ADVERTISEMENT

25ರಿಂದ ರಾಯಣ್ಣ ಸಾಂಸ್ಕೃತಿಕ ಉತ್ಸವ

ಧಾರವಾಡದಲ್ಲಿ ಮೂರು ದಿನ ನಡೆಯಲಿರುವ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 9 ಜನವರಿ 2021, 15:19 IST
Last Updated 9 ಜನವರಿ 2021, 15:19 IST

ಹುಬ್ಬಳ್ಳಿ: ಕನಕ ಕಲಾ ಸಾಂಸ್ಕೃತಿಕ ಕೇಂದ್ರದ ವತಿಯಿಂದ ಜ. 25ರಿಂದ ಮೂರು ದಿನ ಸಂಗೊಳ್ಳಿ ರಾಯಣ್ಣ ಸಾಂಸ್ಕೃತಿಕ ಉತ್ಸವ ಹಮ್ಮಿಕೊಳ್ಳಲಾಗಿದೆ ಎಂದು ಧಾರವಾಡ ತಾಲ್ಲೂಕಿನಮನಸೂರಿನ ರೇವಣಸಿದ್ಧೇಶ್ವರ ಮಹಾಮಠದ ಸ್ವಾಮೀಜಿ ಹಾಗೂ ಉತ್ಸವದ ಅಧ್ಯಕ್ಷರೂ ಆದ ಡಾ. ಬಸವರಾಜ ದೇವರು ತಿಳಿಸಿದರು.

ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ‘ಮೊದಲ ದಿನ ಬೆಳಿಗ್ಗೆ 8 ಗಂಟೆಗೆ ಮನಸೂರಿನ ಮಠದಲ್ಲಿ ಜ್ಯೋತಿ ಬೆಳಗಿಸಿ, ಧ್ಜಜಾರೋಹಣ ಮಾಡುವ ಮೂಲಕ ಉತ್ಸವಕ್ಕೆ ಚಾಲನೆ ನೀಡಲಾಗುವುದು. ಇನ್ನುಳಿದ ಎರಡು ದಿನಗಳ ಕಾರ್ಯಕ್ರಮಗಳು ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ ನಡೆಯಲಿವೆ. 26ರಂದು ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಡಾ. ಎಂ.ಎನ್‌. ನಂದೀಶ್ ಹಂಜೆ ಉತ್ಸವ ಉದ್ಘಾಟಿಸಲಿದ್ದಾರೆ. ರಾಯಣ್ಣ ಬದುಕು ಹೋರಾಟ ಕುರಿತು ವಿಚಾರ ಸಂಕಿರಣ, ಕವಿಗೋಷ್ಠಿ, ನಾಟಕ, ನೃತ್ಯ, ಸಂಗೀತ ಮತ್ತು ಕಲಾ ತಂಡಗಳ ಪ್ರದರ್ಶನ ಜರುಗಲಿವೆ’ ಎಂದರು.

ಉದ್ಘಾಟನಾ ಕಾರ್ಯಕ್ರಮದಲ್ಲಿ ಹಂಪಿ ಕನ್ನಡ ವಿಶ್ವವಿದ್ಯಾಲಯದ ಡಾ. ಎಫ್‌.ಡಿ. ಹಳ್ಳಿಕೇರಿ, ನಿವೃತ್ತ ವಾರ್ತಾಧಿಕಾರಿ ಬಸವರಾಜ ಆಕಳವಾಡಿ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ಪ್ರೊ. ಲಿಂಗರಾಜ ಅಂಗಡಿ, ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಪ್ರಕಾಶ ಉಡಿಗೇರಿ, ಗಾಯಕ ಬಸವಲಿಂಗಯ್ಯ ಹಿರೇಮಠ ಪಾಲ್ಗೊಳ್ಳುವರು.

ADVERTISEMENT

27ರಂದು ರಾಜ್ಯಮಟ್ಟದ ಯುವ ಸಮಾವೇಶ, ಸಂಗೊಳ್ಳಿ ರಾಯಣ್ಣ ಪ್ರಶಸ್ತಿ ಪ್ರದಾನ, ಸಮಾರೋಪ ಮತ್ತು ಸಾಂಸ್ಕೃತಿಕ ಉತ್ಸವ ನಡೆಯಲಿವೆ. ಸಮಾರೋಪದಲ್ಲಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ, ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ಸಚಿವರಾದ ಕೆ.ಎಸ್‌. ಈಶ್ವರಪ್ಪ, ಬೈರತಿ ಬಸವರಾಜ ಭಾಗವಹಿಸಲಿದ್ದಾರೆ.

ಉತ್ಸವದಲ್ಲಿ ಸಂಗೊಳ್ಳಿ ರಾಯಣ್ಣ ಕುರಿತು ಕವಿಗೋಷ್ಠಿ ನಡೆಯಲಿದ್ದು ಆಸಕ್ತರು ಕವನಗಳನ್ನು ಕಳುಹಿಸಬೇಕು, ಮೆರವಣಿಗೆಯಲ್ಲಿ ಪಾಲ್ಗೊಳ್ಳಲು ಆಸಕ್ತಿ ಹೊಂದಿರುವ ಕಲಾ ತಂಡಗಳು ಹೆಸರು ನೋಂದಾಯಿಸಬೇಕು ಎಂದು ಸ್ವಾಮೀಜಿ ಕೋರಿದ್ದಾರೆ.

2019–2020ನೇ ಸಾಲಿನಲ್ಲಿ ಪ್ರಕಟಿತ ಉತ್ತಮ ಪುಸ್ತಕಗಳಿಗೆ ‘ರಾಷ್ಟ್ರವೀರ ಸಂಗೊಳ್ಳಿ ರಾಯಣ್ಣ’ ಪ್ರಶಸ್ತಿ ನೀಡಲಾಗುತ್ತದೆ. ಇದಕ್ಕಾಗಿ ಪುಸ್ತಕಗಳನ್ನು ಆಹ್ವಾನಿಸಲಾಗಿದೆ.ಅರ್ಹರು ಅಧ್ಯಕ್ಷರು, ರೇವಣಸಿದ್ಧೇಶ್ವರ ಮಹಾಮಠ, ಮನಸೂರ. ತಾಲ್ಲೂಕು ಹಾಗೂ ಜಿಲ್ಲೆ: ಧಾರವಾಡ, ಮೊ. 9448923422 ಸಂಪರ್ಕಿಸುವಂತೆ ಅವರು ತಿಳಿಸಿದರು.

‘ರಾಯಣ್ಣ’ ಪ್ರಶಸ್ತಿಗೆ ಆಯ್ಕೆಯಾದವರು

ಕೆ.ಈ. ಕಾಂತೇಶ (ಶಿವಮೊಗ್ಗ, ವಿಭಾಗ:ಮೀಸಲಾತಿ ಹೋರಾಟ), ಅಮೃತರಾವ್ ಜಮಕೂಡೆ (ಬೀದರ್, ರಾಜನೀತಿ), ಶಿವರಾಜ್ (ಬೆಂಗಳೂರು, ಆಡಳಿತ), ಕೆ. ಮಂಜುನಾಥ ದಂಪತಿ (ಬೆಂಗಳೂರು), ಡಿ.ಬಿ. ಸಿದ್ಧಾಪುರ (ಬಾಗಲಕೋಟೆ, ಸಮಾಜಸೇವೆ), ಎಂ.ಕೆ. ದಿನೇಶ್ (ಬೆಂಗಳೂರು, ಸಾಮಾಜಿಕ ಪರಿವರ್ತನೆ), ಕ್ರಾಂತಿವೀರ ಆರ್ಟ್ಸ್‌ (ಉಗರಗೋಳ ತಾ:ಸವದತ್ತಿ, ಶಿಲ್ಪಕಲೆ), ಪರಮೇಶ ಕೃಷ್ಣಪ್ಪ (ಬೆಂಗಳೂರು, ಹಾಲುಮತ ಜಾಗೃತಿ ಅಭಿವೃದ್ಧಿ ಚಿಂತನೆ), ಶಿವಾನಂದ ಮುತ್ತಣ್ಣನವರ (ಹುಬ್ಬಳ್ಳಿ, ಯುವ ಚಳವಳಿ), ಹರೀಶ (ಹುಬ್ಬಳ್ಳಿ, ಮಾಧ್ಯಮ), ಧಮ್ಮೂರ ಶೇಖರ (ಬಳ್ಳಾರಿ, ನಾಯಕತ್ವ), ಪಿ. ಗಣೇಶ (ಬೆಂಗಳೂರು, ನ್ಯಾಯ), ಬಾಬಣ್ಣ (ಆನೇಕಲ್‌, ಉದ್ದಿಮೆ) ಮತ್ತು ಬಸವರಾಜ ಮಲಕಾರಿ (ಧಾರವಾಡ, ಕುರುಬ ಯುವ ಸಂಘಟನೆ).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.