಂದು ವಿಮರ್ಶಕ ಪ್ರೊ. ರಾಜೇಂದ್ರ ಚೆನ್ನಿ ಹೇಳಿದರು.

ಕರ್ನಾಟಕ ಸಾಹಿತ್ಯ ಅಕಾಡೆಮಿ, ಕರ್ನಾಟಕ ವಿಶ್ವವಿದ್ಯಾಲಯದ ವ್ಯಾಪ್ತಿಯ ಕಾಲೇಜುಗಳ ಕನ್ನಡ ಅಧ್ಯಾಪಕರ ಪರಿಷತ್ತು ಮತ್ತು ಕವಿವಿ ಆರ್‌.ಸಿ. ಹಿರೇಮಠ ಕನ್ನಡ ಅಧ್ಯಯನ ಪೀಠದ ವತಿಯಿಂದ ಚಂದ್ರಶೇಖರ ಕಂಬಾರ ಸಭಾಭವನದಲ್ಲಿ ಮಂಗಳವಾರ ನಡೆದ ‘ಸಮಕಾಲೀನ ಕನ್ನಡ ಸಾಹಿತ್ಯ ಚಹರೆಗಳು’ ವಿಚಾರ ಸಂಕಿರಣದಲ್ಲಿ ಅವರು  ಮಾತನಾಡಿದರು.

‘ಚರಿತ್ರೆಯ ಎಲ್ಲ ಕಾಲಘಟ್ಟದಲ್ಲೂ ಸತ್ಯವನ್ನು ಹೇಳುವುದು ಅಪರಾಧ ಎಂದೇ ಎಲ್ಲ ಪ್ರಭುತ್ವಗಳು ಪರಿಗಣಿಸುತ್ತವೆ. ಆದರೆ, ಸತ್ಯ ಹೇಳುವುದೇ ಸಾಹಿತ್ಯದ ಶಕ್ತಿ’ ಎಂದರು.

ADVERTISEMENT

‘ಹಿಂದಿನ ಕಾಲದಲ್ಲಿ ಪ್ರಭುತ್ವ ತಮ್ಮದೇ ಭಾಷೆ ಬಳಸುತ್ತಿತ್ತು. ಬರಹಗಾರರು ತಮ್ಮ ನುಡಿಗಟ್ಟುಗಳಲ್ಲಿ ಪ್ರಭುತ್ವವನ್ನು ಪ್ರಶ್ನಿಸುತ್ತಿದ್ದರು. ಈಗ ಪ್ರಭುತ್ವವು ಬರಹಗಾರರ ನುಡಿಗಟ್ಟುಗಳನ್ನು ಕದ್ದು ಬಳಸುತ್ತಿದೆ. ಸಮಾನತೆ, ಸಾಮಾಜಿಕ ನ್ಯಾಯ, ಲಿಂಗ ಸಮಾನತೆ ಬಗ್ಗೆ ಪ್ರಭುತ್ವ ಮಾತಾಡುತ್ತಿದೆ. ಅವುಗಳನ್ನು ನಿಧಾನವಾಗಿ ಕೊಲ್ಲುತ್ತಿದೆ. ಹೊಸ ಬರಹಗಾರರು ಹೊಸ ನುಡಿಗಟ್ಟುಗಳನ್ನು ಕಟ್ಟಿಕೊಳ್ಳಬೇಕಿದೆ’ ಎಂದು ಸಲಹೆ ನೀಡಿದರು.

‘ಹಿಂದಿನ ತಲೆಮಾರಿನ ಬರಹಗಾರರು ಪ್ರಬುದ್ಧವಾಗಿ ಕಟ್ಟಿಕೊಟ್ಟಿರುವುದನ್ನು ಮೀರಿ ಮತ್ತೊಂದು ನೆಲೆಗಟ್ಟು ಕಟ್ಟುವ ಸವಾಲು ಯುವ ಬರಹಗಾರರ ಮುಂದಿದೆ. ಏಕಕಾಲಕ್ಕೆ ಹಲವು ಯುಗಗಳಲ್ಲಿ ಬದುಕುವ ಸನ್ನಿವೇಶ ಇದು. ಶಕ್ತಿಶಾಲಿಯಾದ ಹಿಂದಿನ ತಲೆಮಾರಿನ ದಲಿತ ಕಾವ್ಯಕ್ಕಿಂತ ಭಿನ್ನವಾದುದನ್ನು ದಲಿತ ಸಾಹಿತ್ಯವು ಹುಡಕುತ್ತಿದೆ. ಜಾಗತೀಕರಣ, ಮಾರುಕಟ್ಟೆ, ಸರಕು ಸಂಸ್ಕೃತಿ, ಅದೃಶ್ಯ ಅಸ್ಪೃಶ್ಯತೆಯನ್ನು ಈ ಸಮುದಾಯ ಎದುರಿಸಬೇಕಿದೆ. ಅದನ್ನು ಹೇಗೆ ಎದುರಿಸುವುದು ಎಂಬುದನ್ನು ಬರಹಗಳು ಮುಂದಿಡುತ್ತಿವೆ’ ಎಂದು ಹೇಳಿದರು.

‘ಇದು ಸತ್ಯೋತ್ತರ ಕಾಲ. ಸತ್ಯವನ್ನು ಸತ್ಯ ಎಂದು ಒಪ್ಪಿಕೊಳ್ಳಲು ಎಲ್ಲ ಕಾಲದಲ್ಲೂ ಕೆಲವು ಆಧಾರ ಇರುತ್ತವೆ. ಅವು ವಿಜ್ಞಾನ, ಅನುಭವ, ಅನುಭಾವ ಆಗಿರಬಹುದು. ಇಂಥ ನೆಲೆಗಳೆನ್ನೆಲ್ಲ ಕಳೆದುಕೊಂಡು ತಬ್ಬಲಿಯಾದ ಸತ್ಯದ ಸ್ಥಿತಿಗತಿ ಏನು‌ ಎಂದು ಪ್ರಶ್ನೆ ಕೇಳುವ ಕಾಲ ಸತ್ಯೋತ್ತರ ಕಾಲ. ಯಾರದೊ ಮನಸ್ಸಿನ ಪೂರ್ವಗ್ರಹವನ್ನು ಪ್ರಶ್ನಾತೀತವಾಗಿ ಒಪ್ಪಿಕೊಳ್ಳುತ್ತಿರುವುದು ಈ ದುರಿತ ಕಾಲದ ಲಕ್ಷಣ. ತಪ್ಪನ್ನೂ ತಿಳಿದೂ ಸಾಮೂಹಿಕವಾಗಿ ಯಾಕೆ ಸಹಮತ ಸೂಚಿಸುತ್ತಿದ್ದೇವೆ ಎಂದು ಪ್ರಶ್ನಿಸಿಕೊಳ್ಳಬೇಕಿದೆ ಎಂದರು.

ಕರ್ನಾಟಕ ಸಾಹಿತ್ಯ ಅಕಾಡೆಮಿ ಕಾರ್ಯದರ್ಶಿ ಕರಿಯಪ್ಪ ಎನ್‌, ಸದಸ್ಯ ಅರ್ಜುನ ಗೊಳಸಂಗಿ, ವೈ.ಎಂ.ಭಜಂತ್ರಿ ಇದ್ದರು.

ಸತ್ಯ ತಿರುಚಿ ಸುಳ್ಳನ್ನೇ ಸತ್ಯ ಎಂದು ನಂಬಿಸುವ ಕಾಲ ಇದು. ಅಂತರಂಗದ ಸತ್ಯ ಸಂವೇದನೆಗಳನ್ನು ತಿರುಚಿ ಬೇರೆ ರೀತಿಯಲ್ಲಿ ಬರೆಯಬೇಕಾದ ಅನಿವಾರ್ಯಕ್ಕೆ ಈ ಸಂದರ್ಭ ಒಳಗಾಗಿದೆಯೇ ಎಂದು ಪ್ರಶ್ನಿಸಿಕೊಳ್ಳಬೇಕು.
ಎಂ.ಡಿ. ಒಕ್ಕುಂದ, ಕಾರ್ಯಾಧ್ಯಕ್ಷ, ಕವಿವಿ ವ್ಯಾಪ್ತಿಯ ಕಾಲೇಜುಗಳ ಕನ್ನಡ ಅಧ್ಯಾಪಕರ ಪರಿಷತ್ತು
ಅಧ್ಯಾಪಕರು ಬರೆಯಬೇಕು. ಸಮಾಜದಲ್ಲಿ ಸಮಸ್ಯೆಗಳು (ಮೊಬೈಲ್‌ ಅತೀವ ಬಳಕೆ ಶೋಷಣೆ...) ಹಾಗೂ ಪ್ರಸ್ತುತ ಸಂಗತಿಗಳ ಕುರಿತು ಕತೆ ಕವನ ಲೇಖನಗಳನ್ನು ಬರೆಯಬೇಕು
ಪ್ರೊ. ಎ.ಎಂ. ಖಾನ್‌, ಕುಲಪತಿ ಕವಿವಿ
ಕಾಲದ ಚಹರೆಗಳನ್ನು ಗುರುತಿಸಬೇಕು. ಇಲ್ಲದಿದ್ದರೆ ಕಾಲಕ್ಕೆ ಅನ್ಯಾಯ ಮಾಡಿದಂತೆ. ಯುವಬರಹಗಾರರು ಸಮಾಜದ ಎಲ್ಲ ಸಂಕಷ್ಟಗಳ ಕುರಿತು ಬರೆಯುತ್ತಿದ್ಧಾರೆ. ಯುವಬರಹಗಾರರನ್ನು ಗುರುತಿಸಿ ಪ್ರೋತ್ಸಾಹಿಸಬೇಕು
ಎಲ್‌.ಎನ್‌. ಮುಕುಂದರಾಜ್‌, ಅಧ್ಯಕ್ಷ, ಕರ್ನಾಟಕ ಸಾಹಿತ್ಯ ಅಕಾಡೆಮಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.