ADVERTISEMENT

ಅಪರೂಪದ ಕಾಯಿಲೆ: ಹುಧಾ ಮಹಾನಗರ ಪಾಲಿಕೆ ಆಸ್ಪತ್ರೆಯಲ್ಲಿ ಮಹಿಳೆಗೆ ಶಸ್ತ್ರಚಿಕಿತ್ಸೆ

​ಪ್ರಜಾವಾಣಿ ವಾರ್ತೆ
Published 13 ಜನವರಿ 2026, 5:13 IST
Last Updated 13 ಜನವರಿ 2026, 5:13 IST
ಬೆಳಗಾವಿ ಜಿಲ್ಲೆಯ ಗೋಕಾಕಿನ ಮಹಿಳೆಯ ಮೂತ್ರಕೋಶದಲ್ಲಿ ಬೆಳೆದ ಗಡ್ಡೆಯ ಶಸ್ತ್ರಚಿಕಿತ್ಸೆ ನಡೆಸಿದ ಚಿಟಗುಪ್ಪಿ ಆಸ್ಪತ್ರೆಯ ವೈದ್ಯರು ಹಾಗೂ ವೈದ್ಯಕೀಯೇತರ ಸಿಬ್ಬಂದಿ
ಬೆಳಗಾವಿ ಜಿಲ್ಲೆಯ ಗೋಕಾಕಿನ ಮಹಿಳೆಯ ಮೂತ್ರಕೋಶದಲ್ಲಿ ಬೆಳೆದ ಗಡ್ಡೆಯ ಶಸ್ತ್ರಚಿಕಿತ್ಸೆ ನಡೆಸಿದ ಚಿಟಗುಪ್ಪಿ ಆಸ್ಪತ್ರೆಯ ವೈದ್ಯರು ಹಾಗೂ ವೈದ್ಯಕೀಯೇತರ ಸಿಬ್ಬಂದಿ   

ಹುಬ್ಬಳ್ಳಿ: ಇಲ್ಲಿಯ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ಚಿಟಗುಪ್ಪಿ ಆಸ್ಪತ್ರೆ ವೈದ್ಯರು ಮೂತ್ರಕೋಶಕ್ಕೆ ಸಂಬಂಧಪಟ್ಟ (Inflammatory Immuno myofibroblastic Tumor of Bladder) ಅಪರೂಪದ ಕಾಯಿಲೆಯಿಂದ ಬಳಲುತ್ತಿದ್ದ ಮಹಿಳೆಯೊಬ್ಬರಿಗೆ ಶಸ್ತ್ರಚಿಕಿತ್ಸೆ ಮಾಡಿ ಗುಣಪಡಿಸಿದ್ದಾರೆ.

ಬೆಳಗಾವಿ ಜಿಲ್ಲೆಯ ಗೋಕಾಕಿನ 45 ವರ್ಷದ ಖತೀಜಾ ಅವರಿಗೆ ಮೂತ್ರದಲ್ಲಿ ರಕ್ತ ಹೋಗುತ್ತಿತ್ತು. ಚಿಟಗುಪ್ಪಿ ಆಸ್ಪತ್ರೆಗೆ ದಾಖಲಾಗಿದ್ದ ಅವರನ್ನು, ಮುಖ್ಯ ವೈದ್ಯಾಧಿಕಾರಿ ಡಾ. ದಂಡಪ್ಪನವರ ನೇತೃತ್ವದ ತಂಡ ಲ್ಯಾಪ್ರೋಸ್ಕೋಪಿ ಶಸ್ತ್ರಚಿಕಿತ್ಸೆ ಮೂಲಕ ಮೂತ್ರಕೋಶದಲ್ಲಿ ಬೆಳೆದಿದ್ದ ಅರ್ಧ ಕೆಜಿಗೂ ಹೆಚ್ಚು ಗಾತ್ರದ ಗಡ್ಡೆ ಹೊರತೆಗೆದಿದೆ.

‘ಮೂತ್ರಕೋಶದಲ್ಲಿ ಉಂಟಾಗುವ ಅಪರೂಪದ ಕಾಯಿಲೆಯಿಂದ ಬಳಲುತ್ತಿದ್ದ ಮಹಿಳೆ, ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವಷ್ಟು ಶಕ್ತರಾಗಿರಲಿಲ್ಲ. ಚಿಟಗುಪ್ಪಿ ಆಸ್ಪತ್ರೆಯಲ್ಲಿ ದಾಖಲಿಸಿಕೊಂಡು ಚಿಕಿತ್ಸೆ ನೀಡಲಾಯಿತು. ಅವರಿಗೆ ಏಳು–ಎಂಟು ತಿಂಗಳಿನಿಂದ ಮೂತ್ರದಲ್ಲಿ ರಕ್ತ ಹೋಗುತ್ತಿತ್ತು. ಕಾಲ್ಮಡಿ ಚೀಲದಲ್ಲಿ ಮೈಕ್ರೋ ಕ್ಯಾಮೆರಾ ಹಾಕಿ ಪರೀಕ್ಷಿಸಿದಾಗ, ಮೂತ್ರಕೋಶ ಸಂಪೂರ್ಣ ಗಡ್ಡೆಯಿಂದ ಆವೃತ್ತವಾಗಿರುವುದು ಕಂಡು ಬಂದಿತ್ತು’ ಎಂದು ಡಾ. ಶ್ರೀಧರ ತಿಳಿಸಿದರು.

ADVERTISEMENT

‘ನರರೋಗ ತಜ್ಞ ಡಾ. ಪವನ ಜೋಶಿ ಅವರು ಮಹಿಳೆಯನ್ನು ಪರೀಕ್ಷಿಸಿದಾಗ, ಕ್ಯಾನ್ಸರ್‌ ಲಕ್ಷಣಗಳು ಕಂಡುಬಂದಿತ್ತು. ಬೈಯಾಪ್ಸಿಯಲ್ಲಿ ಮೂತ್ರಕೋಶ ಕ್ಯಾನ್ಸರ್‌ ವರದಿ ಬಂದಿತ್ತು. ಅನುಮಾನ ಬಂದು ಎಚ್‌ಪಿಆರ್‌ ರಕ್ತ ತಪಾಸಣೆ ಮಾಡಿಸಲಾಯಿತು. ಅದರಲ್ಲಿ ಮಯೋಫೈಬ್ರೊಬ್ಲಾಸ್ಟಿಕ್‌ ಟ್ಯೂಮರ್‌ ಎನ್ನುವ, ದೇಶದಲ್ಲಿಯೇ ಅಪರೂಪದ ರೋಗ ಪತ್ತೆಯಾಗಿತ್ತು. ಅದನ್ನು ಖಾತ್ರಿ ಪಡೆಸಿಕೊಳ್ಳಲು ಬೆಂಗಳೂರಿಗೆ ಕಳುಹಿಸಲಾಯಿತು. ಈ ಪರೀಕ್ಷೆಗೆ ತಗುಲುವ ಸುಮಾರು ₹10 ಸಾವಿರದಷ್ಟು ವೆಚ್ಚವನ್ನು ನಗರದ ಸುಮುಖ ತಪಾಸಣಾ ಕೇಂದ್ರದ ಡಾ. ಚೌಕಿಮಠ ಅವರು ಭರಿಸಿದ್ದಾರೆ’ ಎಂದರು.

‘ಕಾಲ್ಮಡಿ ಚೀಲದಲ್ಲಿಯೇ ಪೈಪ್‌ ಹಾಕಿ ಮಾಂಸ ತೆಗೆಯಬೇಕಾಗುತ್ತದೆ. ಆದರೆ, 15 ಸೆ.ಮೀ. ಉದ್ದ–ಅಗಲದಲ್ಲಿ ಗಡ್ಡೆ ಬೆಳೆದಿದ್ದರಿಂದ, ಲ್ಯಾಪ್ರೋಸ್ಕೋಪಿ ಮೂಲಕ ತೆಗೆದು, ಹೊಲಿಗೆ ಹಾಕಲಾಯಿತು. ಸಾಕಷ್ಟು ವೈದ್ಯಕೀಯ ಸವಾಲಿನ ನಡುವೆ ಏಳು ಗಂಟೆ ಶಸ್ತ್ರಚಿಕಿತ್ಸೆ ನಡೆಸಲಾಯಿತು. ಇದೀಗ ಮಹಿಳೆ ಸಂಪೂರ್ಣ ಗುಣಮುಖರಾಗಿದ್ದು, ಬಿಡುಗಡೆ ಹಂತದಲ್ಲಿದ್ದಾರೆ‘ ಎಂದು ತಿಳಿಸಿದರು.

ಖತೀಜಾ ಅವರ ಸ್ಥಿತಿ ಚಿಂತಾಜನಕವಾಗಿತ್ತು. ಬಡವರಾಗಿರುವ ನಮಗೆ ವೈದ್ಯಕೀಯ ವೆಚ್ಚ ಭರಿಸುವಷ್ಟು ಶಕ್ತಿಯಿರಲಿಲ್ಲ. ಚಿಟಗುಪ್ಪಿ ಆಸ್ಪತ್ರೆ ಅತ್ತೆ ಅವರಿಗೆ ಮರುಜನ್ಮ ನೀಡಿದೆ

–ನದೀಮ್‌ (ಖತೀಜಾ ಅವರ ಅಳಿಯ)

ಅಪರೂಪದ ರೋಗ: ಡಾ. ಶ್ರೀಧರ

‘ಮೇಲ್ನೋಟಕ್ಕೆ ಈ ರೋಗ ಕ್ಯಾನ್ಸರ್‌ನಂತೆಯೇ ಕಂಡುಬರುತ್ತದೆ. ಉನ್ನತ ಮಟ್ಟದ ಪರೀಕ್ಷೆ ನಡೆಸಿದಾಗ ಮಾತ್ರ ನಿಜವಾದ ರೋಗ ಪತ್ತೆಯಾಗುತ್ತದೆ. ಈ ಮೈಯೋಫೈಬ್ರೊಬ್ಲಾಸ್ಟಿಕ್ ಗೆಡ್ಡೆ ಉರಿಯೂತದ ಕೋಶಗಳ ಸೌಮ್ಯ ಬೆಳವಣಿಗೆಯಾಗಿದೆ. ಇದು ಜಗತ್ತಿನಲ್ಲಿಯೇ ತೀರಾ ಅಪರೂಪದ ರೋಗವಾಗಿದ್ದು ನೋವುರಹಿತವಾಗಿ ಮೂತ್ರದಲ್ಲಿ ರಕ್ತ ಹೋಗುವಂತೆ ಮಾಡುತ್ತದೆ. ಈ ಶಸ್ತ್ರಚಿಕಿತ್ಸೆಗೆ ಖಾಸಗಿ ಆಸ್ಪತ್ರೆಗಳಲ್ಲಿ ಅಂದಾಜು ₹5 ಲಕ್ಷದವರೆಗೆ ವೆಚ್ಚವಾಗುತ್ತದೆ. ನಮ್ಮದು ಪಾಲಿಕೆ ಆಸ್ಪತ್ರೆಯಾಗಿರುವುದರಿಂದ ಸಂಪೂರ್ಣ ಉಚಿತವಾಗಿ ಮಾಡಲಾಗಿದೆ’ ಎಂದು ಡಾ. ಶ್ರೀಧರ ದಂಡಪ್ಪನವರ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.