ADVERTISEMENT

‘ಪ್ರಧಾನಿಗೆ ಅಭಿನಂದನಾ ಪತ್ರ ಅಭಿಯಾನ’ಕ್ಕೆ ಚಾಲನೆ

ಅಯೋಧ್ಯೆಯಲ್ಲಿ ಬಾಲರಾಮ ಮೂರ್ತಿ ಪ್ರಾಣ ಪ್ರತಿಷ್ಠಾಪನಾ ಕಾರ್ಯಕ್ಕೆ ಶ್ಲಾಘನೆ

​ಪ್ರಜಾವಾಣಿ ವಾರ್ತೆ
Published 8 ಫೆಬ್ರುವರಿ 2024, 14:04 IST
Last Updated 8 ಫೆಬ್ರುವರಿ 2024, 14:04 IST
ಹುಬ್ಬಳ್ಳಿಯ ಮೂರುಸಾವಿರ ಮಠದಲ್ಲಿ ಗುರುವಾರ ಬಿಜೆಪಿ ಜಿಲ್ಲಾ ಘಟಕದ ವತಿಯಿಂದ ಹಮ್ಮಿಕೊಂಡಿದ್ದ ’ಪ್ರಧಾನಿಗೆ ಅಭಿನಂದನಾ ಪತ್ರ’ ಅಭಿಯಾನಕ್ಕೆ ಗುರುಸಿದ್ಧ ರಾಜಯೋಗೀಂದ್ರ ಸ್ವಾಮೀಜಿ ಚಾಲನೆ ನೀಡಿದರು. ಬಿಜೆಪಿ ಜಿಲ್ಲಾ ಘಟಕದ ಪ್ರಮುಖರು ಭಾಗವಹಿಸಿದ್ದರು
ಹುಬ್ಬಳ್ಳಿಯ ಮೂರುಸಾವಿರ ಮಠದಲ್ಲಿ ಗುರುವಾರ ಬಿಜೆಪಿ ಜಿಲ್ಲಾ ಘಟಕದ ವತಿಯಿಂದ ಹಮ್ಮಿಕೊಂಡಿದ್ದ ’ಪ್ರಧಾನಿಗೆ ಅಭಿನಂದನಾ ಪತ್ರ’ ಅಭಿಯಾನಕ್ಕೆ ಗುರುಸಿದ್ಧ ರಾಜಯೋಗೀಂದ್ರ ಸ್ವಾಮೀಜಿ ಚಾಲನೆ ನೀಡಿದರು. ಬಿಜೆಪಿ ಜಿಲ್ಲಾ ಘಟಕದ ಪ್ರಮುಖರು ಭಾಗವಹಿಸಿದ್ದರು   

ಹುಬ್ಬಳ್ಳಿ: ‘ದೇಶದ ಕೋಟ್ಯಂತರ ಜನ ಆಸ್ತಿಕರು ಹಲವು ವರ್ಷಗಳಿಂದ ಕಾಯುತ್ತಿದ್ದ ಬಾಲರಾಮನ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಕಾರ್ಯವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಸ್ವತಃ ಅಯೋಧ್ಯೆಯ ರಾಮ ಮಂದಿರದಲ್ಲಿ ಯಜಮಾನನ ಸ್ಥಾನದಲ್ಲಿ ನಿಂತು ಧಾರ್ಮಿಕ ಕಾರ್ಯವನ್ನು ನೆರವೇರಿಸಿದ್ದು ಶ್ಲಾಘನೀಯ‘ ಎಂದು ಮೂರುಸಾವಿರ ಮಠದ ಗುರುಸಿದ್ಧ ರಾಜಯೋಗೀಂದ್ರ ಸ್ವಾಮೀಜಿ ಹೇಳಿದರು.

ನಗರದ ಮೂರುಸಾವಿರ ಮಠದಲ್ಲಿ ಗುರುವಾರ ಬಿಜೆಪಿ ಜಿಲ್ಲಾ ಘಟಕದ ವತಿಯಿಂದ ಆಯೋಜಿಸಿದ್ದ ’ಪ್ರಧಾನಿಗೆ ಅಭಿನಂದನಾ ಪತ್ರ’ ಅಭಿಯಾನಕ್ಕೆ ಸ್ವತಃ ಸ್ವಾಮೀಜಿ ಅವರೇ ಪ್ರಧಾನಿ ಮೋದಿ ಅವರಿಗೆ ಅಭಿನಂದನಾ ಪತ್ರ ಬರೆಯುವ ಮೂಲಕ ಚಾಲನೆ ನೀಡಿ, ಮಾತನಾಡಿದರು. 

‘ಬಾಲರಾಮನ ಮೂರ್ತಿ ‍ಪ್ರಾಣ ಪ್ರತಿಷ್ಠಾಪನೆಯಿಂದ ದೇಶದ ಜನರ ಧಾರ್ಮಿಕ ಭಾವನೆ ಹಾಗೂ ಹಿಂದುತ್ವದ ಭಾವನೆಯು ಇಮ್ಮಡಿಯಾಗಿದೆ. ಇದು ನಮ್ಮ ಪೂರ್ವಜರು, ಕರಸೇವಕರು ಸೇರಿದಂತೆ ಕೋಟ್ಯಂತರ ಜನ ಹಿಂದುಗಳ ಕನಸಾಗಿತ್ತು. ಇದನ್ನು ಸ್ವತಃ ಪ್ರಧಾನಿಯವರೇ ಬಾಲರಾಮನ ಪ್ರಾಣ ಪ್ರತಿಷ್ಠಾಪನೆ ಮಾಡುವ ಮೂಲಕ ನೆರವೇರಿಸಿದ್ದು ಸಂತಸದ ವಿಷಯ’ ಎಂದರು. 

ADVERTISEMENT

ಹುಬ್ಬಳ್ಳಿ– ಧಾರವಾಡ ಮಹಾನಗರ ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ‌ ಹಾಗೂ ಪಾಲಿಕೆ ಸದಸ್ಯ ತಿಪ್ಪಣ್ಣ ಮಜ್ಜಗಿ ಅವರು, ’ಭಾರತವು ಹಿಂದುಗಳ ರಾಷ್ಟ್ರ. ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣ, ರಾಮಮೂರ್ತಿ ಪ್ರಾಣ ಪ್ರತಿಷ್ಠಾನೆ ಕಾರ್ಯವು ಇಡೀ ದೇಶದ ಜನರ ಹೆಮ್ಮೆಯ ವಿಷಯ. ರಾಮಮಂದಿರ ನಿರ್ಮಾಣದ ಕಾರ್ಯವು ಹಂತ ಹಂತವಾಗಿ ನಡೆಯುತ್ತಿದ್ದು, ಇದಕ್ಕಾಗಿ ದೇಶದ ಜನರು ದೇಣಿಗೆ ನೀಡುವ ಮೂಲಕ ಸಹಕರಿಸಿದ್ದಾರೆ’ ಎಂದರು. 

‘ಅಯೋಧ್ಯೆಯಲ್ಲಿ ಪ್ರಧಾನಿ ಮೋದಿ ಅವರು ಪುರೋಹಿತರ ನೀಡಿದ ಸೂಚನೆಗಳಿಗೆ ಅನುಗುಣವಾಗಿ ಬಾಲರಾಮ ಮೂರ್ತಿ ಪ್ರಾಣ ಪ್ರತಿಷ್ಠಾಪನಾ ಕಾರ್ಯವನ್ನು ನೆರವೇರಿಸಿದ್ದು, ನಮ್ಮೆಲ್ಲರ ಕನಸು ಸಾಕಾರಗೊಂಡಿದೆ. ಇದು ದೇಶದ ಜನರ ಅಭಿನಂದನೆಗೂ ಪಾತ್ರವಾಗಿದೆ’ ಎಂದರು. 

250ಕ್ಕೂ ಹೆಚ್ಚು ಪತ್ರ ರವಾನೆ:

’ಬಿಜೆಪಿ ಜಿಲ್ಲಾ ಘಟಕದ ವತಿಯಿಂದ ’ಪ್ರಧಾನಿಗೆ ಅಭಿನಂದನಾ ಪತ್ರ’ ಕಳುಹಿಸುವ ಅಭಿಯಾನ ಹಮ್ಮಿಕೊಳ್ಳಲಾಗಿದ್ದು, ಗುರುವಾರ 250ಕ್ಕೂ ಹೆಚ್ಚು ಜನರು ತಾವೇ ಸ್ವತಃ ಪೋಸ್ಟ್‌ಕಾರ್ಡ್‌ನಲ್ಲಿ ‘ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರದಲ್ಲಿ ಬಾಲರಾಮ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಮಾಡಿದ್ದಕ್ಕೆ ಅಭಿನಂದನೆ‘ ಎಂದು ಬರೆದು, ಪ್ರಧಾನಿ ಅವರಿಗೆ ಕಳುಹಿಸಿದರು. ಈ ಅಭಿಯಾನವು ಫೆ.15ರವರೆಗೆ ನಡೆಯಲಿದ್ದು, 50 ಸಾವಿರಕ್ಕೂ ಅಧಿಕ ಅಭಿನಂದನಾ ಪತ್ರಗಳನ್ನು ಪ್ರಧಾನಿ ಅವರಿಗೆ ಕಳುಹಿಸಲಾಗುವುದು. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಅಭಿಯಾನದಲ್ಲಿ ಭಾಗವಹಿಸಬೇಕು’ ಎಂದು ತಿಪ್ಪಣ್ಣ ಮಜ್ಜಗಿ ಮನವಿ ಮಾಡಿದರು. 

ಪ್ರಮುಖರಾದ ಶಿವಕುಮಾರ ಮೆಣಸಿನಕಾಯಿ, ದತ್ತಮೂರ್ತಿ ಕುಲಕರ್ಣಿ, ಪ್ರಭು ನವಲಗುಂದ ಮಠ, ರಾಜು, ಶಿವಾನಂದ ಭಟ್‌, ಉಮೇಶ ಜೋಶಿ, ವೀರೇಶ್, ಸವಿತಾ, ಮಾರುತಿ ಹಾಗೂ ಬಿಜೆಜಿ ಜಿಲ್ಲಾ ಘಟಕದ ಮುಖಂಡರು ಭಾಗವಹಿಸಿದ್ದರು. 

Highlights - ಫೆ.15ರವರೆಗೆ ನಡೆಯುವ ಅಭಿಯಾನ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲು ಮನವಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.