ಹುಬ್ಬಳ್ಳಿ: ‘ಚಿನ್ನ ಕಳ್ಳಸಾಗಣೆಗೆ ಸಂಬಂಧಿಸಿದ ರನ್ಯಾ ರಾವ್ ಪ್ರಕರಣವನ್ನು ಸಮರ್ಪಕವಾಗಿ ನಿಭಾಯಿಸದ ರಾಜ್ಯ ಸರ್ಕಾರ ಯಾರನ್ನೋ ರಕ್ಷಿಸಲು ಯತ್ನಿಸುತ್ತಿದೆ ಎಂಬಂತೆ ತೋರುತ್ತದೆ’ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಆರೋಪಿಸಿದರು.
‘ಪ್ರಕರಣದಲ್ಲಿ ರಾಜಕಾರಣಿಗಳು, ಸಚಿವರು ಭಾಗಿಯಾದ ಬಗ್ಗೆ ವರದಿಗಳಿದ್ದು, ಇದು ದೇಶದ್ರೋಹದ ಕೆಲಸ. ಚಿನ್ನ ಎಲ್ಲಿಂದ ಬಂದು, ಎಲ್ಲಿಗೆ ಹೋಗುತ್ತದೆ ಎಂಬುದು ಯಾರಿಗೂ ಗೊತ್ತಿಲ್ಲ. ಹಣ ದೇಶವಿರೋಧಿ ಕೃತ್ಯಗಳಿಗೆ ಅಥವಾ ನಕ್ಸಲ್ ಚಟುವಟಿಕೆಗೆ ಹೋಗುತ್ತಿತ್ತಾ ಎಂಬುದು ಕೂಡ ಸ್ಪಷ್ಟವಿಲ್ಲ’ ಎಂದು ಅವರು ಗುರುವಾರ ಸುದ್ದಿಗಾರರಿಗೆ ತಿಳಿಸಿದರು.
‘ಪ್ರಕರಣವನ್ನು ಸಿಐಡಿ ತನಿಖೆಗೆ ಕೊಡಲಾಗಿದೆಯೇ ಅಥವಾ ಇಲ್ಲವೇ ಎಂಬುದು ಕೂಡ ಸ್ಪಷ್ಟವಿಲ್ಲ. ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿಯವರು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ, ನಿಷ್ಪಕ್ಷಪಾತ ತನಿಖೆ ನಡೆಸಬೇಕು’ ಎಂದರು.
‘ನಾನೇ ಸಿಎಂ’ ಎನ್ನುವ ಸಿದ್ದರಾಮಯ್ಯ ಅವರ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ‘ನಾನೇ ಇರ್ತಿನಿ ಎನ್ನುವುದೇ ದೊಡ್ಡ ವಿಷಯ. ಡಿ.ಕೆ ಶಿವಕುಮಾರ್ ಮತ್ತು ಅವರ ಬೆಂಬಲಿಗರು ಇದನ್ನು ಹೇಳಬೇಕು. ನೀವೇ ಇರಬೇಕು ಎನ್ನುವುದು ನಮ್ಮ ಆಶಯ. ಚೆನ್ನಾಗಿ ಕೆಲಸ ಮಾಡಿ, ಲೂಟಿ ಮಾಡಬೇಡಿ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.