ADVERTISEMENT

‘ಮಠದ ಅಭಿವೃದ್ಧಿಗೆ ಶ್ರಮಿಸಲು ಸಿದ್ಧ’

ಮೂರುಸಾವಿರ ಮಠದಲ್ಲಿ ಚನ್ನಬಸವೇಶ್ವರ ಪ್ರಸಾದ ನಿಲಯ ಉದ್ಘಾಟನೆ

​ಪ್ರಜಾವಾಣಿ ವಾರ್ತೆ
Published 15 ಏಪ್ರಿಲ್ 2022, 13:16 IST
Last Updated 15 ಏಪ್ರಿಲ್ 2022, 13:16 IST
ಹುಬ್ಬಳ್ಳಿಯ ಮೂರುಸಾವಿರ ಮಠದಲ್ಲಿ ಗುರುವಾರ ನಡೆದ ನವೀಕೃತ ಚನ್ನಬಸವೇಶ್ವರ ಪ್ರಸಾದ ನಿಲಯ ಉದ್ಘಾಟನಾ ಸಮಾರಂಭದಲ್ಲಿ ಶಾಸಕ ಪ್ರಸಾದ ಅಬ್ಬಯ್ಯ ಮಾತನಾಡಿದರು. ಕೆಎಲ್‌ಇ ಸಂಸ್ಥೆಯ ನಿರ್ದೇಶಕ ಶಂಕರಣ್ಣ ಮುನವಳ್ಳಿ, ಮಠದ ಗುರುಸಿದ್ಧರಾಜ ಯೋಗೀಂದ್ರ ಸ್ವಾಮೀಜಿ, ಬಿಜೆಪಿ ಮುಖಂಡ ಮೋಹನ ಲಿಂಬಿಕಾಯಿ ಇದ್ದಾರೆ
ಹುಬ್ಬಳ್ಳಿಯ ಮೂರುಸಾವಿರ ಮಠದಲ್ಲಿ ಗುರುವಾರ ನಡೆದ ನವೀಕೃತ ಚನ್ನಬಸವೇಶ್ವರ ಪ್ರಸಾದ ನಿಲಯ ಉದ್ಘಾಟನಾ ಸಮಾರಂಭದಲ್ಲಿ ಶಾಸಕ ಪ್ರಸಾದ ಅಬ್ಬಯ್ಯ ಮಾತನಾಡಿದರು. ಕೆಎಲ್‌ಇ ಸಂಸ್ಥೆಯ ನಿರ್ದೇಶಕ ಶಂಕರಣ್ಣ ಮುನವಳ್ಳಿ, ಮಠದ ಗುರುಸಿದ್ಧರಾಜ ಯೋಗೀಂದ್ರ ಸ್ವಾಮೀಜಿ, ಬಿಜೆಪಿ ಮುಖಂಡ ಮೋಹನ ಲಿಂಬಿಕಾಯಿ ಇದ್ದಾರೆ   

ಹುಬ್ಬಳ್ಳಿ: ‘ನಗರದ ಮೂರುಸಾವಿರ ಮಠವು ಅಂದುಕೊಂಡ‌ ಮಟ್ಟದಲ್ಲಿ ಅಭಿವೃದ್ಧಿ ಆಗಿಲ್ಲ ಎಂಬ ಕೊರಗು ನನಗಿದೆ. ಈ ನಿಟ್ಟಿನಲ್ಲಿ, ಮಠದ ಅಭಿವೃದ್ಧಿಗೆ ಉತ್ತಮ ವಾತಾವರಣ ನಿರ್ಮಾಣದ ಅಗತ್ಯವಿದ್ದು, ಮಠದ ಸ್ವಾಮೀಜಿ ಹೇಳುವ ಯಾವುದೇ ಕೆಲಸವನ್ನು ಮಾಡಲು ಸಿದ್ಧನಿದ್ದೇನೆ’ ಎಂದು ಶಾಸಕ ಪ್ರಸಾದ ಅಬ್ಬಯ್ಯ ಹೇಳಿದರು.

ಮಠದಲ್ಲಿ ಗುರುವಾರ ನಡೆದ ನವೀಕೃತ ಚನ್ನಬಸವೇಶ್ವರ ಪ್ರಸಾದ ನಿಲಯ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ‘ಒಂಬತ್ತು ವರ್ಷ ಶಾಸಕನಾದರೂ ಮಠಕ್ಕೆ ಸಮಾಧಾನ ತರುವ ಕೆಲಸ ಮಾಡಿಲ್ಲ ಎಂಬ ಬೇಸರವಿದೆ. ಮಠಗಳಿಂದ ನಮ್ಮ ಸಂಸ್ಕೃತಿ ಮತ್ತು ಸಂಪ್ರದಾಯ ಉಳಿದಿದ್ದು, ಅದನ್ನು ಮುಂದುವರಿಸಿಕೊಂಡು ಹೋಗುವ ಕೆಲಸಗಳು ಆಗಬೇಕಿದೆ’ ಎಂದರು.

ಕೆಎಲ್‌ಇ ಸಂಸ್ಥೆಯ ನಿರ್ದೇಶಕ ಶಂಕರಣ್ಣ ಮುನವಳ್ಳಿ ಮಾತನಾಡಿ, ‘ದಾಸೋಹ ಕಾರ್ಯವು ಮಠದಲ್ಲಿ ನಿರಂತರವಾಗಿ ನಡೆಯಬೇಕು. ಕಾರ್ಯಕ್ರಮಗಳಲ್ಲಿ ಹೆಚ್ಚು ಭಕ್ತರು ಪಾಲ್ಗೊಂಡು ಆಶೀರ್ವಚನ ಕೇಳುವಂತಾಗಬೇಕು. ಮಠಕ್ಕೆ ದಾನ ಕೊಡುವ ಕೈಗಳು ಹೆಚ್ಚಾಗಿವೆ. ಆದರೆ, ತೆಗೆದುಕೊಳ್ಳುವ ಕೈಗಳು ಶುದ್ಧವಾಗಿರಬೇಕು. ಯಾರತ್ತಲೂ ಬೆರಳು ತೋರಿಸದೆ ಜಾತಿ, ಮತ, ಪಕ್ಷ ಹಾಗೂ ಪಂಗಡಗಳನ್ನು ಮೀರಿ ಮಠವನ್ನು ಬೆಳೆಸಬೇಕಿದೆ. ಈ ನಿಟ್ಟಿನಲ್ಲಿ ಮಠದ ಎಲ್ಲಾ ಸಮಿತಿಗಳು ಕೆಲಸ ಮಾಡಬೇಕು’ ಎಂದು ಮಾರ್ಮಿಕವಾಗಿ ಹೇಳಿದರು.

ADVERTISEMENT

ಬಿಜೆಪಿ ಮುಖಂಡ ಮೋಹನ ಲಿಂಬಿಕಾಯಿ, ‘ಹಲವು ವಿವಾದಗಳು ಮಠಕ್ಕೆ ಸುತ್ತಿಕೊಂಡಿರುವುದೇ ಅಭಿವೃದ್ಧಿಯ ಹಿನ್ನಡೆಗೆ ಕಾರಣ. ಈ ಕುರಿತು ಮಠದ ಸಮಿತಿಯವರು ಆತ್ಮಾವಲೋಕನ ಮಾಡಿಕೊಂಡು, ‌ಮುಂದೆ ಏನು ಮಾಡಬೇಕು ಎಂಬುದರ ಬಗ್ಗೆ ಸಾಂಘಿಕವಾಗಿ ವಿಚಾರ ಮಾಡಬೇಕಿದೆ. ಮಠಕ್ಕೆ ಮಾಡುವ ಯಾವುದೇ ರೀತಿಯ ಸೇವೆಯು ಫಿಕ್ಸೆಡ್ ಡೆಪಾಸಿಟ್ ಇದ್ದಂತೆ. ಅದರ ಫಲ ನಮಗೆ ಅಥವಾ ನಮ್ಮ ಮಕ್ಕಳಿಗೆ ಸಿಗಲಿದೆ’ ಎಂದರು.

ಮಠದ ಗುರುಸಿದ್ಧರಾಜ ಯೋಗೀಂದ್ರ ಸ್ವಾಮೀಜಿ ಅವರು ಆಶೀರ್ವಚನ ನೀಡಿದರು. ಪ್ರಸಾದ ನಿಲಯದ ನವೀಕರಣಕ್ಕೆ ಶ್ರಮಿಸಿದವರನ್ನು ಸನ್ಮಾನಿಸಲಾಯಿತು. ಮಠದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಅರವಿಂದ ಕುಬಸದ,ಆಡಳಿತಾಧಿಕಾರಿ ಎ.ಬಿ. ಪಾಟೀಲ, ಚನ್ನಬಸಪ್ಪ ಧಾರವಾಡಶೆಟ್ರು, ಕುಮಾರಗೌಡ ಪಾಟೀಲ, ಅಮರೇಶ ಹಿಪ್ಪರಗಿ, ಮಲ್ಲಿಕಾರ್ಜುನ ಕಳಸರಾಯ, ವಿಜಯ ಶೆಟ್ಟರ, ಸದಾನಂದ ಡಂಗನವರ
ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.