ADVERTISEMENT

ರಾಮಕೃಷ್ಣ ಆಶ್ರಮದ ವಾರ್ಷಿಕೋತ್ಸವ 20ರಿಂದ: ವಿಜಯಾನಂದ ಸರಸ್ವತಿ ಸ್ವಾಮೀಜಿ

​ಪ್ರಜಾವಾಣಿ ವಾರ್ತೆ
Published 19 ಫೆಬ್ರುವರಿ 2026, 5:51 IST
Last Updated 19 ಫೆಬ್ರುವರಿ 2026, 5:51 IST
<div class="paragraphs"><p>ವಿಜಯಾನಂದ ಸರಸ್ವತಿ ಸ್ವಾಮೀಜಿ</p></div>

ವಿಜಯಾನಂದ ಸರಸ್ವತಿ ಸ್ವಾಮೀಜಿ

   

ಧಾರವಾಡ: ‘ನಗರದ ರಾಮಕೃಷ್ಣ ಆಶ್ರಮದ 21ನೇ ವಾರ್ಷಿಕೋತ್ಸವದ ಅಂಗವಾಗಿ ಫೆ. 20 ರಿಂದ 22 ರವರೆಗೆ ಯುವ ಸಮ್ಮೇಳನ, ಶಿಕ್ಷಕರ ಸಮ್ಮೇಳನ, ಉಪನ್ಯಾಸ ಹಾಗೂ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ’ ಎಂದು ರಾಮಕೃಷ್ಣ ವಿವೇಕಾನಂದ ಆಶ್ರಮದ ಅಧ್ಯಕ್ಷ ವಿಜಯಾನಂದ ಸರಸ್ವತಿ ಸ್ವಾಮೀಜಿ’ ತಿಳಿಸಿದರು.

ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘20ರಂದು ಬೆಳಿಗ್ಗೆ 10ಕ್ಕೆ ಸರ್ಕಾರಿ ನೌಕರರ ಭವನದಲ್ಲಿ ಯುವ ಸಮ್ಮೇಳನ ನಡೆಯಲಿದೆ. ಪೊಲೀಸ್ ವರಿಷ್ಠಾಧಿಕಾರಿ ಗುಂಜನ್ ಆರ್ಯ ಉದ್ಘಾಟನೆ ನೆರವೇರಿಸುವರು. ಉದ್ಯಮಿಗಳಾದ ವಿಎಸ್.ವಿ ಪ್ರಸಾದ್ ಎಂ.ವಿ. ಕರಮರಿ ಪಾಲ್ಗೊಳ್ಳುವರು’ ಎಂದರು.

ADVERTISEMENT

ಮನೋಭಾವ ತರಬೇತುದಾರ ಮಹೇಶ ಮಾಶಾಳ ಅವರು ‘ನಿರ್ಭಯತೆ ಮತ್ತು ಯಶಸ್ಸಿನ ಬದುಕು’ ಕುರಿತು ಉಪನ್ಯಾಸ ನೀಡುವರು. ಬಳಿಕ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಯಲಿದೆ’ ಎಂದು ಹೇಳಿದರು.

‘21ರಂದು ಬೆಳಿಗ್ಗೆ 9.30ಕ್ಕೆ ಶಿಕ್ಷಕರ ಸಮ್ಮೇಳನ ನಡೆಯಲಿದೆ. ಶಾಲಾ ಶಿಕ್ಷಣ ಇಲಾಖೆ ಹೆಚ್ಚುವರಿ ಆಯುಕ್ತ ಈಶ್ವರ ಉಳ್ಳಾಗಡ್ಡಿ ಉದ್ಘಾಟನೆ ನೆರವೇರಿಸುವರು. ಬಳ್ಳಾರಿ ರಾಮಕೃಷ್ಣ ಆಶ್ರಮದ ಅಧ್ಯಕ್ಷ ಮಂಗಳನಾಥಾನಂದ ಸ್ವಾಮೀಜಿ ಅವರು ‘ಜ್ಞಾನದ ಮೇಲಿನ ಅಭಿರುಚಿ’ ಕುರಿತು, ಗದಗ-ವಿಜಯಪುರ ರಾಮಕೃಷ್ಣ ವಿವೇನಾನಂದ ಆಶ್ರಮದ ಅಧ್ಯಕ್ಷ ನಿರ್ಭಯಾನಂದ ಸರಸ್ವತಿ ಸ್ವಾಮೀಜಿ ಅವರು ‘ಸದೃಢ ಸಮಾಜಕ್ಕೆ ಶಿಕ್ಷಣ ಹಾಗೂ ಶಿಕ್ಷಕನ ಪಾತ್ರ’ ಕುರಿತು ಉಪನ್ಯಾಸ ನೀಡುವರು’ ಎಂದರು.

‘ಸಂಜೆ 5ಕ್ಕೆ ರಾಮಕೃಷ್ಣ ಆಶ್ರಮದ ಆವರಣದಲ್ಲಿ ಮಹಿಳಾ ಮಂಡಳಿಗಳಿಂದ ಸಾಮೂಹಿಕ ಶ್ರೀಲಲಿತಾ ಸಹಸ್ರನಾಮ ಪಾರಾಯಣ ಹಾಗೂ ವಿದುಷಿ ಸಂಗೀತಾ ಕಟ್ಟಿ ಕುಲಕರ್ಣಿ ಅವರಿಂದ ಭಕ್ತಿ ಸಂಗೀತ ಕಾರ್ಯಕ್ರಮ ನಡೆಯಲಿದೆ. 22ರಂದು ಸಂಜೆ 5ಕ್ಕೆ ಸಾಮೂಹಿಕ ಶಿವಸಹಸ್ರನಾಮ ಪಾರಾಯಣ ಹಾಗೂ ಸದ್ಯೋಜಾತ ಕಲಾಕೇಂದ್ರದವರು ಲವ-ಕುಶ ಯಕ್ಷಗಾನ ಪ್ರಸಂಗ ಪ್ರಸ್ತುತಪಡಿಸುವರು’ ಎಂದರು.

‘ಪ್ರಸ್ತುತ ಮಕ್ಕಳಲ್ಲಿ ಸಂಸ್ಕಾರ, ಆತ್ಮವಿಶ್ವಾಸದ ಕೊರತೆ ಎದ್ದು ಕಾಣುತ್ತಿದೆ. ಆತ್ಮವಿಶ್ವಾಸ ಹಾಗೂ ದೇಶ, ಧರ್ಮ ಆಧಾರಿತವಾಗಿ ಬದುಕನ್ನು ರೂಪಿಸಲು ಪೋಷಕರು ಪ್ರಯತ್ನಿಸಬೇಕು. ಸ್ವಾಮಿ ವಿವೇಕಾನಂದ ಚಿಂತನೆಗಳ ಅರಿವು ಮೂಡಿಸಬೇಕು’ ಎಂದು ಸಲಹೆ ನೀಡಿದರು.

ಬುದ್ಧಿಯೋಗಾನಂದ ಸ್ವಾಮೀಜಿ, ಚಂದ್ರಶೇಖರ ಪಾಟೀಲ, ಅಶೋಕ ಸುದ್ದಿಗೋಷ್ಠಿಯಲ್ಲಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.