ADVERTISEMENT

ಬಾಣಂತಿ ಕುಟುಂಬಕ್ಕೆ ಬಾಡಿಗೆ ಮನೆ ವ್ಯವಸ್ಥೆ

‘ಪ್ರಜಾವಾಣಿ’ ವರದಿಗೆ ಸ್ಪಂದನೆ: ಪೌಷ್ಟಿಕ ಆಹಾರ ಒದಗಿಸಲು ಸೂಚನೆ

​ಪ್ರಜಾವಾಣಿ ವಾರ್ತೆ
Published 17 ಆಗಸ್ಟ್ 2019, 9:58 IST
Last Updated 17 ಆಗಸ್ಟ್ 2019, 9:58 IST
ಪಾಲಿಕೆಯ ಮಾಜಿ ಸದಸ್ಯ ಮಲ್ಲಿಕಾರ್ಜುನ ಹೊರಕೇರಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಗಳು ಶನಿವಾರ ಬಾಣಂತಿ ಶಿಲ್ಪಾ ಲದ್ದಿ ಕುಟುಂಬವನ್ನು ಭೇಟಿ ಮಾಡಿ ಯೋಗಕ್ಷೇಮ ವಿಚಾರಿಸಿದರು
ಪಾಲಿಕೆಯ ಮಾಜಿ ಸದಸ್ಯ ಮಲ್ಲಿಕಾರ್ಜುನ ಹೊರಕೇರಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಗಳು ಶನಿವಾರ ಬಾಣಂತಿ ಶಿಲ್ಪಾ ಲದ್ದಿ ಕುಟುಂಬವನ್ನು ಭೇಟಿ ಮಾಡಿ ಯೋಗಕ್ಷೇಮ ವಿಚಾರಿಸಿದರು   

ಹುಬ್ಬಳ್ಳಿ: ಮನೆ ಗೋಡೆ ಕುಸಿದಿದ್ದರಿಂದಾಗಿ ದೇವಸ್ಥಾನದಲ್ಲಿ ನವಜಾತ ಶಿಶುವಿನೊಂದಿಗೆ ಆಸರೆ ಪಡೆದಿದ್ದ ಅಮರಗೋಳದ ಬಾಣಂತಿಯ ಕುಟುಂಬಕ್ಕೆ ಪಾಲಿಕೆಯ ಮಾಜಿ ಸದಸ್ಯ ಮಲ್ಲಿಕಾರ್ಜುನ ಹೊರಕೇರಿ, ಬಾಡಿಗೆ ಮನೆ ವ್ಯವಸ್ಥೆ ಮಾಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.

ಬಾಣಂತಿ ಶಿಲ್ಪಾ ಲದ್ದಿ ಅವರು ಒಂದು ತಿಂಗಳ ಶಿಶುವಿನೊಂದಿಗೆ ದೇವಸ್ಥಾನದಲ್ಲಿ ಆಶ್ರಯ ಪಡೆದಿರುವ ಬಗ್ಗೆ‘ಪ್ರಜಾವಾಣಿ’ಯಲ್ಲಿ ಆಗಸ್ಟ್ 16ರಂದು ‘ಬಾಣಂತಿಗೆ ದೇವಸ್ಥಾನದಲ್ಲೇ ಆರೈಕೆ’ ಎಂಬ ವಿಶೇಷ ವರದಿ ಪ್ರಕಟವಾಗಿತ್ತು.

ವರದಿಯ ಬೆನ್ನಲ್ಲೇ ದೇವಸ್ಥಾನಕ್ಕೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಗಳು ಶನಿವಾರ ಭೇಟಿ ನೀಡಿ ಶಿಲ್ಪಾ ಅವರ ಕುಶಲೋಪರಿ ವಿಚಾರಿಸಿದರು.

ADVERTISEMENT

‘ತಾಯಿ ಮತ್ತು ಮಗು ದೇವಸ್ಥಾನದಲ್ಲಿ ತೆರೆದಿದ್ದ ಪರಿಹಾರ ಕೇಂದ್ರದಲ್ಲಿ ಆಶ್ರಯ ಪಡೆದಿರುವ ವಿಷಯ ಗೊತ್ತಾದ ತಕ್ಷಣ, ಅಲ್ಲಿಗೆ ಭೇಟಿ ನೀಡಿ ಅವರಿಗೆ ಬೇಕಾದ ಅಗತ್ಯ ವಸ್ತುಗಳನ್ನು ಕೊಡಿಸಿದ್ದೆ. ಅಲ್ಲದೆ, ಬಾಡಿಗೆ ಮನೆಗೆ ಹೋದರೆ ನೆರವು ನೀಡುವುದಾಗಿ ಭರವಸೆ ನೀಡಿದ್ದೆ. ಇದೀಗ, ಮನೆಯೊಂದನ್ನು ಹುಡುಕಿಕೊಂಡು ಅಲ್ಲಿಗೆ ಸ್ಥಳಾಂತರಗೊಂಡಿದ್ದಾರೆ’ ಎಂದು ಪಾಲಿಕೆಯ ಮಾಜಿ ಸದಸ್ಯರಾದ ಮಲ್ಲಿಕಾರ್ಜುನ ಹೊರಕೇರಿ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

‘ಶಿಲ್ಪಾ ಲದ್ದಿ ಅವರ ಮನೆ ಗೋಡೆ ಕುಸಿದಿರುವ ಸಂಬಂಧ, ತಾಲ್ಲೂಕು ಆಡಳಿತದಿಂದ ಈಗಾಗಲೇ ₹28 ಸಾವಿರ ಪರಿಹಾರದ ಚೆಕ್ ವಿತರಿಸಲಾಗಿದೆ. ಹೊಸ ಗೋಡೆ ನಿರ್ಮಾಣದ ಜತೆಗೆ, ಮನೆ ದುರಸ್ತಿ ಮಾಡಿಕೊಳ್ಳಲು ಒಂದೆರಡು ತಿಂಗಳು ಬೇಕಾಗಬಹುದು. ಅಲ್ಲಿಯವರೆಗೆ ಬಾಡಿಗೆ ಮನೆಯಲ್ಲಿರಲು ವ್ಯವಸ್ಥೆ ಮಾಡಲಾಗಿದ್ದು, ಬಾಡಿಗೆ ಮೊತ್ತವನ್ನು ನಾನೇ ಪಾವತಿಸುತ್ತೇನೆ’ ಎಂದು ಹೇಳಿದರು.

ಮಹಿಳಾ ಮತ್ತು ಮಕ್ಕಳ ಕಲ್ಯಾಣಧಿಕಾರಿ ಎ.ಬಿ. ಮುನಿಯಪ್ಪ, ಶಿಶು ಅಭಿವೃದ್ಧಿ ಯೋಜನಾಧಿಕಾರಿ (ಸಿಡಿಪಿಒ) ಎನ್‌.ಎ. ಪುಟ್ಟಪ್ಪನವರ ಹಾಗೂ ಮಹಿಳಾ ಮೇಲ್ವಿಚಾರಕಿ ದೀಪಾ ಹೆಬ್ಬಳ್ಳಿ ಅವರು ದೇವಸ್ಥಾನಕ್ಕೆ ಭೇಟಿ ನೀಡಿ, ಬಾಣಂತಿಯ ಯೋಗಕ್ಷೇಮ ವಿಚಾರಿಸಿದರು.

ಪೌಷ್ಟಿಕ ಆಹಾರದ ಭರವಸೆ:

‘ಶಿಲ್ಪಾ ಅವರಿಗೆ ಆರು ತಿಂಗಳವರೆಗೆ ನಿತ್ಯ ಹಾಲು, ಮೊಟ್ಟೆ ಸೇರಿದಂತೆ ಪೌಷ್ಟಿಕ ಆಹಾರವನ್ನು ಒದಗಿಸುವಂತೆ ಸ್ಥಳೀಯ ಅಂಗನವಾಡಿಯ ಮೇಲ್ವಿಚಾರಕಿಗೆ ಸೂಚಿಸಿದ್ದೇನೆ. ಜತೆಗೆ, ಪ್ರತಿ ದಿನ ಆರೋಗ್ಯ ಸಹಾಯಕಿಯೊಬ್ಬರು ಶಿಲ್ಪಾ ಅವರ ಮನೆಗೆ ಬಂದು ಆರೋಗ್ಯ ವಿಚಾರಿಸಲಿದ್ದಾರೆ’ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣಧಿಕಾರಿ ಎ.ಬಿ. ಮುನಿಯಪ್ಪ ಹೇಳಿದರು.

‘ದೇವಸ್ಥಾನದಲ್ಲಿ ಆಶ್ರಯ ಪಡೆದಿದ್ದ ಶಿಲ್ಪಾ ಮತ್ತು ಮಗುವಿಗೆ ಮಕ್ಕಳ ರಕ್ಷಣಾ ಘಟಕದಲ್ಲಿ ಕೆಲ ದಿನ ಪುನರ್ವಸತಿ ಕಲ್ಪಿಸುವುದಾಗಿ ಹೇಳಿದ್ದೆವು. ಆದರೆ, ಅವರಿಗೆ ಮತ್ತಿಬ್ಬರು ಚಿಕ್ಕ ಮಕ್ಕಳಿರುವುದರಿಂದ ಎಲ್ಲರಿಗೂ ಅಲ್ಲಿ ವ್ಯವಸ್ಥೆ ಮಾಡಲು ಸಾಧ್ಯವಿಲ್ಲ. ಹಾಗಾಗಿ, ಅಮರಗೋಳದ ಅಂಗನವಾಡಿಯಲ್ಲಿ ಅವರಿಗೆ ಇರಲು ಸೂಚಿಸಿದ್ದೆವು. ಆದರೆ, ದೇವಸ್ಥಾನದಲ್ಲೇ ಸ್ವಲ್ಪ ಮಟ್ಟಿಗೆ ವ್ಯವಸ್ಥೆ ಇದ್ದಿದ್ದರಿಂದ ಅಲ್ಲೇ ಉಳಿದಿದ್ದರು. ಇದೀಗ, ಬಾಡಿಗೆ ಮನೆಗೆ ಹೋಗಿದ್ದಾರೆ. ಅವರಿಗೆ ಪೌಷ್ಟಿಕ ಆಹಾರ ಒದಗಿಸುವ ಜತೆಗೆ, ಆರೋಗ್ಯ ಕಾಳಜಿ ಮಾಡುವ ವ್ಯವಸ್ಥೆಯನ್ನು ಇಲಾಖೆ ಮಾಡಲಿದೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.