ADVERTISEMENT

ರಂಜಾನ್ ಆಚರಣೆ ಬಿಗಿ ಬಂದೋಬಸ್ತ್: ಡಿಸಿಪಿ ನಾಗೇಶ್

ಸ್ವಚ್ಛತೆ ಹಾಗೂ ನೀರಿನ ವ್ಯವಸ್ಥೆ ಮಾಡಲಿರುವ ಪಾಲಿಕೆ

​ಪ್ರಜಾವಾಣಿ ವಾರ್ತೆ
Published 1 ಜೂನ್ 2019, 14:18 IST
Last Updated 1 ಜೂನ್ 2019, 14:18 IST
ದಕ್ಷಿಣ ಉಪ ವಿಭಾಗದ ಪೊಲೀಸರು ಹುಬ್ಬಳ್ಳಿಯಲ್ಲಿ ಶನಿವಾರ ಏರ್ಪಡಿಸಿದ್ದ ರಂಜಾನ್ ಶಾಂತಿ ಸಭೆಯಲ್ಲಿ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಡಿಸಿಪಿ ನಾಗೇಶ್ ಮಾತನಾಡಿದರು– ಪ್ರಜಾವಾಣಿ ಚಿತ್ರ
ದಕ್ಷಿಣ ಉಪ ವಿಭಾಗದ ಪೊಲೀಸರು ಹುಬ್ಬಳ್ಳಿಯಲ್ಲಿ ಶನಿವಾರ ಏರ್ಪಡಿಸಿದ್ದ ರಂಜಾನ್ ಶಾಂತಿ ಸಭೆಯಲ್ಲಿ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಡಿಸಿಪಿ ನಾಗೇಶ್ ಮಾತನಾಡಿದರು– ಪ್ರಜಾವಾಣಿ ಚಿತ್ರ   

ಹುಬ್ಬಳ್ಳಿ: ರಂಜಾನ್ ಹಬ್ಬ ಆಚರಣೆಗೆ ಪೂರಕವಾಗಿ ಎಲ್ಲ ರೀತಿಯ ಸಿದ್ಧತೆ ಹಾಗೂ ಬಂದೋಬಸ್ತ್ ಮಾಡಲಾಗುವುದು ಎಂದು ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಡಿಸಿಪಿ ನಾಗೇಶ್ ಹೇಳಿದರು.

ದಕ್ಷಿಣ ಉಪ ವಿಭಾಗದ ಪೊಲೀಸರು ನಗರದಲ್ಲಿ ಶನಿವಾರ ಏರ್ಪಡಿಸಿದ್ದ ರಂಜಾನ್ ಶಾಂತಿ ಸಭೆಯಲ್ಲಿ ಮಾತನಾಡಿದರು. ಈಗಾಗಲೇ ತಯಾರಿ ಮಾಡಿಕೊಳ್ಳಲಾಗುತ್ತಿದೆ. ಹಿಂದಿನ ವರ್ಷ ಮಾಡಿದ ಭದ್ರತಾ ಕ್ರಮಗಳನ್ನು ಅವಲೋಕಿಸಿ ಈ ಬಾರಿ ಅದಕ್ಕಿಂತ ಇನ್ನೂ ಉತ್ತಮವಾಗಿ ಬಂದೋಬಸ್ತ್ ಮಾಡಲಾಗುವುದು. ಹೆಚ್ಚಿನ ಸಿಬ್ಬಂದಿ ನಿಯೋಜಿಸಲಾಗುವುದು ಎಂದು ಅವರು ತಿಳಿಸಿದರು.

ಹಬ್ಬದ ದಿನ ವಾಹನ ಸುಗಮ ವಾಹನ ಸಂಚಾರಕ್ಕೆ ಅವಕಾಶ ಮಾಡಿಕೊಡುವುದು ಸಹ ಆದ್ಯತೆಯಾಗಲಿದೆ. ಆದ್ದರಿಂದ ಎಲ್ಲೆಲ್ಲಿ ಸಂಚಾರ ಮಾರ್ಗ ಬದಲಾವಣೆ ಮಾಡಬೇಕು, ಬ್ಯಾರಿಕೇಡ್ ಹಾಕಬೇಕು ಎಂಬುದರ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಲಾಗುವುದು. ಇನ್ನೆರಡು ದಿನಗಳಲ್ಲಿ ಮಾರ್ಗ ಬದಲಾವಣೆಯ ಮಾಹಿತಿಯನ್ನು ನೀಡಲಾಗುವುದು ಎಂದು ಹೇಳಿದರು.

ADVERTISEMENT

ಮಹಾನಗರ ಪಾಲಿಕೆ ಕಮಿಷನರ್ ಪ್ರಶಾಂತ್ ಮಿಶ್ರಾ ಮಾತನಾಡಿ, ಪ್ರಾರ್ಥನಾ ಸ್ಥಳಗಳ ಅಕ್ಕಪಕ್ಕದಲ್ಲಿ ಸ್ವಚ್ಛತೆ ಮಾಡಲು ಸಿಬ್ಬಂದಿ ನಿಯೋಜಿಸಲಾಗುವುದು. ನೀರು ಪೂರೈಕೆಗೆ ವ್ಯವಸ್ಥೆ ಮಾಡಲಾಗುವುದು. ಯಾವುದೇ ಬೇಡಿಕೆ ಇದ್ದರೆ ಸಹಾಯಕ ಆಯುಕ್ತರಿಗೆ ಮನವಿ ಮಾಡಿ. ನಿಯಂತ್ರಣ ಕೊಠಡಿಗೂ ತಿಳಿಸಿ ಎಂದರು.

ನಾಗರಿಕರಾದ ಅಬ್ದುಲ್ ಸತ್ತಾರ್, ಮಹಮ್ಮದ್ ಯೂಸೂಫ್, ಕುಮಾರಗೌಡ ಪಾಟೀಲ, ಮಹಮ್ಮದ್ ಯೂಸೂಫ್ ಸವಣೂರು ಮಾತನಾಡಿ, ಎಲ್ಲ ಹಬ್ಬಗಳನ್ನು ಹಿಂದೂ– ಮುಸ್ಲಿಮರು ಸೇರಿ ಆಚರಣೆ ಮಾಡುತ್ತಿದ್ದೇವೆ ಎಂದರು.

ನೀರಿನ ವ್ಯವಸ್ಥೆ ಮಾಡಿ, ವಿದ್ಯುತ್ ನಿಲುಗಡೆ ಬೇಡ

ಹಬ್ಬ ಸಮೀಪಿಸುತ್ತಿದ್ದು, ನೀರಿನ ಬವಣೆ ಸಹ ತೀವ್ರವಾಗಿದೆ. 10–12 ದಿನಕ್ಕೊಮ್ಮೆ ನೀರು ಬಿಡುತ್ತಿರುವುದರಿಂದ ಹಬ್ಬದ ಆಚರಣೆಗೆ ತೊಂದರೆ ಆಗಲಿದೆ. ಆದ್ದರಿಂದ ಸಮರ್ಪಕ ನೀರು ಪೂರೈಕೆಯಾಗುವಂತೆ ನೋಡಿಕೊಳ್ಳಿ ಎಂದು ಸಭೆಯಲ್ಲಿ ಭಾಗವಹಿಸಿದ್ದವರು ಮನವಿ ಮಾಡಿದರು.

ಕೆಲವು ಭಾಗಗಳಲ್ಲಿ ಅನಿಯಂತ್ರಿತ ಲೋಡ್‌ ಶೆಡ್ಡಿಂಗ್ ಮಾಡಲಾಗುತ್ತಿದೆ. ಇದರಿಂದಾಗಿ ಉಪವಾಸ ಮಾಡುವ, ನಸುಕಿನಲ್ಲಿ ಪ್ರಾರ್ಥನೆಗೆ ತೆರಳುವವರಿಗೆ ತೊಂದರೆ ಆಗುತ್ತಿದೆ. ನಿಲುಗಡೆ ರಹಿತ ವಿದ್ಯುತ್ ಪೂರೈಕೆಗೆ ಕ್ರಮ ಕೈಗೊಳ್ಳಿ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.