ADVERTISEMENT

ಆಡಳಿತ ಸೇವೆಯಲ್ಲಿ ಅಂಗವಿಕಲರಿಗೆ ಪ್ರಾತಿನಿಧ್ಯ

ದಂತ ರಕ್ಷಣಾ ಕಾರ್ಯಾಗಾರ: ಜಿಲ್ಲಾಧಿಕಾರಿ ನಿತೇಶ್ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 19 ಡಿಸೆಂಬರ್ 2020, 13:29 IST
Last Updated 19 ಡಿಸೆಂಬರ್ 2020, 13:29 IST
ಹುಬ್ಬಳ್ಳಿಯಲ್ಲಿ ಶನಿವಾರ ನಡೆದ ದಂತ ರಕ್ಷಣಾ ಕಾರ್ಯಾಗಾರದಲ್ಲಿ ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಮಾತನಾಡಿದರು
ಹುಬ್ಬಳ್ಳಿಯಲ್ಲಿ ಶನಿವಾರ ನಡೆದ ದಂತ ರಕ್ಷಣಾ ಕಾರ್ಯಾಗಾರದಲ್ಲಿ ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಮಾತನಾಡಿದರು   

ಹುಬ್ಬಳ್ಳಿ: ಅಖಿಲ ಭಾರತ ಆಡಳಿತ ಸೇವೆಯಲ್ಲಿ ಅಂಗವಿಕಲರಿಗೆ ಹೆಚ್ಚಿನ ಪ್ರಾತಿನಿಧ್ಯ ಒದಗಿಸಲಾಗಿದ್ದು, ಪ್ರತಿ ವರ್ಷವೂ ಯು‍ಪಿಎಸ್‌ಸಿ ಪರೀಕ್ಷೆಯಲ್ಲಿ ಅಂಗವಿಕಲರು ಉನ್ನತ ಮಟ್ಟದ ಅಧಿಕಾರಿಗಳಾಗಿ ಹೊರ ಬರುತ್ತಿದ್ದಾರೆ. ನಿಮಗೆಲ್ಲರಿಗೂ ಸಾಧನೆಯ ದೃಢ ನಿಶ್ಚಯ ಇರಬೇಕು ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಹೇಳಿದರು.

ಜ್ಯೋತಿರ್ಗಮಯ ದೃಷ್ಟಿ ವಿಕಲಚೇತನರ ಬೋಧಕರ ಸಂಘ ಇಲ್ಲಿನ ಆನಂದ ನಗರದ ಅಂಧಮಕ್ಕಳ ಸರ್ಕಾರಿ ಪಾಠಶಾಲೆಯಲ್ಲಿ ಶನಿವಾರ ಆಯೋಜಿಸಿದ್ದ ದಂತ ರಕ್ಷಣಾ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು ‘ಹಲ್ಲು ಹಾಗೂ ಬಾಯಿಯ ಶುಚಿತ್ವಕ್ಕೆ ಮಹತ್ವ ನೀಡಬೇಕು. ಕನ್ನಡದಲ್ಲಿ ಮುದ್ರಿಸಲಾದ ‘ಹಲ್ಲಿನ ಶಿಕ್ಷಕರು’ ಬ್ರೈಲ್ ಪುಸ್ತಕ, ಅಂಧರಿಗೆ ಸಹಕಾರಿಯಾಗಿದೆ. ದಂತ ರಕ್ಷಣಾ ಕಾರ್ಯಾಗಾರದಲ್ಲಿ 21‌ ಜನ ಶಿಕ್ಷಕರಿಗೆ ತರಬೇತಿ ನೀಡಲಾಗುತ್ತಿದೆ. ಜ್ಯೋತಿರ್ಗಮಯ ದಂತ ಸಂರಕ್ಷಣಾ ಸಂಸ್ಥೆ ದಂತ ಆರೋಗ್ಯದ ಕುರಿತು ಕನ್ನಡದಲ್ಲಿ ಬ್ರೈಲ್ ಪುಸ್ತಕ ಹೊರತಂದಿದ್ದು ಶ್ಲಾಘನೀಯ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕಿ ಭಾರತಿ ಶೆಟ್ಟರ್, ಜ್ಯೋತಿರ್ಗಮಯ ಸಂಸ್ಥೆ ಅಧ್ಯಕ್ಷ ‌ ಡಾ. ವೈ. ಸ್ಯಾಮ್ಯಯಲ್‌ ವಿಶಾಲ, ಪ್ರಾಧ್ಯಾಪಕಿ ಬಿಂದು ಪಾಟೀಲ, ಡಾ. ಸ್ಮಿತಾ ಪಾಟೀಲ, ಡಾ. ಸವಿತಾ ಶೆಟ್ಟರ್, ಡಾ. ಲಕ್ಷ್ಮೀ ಲಖಾಡೆ, ಡಾ. ಗೋಬಲೆ, ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಡಿ‌.ಎನ್.ಮೂಲಿಮನಿ, ಅಂಧ ಮಕ್ಕಳ ಸರ್ಕಾರಿ ಪಾಠಾಶಾಲೆ ಅಧೀಕ್ಷಕ ಅಣ್ಣಪ್ಪ ಕೋಳಿ ಇದ್ದರು.

ADVERTISEMENT

‘7 ಲಕ್ಷ ಜನರಿಗೆ ಲಸಿಕೆ ವಿತರಿಸಲು ಸಿದ್ಧತೆ’
ಹುಬ್ಬಳ್ಳಿಯ ಸುಮಾರು 7 ಲಕ್ಷ ಜನರಿಗೆ ಕೋವಿಡ್ ಲಸಿಕೆ ನೀಡಲು ಸಿದ್ದತೆ ಮಾಡಿಕೊಳ್ಳಲಾಗುತ್ತಿದೆ. ಮೊದಲ ಹಂತದಲ್ಲಿ 20 ಸಾವಿರ ಆರೋಗ್ಯ ಕಾರ್ಯಕರ್ತರಿಗೆ ಲಸಿಕೆ ನೀಡಲಾಗುವುದು ಎಂದು ನಿತೇಶ್‌ ಹೇಳಿದರು.

‘ಎರಡನೇ ಹಂತದಲ್ಲಿ ಪೌರ ಕಾರ್ಮಿಕರು, ಪೊಲೀಸ್ ಸಿಬ್ಬಂದಿ ಮತ್ತು ಮೂರನೇ ಹಂತದಲ್ಲಿ 50 ವರ್ಷ ಮೇಲ್ಪಟ್ಟ ಎಲ್ಲರಿಗೂ ಲಸಿಕೆ ನೀಡಲಾಗುತ್ತದೆ. ಜಿಲ್ಲೆಯಲ್ಲಿ ನಿತ್ಯ ಮೂರು ಸಾವಿರ ಕೋವಿಡ್‌ ಪರೀಕ್ಷೆ ನಡೆಸಲಾಗುತ್ತಿದೆ. 10ರಿಂದ 15 ಜನರಲ್ಲಿ ಮಾತ್ರ ಸೋಂಕು ಪತ್ತೆಯಾಗುತ್ತಿದೆ. ಸಕ್ರಿಯ ಪ್ರಕರಣಗಳ ಸಂಖ್ಯೆ 100ರ ಒಳಗೆ ಇದೆ’ ಎಂದರು.

‘ಪಲ್ಸ್‌ ಪೋಲಿಯೊ ಲಸಿಕಾ ಅಭಿಯಾನದಂತೆ ಕೋವಿಡ್‌ ಲಸಿಕೆ ನೀಡಲಾಗುವುದು. ಪ್ರಾಥಮಿಕ ಚಿಕಿತ್ಸೆ ಕೇಂದ್ರಗಳಿಂದ ಹಿಡಿದು, ತಾಲ್ಲೂಕು ಮತ್ತು ಜಿಲ್ಲಾ ಮಟ್ಟದ ಕೇಂದ್ರಗಳಲ್ಲಿ ಲಸಿಕೆ ಸಂಗ್ರಹಿಸಲಾಗುತ್ತಿದೆ. ಚುನಾವಣೆ ಮಾದರಿಯಲ್ಲಿ ಬೂತ್‌ಗಳನ್ನು ನಿರ್ಮಿಸಿ ಒಂದು ಬೂತ್‌ನಲ್ಲಿ ದಿನಕ್ಕೆ 100 ಜನರಿಗೆ ಲಸಿಕೆ ವಿತರಿಸಲಾಗುವುದು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.