ADVERTISEMENT

ಸಮಾಜದಲ್ಲಿ ಬಂದಿಯಾದ ಧರ್ಮ

ದಶಲಕ್ಷಣ ಪರ್ವ ಆರಂಭ: ನಿರಂಜನ ಕುಮಾರ ಅಭಿಮತ

​ಪ್ರಜಾವಾಣಿ ವಾರ್ತೆ
Published 3 ಸೆಪ್ಟೆಂಬರ್ 2019, 14:38 IST
Last Updated 3 ಸೆಪ್ಟೆಂಬರ್ 2019, 14:38 IST
ಹುಬ್ಬಳ್ಳಿಯಲ್ಲಿ ಮಂಗಳವಾರ ಆರಂಭವಾದ ದಶಲಕ್ಷಣ ಪರ್ವ ಕಾರ್ಯಕ್ರಮವನ್ನು ಡಾ. ನಿರಂಜನಕುಮಾರ್ ಉದ್ಘಾಟಿಸಿದರು
ಹುಬ್ಬಳ್ಳಿಯಲ್ಲಿ ಮಂಗಳವಾರ ಆರಂಭವಾದ ದಶಲಕ್ಷಣ ಪರ್ವ ಕಾರ್ಯಕ್ರಮವನ್ನು ಡಾ. ನಿರಂಜನಕುಮಾರ್ ಉದ್ಘಾಟಿಸಿದರು   

ಹುಬ್ಬಳ್ಳಿ: ಧರ್ಮವೆಂಬುದು ನಮ್ಮನ್ನುಸರಿಯಾದ ಮಾರ್ಗದಲ್ಲಿ ನಡೆಸುವ ನ್ಯಾಯವಿದ್ದಂತೆ. ಆದರೆ, ನಾವು ಅದನ್ನುಸಮಾಜದಲ್ಲಿ ಬಂದಿ ಮಾಡಿದ್ದೇವೆ ಎಂದು ಎಸ್‌ಡಿಎಂ ವಿಶ್ವವಿದ್ಯಾಲಯದ ಕುಲಪತಿ ಡಾ. ನಿರಂಜನಕುಮಾರ ಹೇಳಿದರು.

ದಕ್ಷಿಣ ಭಾರತ ಜೈನ ಸಭೆಯ ಅಂಗಸಂಸ್ಥೆಯಾದ ದಿಗಂಬರ ಜೈನ್‌ ಬೋರ್ಡಿಂಗ್‌, ಹಳೇ ವಿದ್ಯಾರ್ಥಿಗಳ ಸಂಘ ಮತ್ತು ಬ್ರಹ್ಮಿಲಾ ಪರಿಷತ್‌ ಸಹಯೋಗದಲ್ಲಿ ಬುಧವಾರ ನಗರದಲ್ಲಿಆರಂಭವಾದ ದಶಲಕ್ಷಣ ಪರ್ವ ಕಾರ್ಯಕ್ರಮದಲ್ಲಿ ಅವರು ‘ಉತ್ತಮ ಕ್ಷಮಾ ಧರ್ಮ’ ಕುರಿತು ಮಾತನಾಡಿದರು.

‘ಈಗ ನಿಜವಾಗಿಯೂ ಮಹಾವೀರ ಹಾಗೂ ಇನ್ನಿತರ ಯಾವುದೇ ದೇವರು ಪ್ರತ್ಯಕ್ಷರಾದರೂ ನಾವು ನಂಬುವುದಿಲ್ಲ. ಏಕೆಂದರೆ, ನಾವು ಶ್ರೇಷ್ಠ ವ್ಯಕ್ತಿಗಳು ಇರುವಾಗ ಅವರನ್ನು ಬೈಯುತ್ತೇವೆ; ತೀರಿಗೊಂಡಾಗ ಮನಸ್ಸಿಗೆ ಬಂದಂತೆ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತೇವೆ. ಅವರಿಲ್ಲದಾಗ ಅವರ ದಿಟ್ಟ ಅಭಿಪ್ರಾಯಗಳನ್ನು ನಮಗೆ ಬೇಕಾದಂತೆ ಬದಲಿಸಿಕೊಳ್ಳುತ್ತೇವೆ. ನಮಗೆ ನಿಜವಾದ ಧರ್ಮ ಬೇಕಾಗಿಲ್ಲ’ ಎಂದರು.

ADVERTISEMENT

‘ದಶಲಕ್ಷಣಗಳಾದ ಕ್ಷಮಾ, ಮಾರ್ದವ, ಆರ್ಜವ, ಶೌಚ, ಸತ್ಯಧರ್ಮ, ಸಂಯಮ, ತಪ ಮತ್ತು ತ್ಯಾಗ ಧರ್ಮಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಪ್ರಕೃತಿಯನ್ನು ಪೂಜಿಸಬೇಕು, ಇನ್ನೊಬ್ಬರೊಂದಿಗೆ ಬದುಕನ್ನು ಹೋಲಿಸಿಕೊಳ್ಳಬಾರದು; ದಿನಕ್ಕೆ ಕನಿಷ್ಠ ಎರಡು ಗಂಟೆಯಾದರೂ ಮೊಬೈಲ್‌ನಿಂದ ದೂರವಿರಬೇಕು’ ಎಂದರು.

ಸಾನ್ನಿಧ್ಯ ವಹಿಸಿದ್ದಗಣಿನಿ ಆರ್ಯಿಕಾ ವಿಶಾಶ್ರೀ ಮಾತಾಜಿ ಮಾತನಾಡಿ ‘ಒತ್ತಡದ ಬದುಕಿನಲ್ಲಿ ಧರ್ಮದಿಂದ ದೂರಿವಿದ್ದೇವೆ. ದಶಲಕ್ಷಣ ಪರ್ವದಲ್ಲಿ ಧರ್ಮದ ಬಗ್ಗೆ ಯೋಚಿಸುವುದು, ಚರ್ಚಿಸುವುದು ಮಾಡಿದರೆ ವರ್ಷಪೂರ್ತಿ ಆರಾಮವಾಗಿ ಇರುತ್ತೇವೆ’ ಎಂದರು.

‘ಧರ್ಮವೆಂಬುದು ಮಾರುಕಟ್ಟೆಯಲ್ಲಿ ಸಿಗುವ ಸರಕಲ್ಲ; ಅದನ್ನು ನಮ್ಮೊಳಗೆ ಶೋಧಿಸಬೇಕು. ನಮ್ಮಲ್ಲಿ ಈಗ ಕ್ಷಮೆಯ ಗುಣ ಕಡಿಮೆಯಾಗಿರುವ ಕಾರಣ ಕ್ರೋಧ, ಅಹಿಂಸೆ ಹೆಚ್ಚಾಗುತ್ತಿದೆ. ಕ್ರೋಧ ಮನಸ್ಸನ್ನು ಹಾಳು ಮಾಡುತ್ತದೆ. ಆದ್ದರಿಂದ ಬದುಕಿನಲ್ಲಿ ಕ್ಷಮಾ ಧರ್ಮವೇ ಮುಖ್ಯವಾಗಬೇಕು’ ಎಂದರು.

ಇದೇ ವೇಳೆ ನಿರಂಜನ ಹಾಗೂ ಪದ್ಮಲತಾ ದಂಪತಿಯನ್ನು ಸನ್ಮಾನಿಸಲಾಯಿತು. ಇನ್ನು ಒಂಬತ್ತು ದಿನ ನಡೆಯುವ ಕಾರ್ಯಕ್ರಮದಲ್ಲಿ ವಿಷಯ ತಜ್ಞರು ನಿತ್ಯ ಒಂದೊಂದು ಪರ್ವಗಳ ಬಗ್ಗೆ ವಿಷಯ ಮಂಡನೆ ಮಾಡಲಿದ್ದಾರೆ.

ದಿಗಂಬರ ಜೈನ್ ಬೋರ್ಡಿಂಗ್‌ ಚೇರ್ಮನ್‌ ಮಹಾವೀರ ಡಿ. ದಾನೊಳ್ಳಿ, ಹಂಪಿ ವಿಶ್ವವಿದ್ಯಾಲಯದ ಯೋಜನಾ ನಿರ್ದೇಶಕ ಡಾ.ಎಸ್‌.ಪಿ. ಪದ್ಮಪ್ರಸಾದ, ದಕ್ಷಿಣ ಭಾರತ ಜೈನ್‌ ಸಭೆಯ ಉಪಾಧ್ಯಕ್ಷರಾದ ದತ್ತಾ ಸಿ. ಡೊರ್ಲೆ, ಜಿ.ಜಿ. ಲೋಬೋಗೋಳ, ವಿದ್ಯಾಧರ ಪಿ. ಪಾಟೀಲ,ಧರ್ಮದರ್ಶಿ ಎಸ್‌.ಎ. ಬರಿಗಾಲಿ, ಮಹಾಮಂತ್ರಿ ಮಹಾವೀರ ಎನ್‌. ಸೂಜಿ, ಮಹಿಳಾ ಮಹಾಮಂತ್ರಿ ಸುಭದ್ರಾ ಮುತ್ತಿನ, ದಿಗಂಬರ ಜೈನ ಸಮಾಜದ ಅಧ್ಯಕ್ಷ ಶಾಂತಿನಾಥ ಕೆ. ಹೋತಪೇಟಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.