ADVERTISEMENT

ಈದ್ಗಾ ಮೈದಾನದಲ್ಲಿ ಗಣೇಶೋತ್ಸವ: ಸದನ ಸಮಿತಿಗೆ 28 ಪರ, 11 ವಿರೋಧ ಅರ್ಜಿ ಸಲ್ಲಿಕೆ

ಮೇಯರ್ ಈರೇಶಗೆ ವರದಿ ಸಲ್ಲಿಕೆ

​ಪ್ರಜಾವಾಣಿ ವಾರ್ತೆ
Published 29 ಆಗಸ್ಟ್ 2022, 13:17 IST
Last Updated 29 ಆಗಸ್ಟ್ 2022, 13:17 IST
ಮೇಯರ್ ಈರೇಶ ಅಂಚಟಗೇರಿ ಅವರಿಗೆ ಪಾಲಿಕೆ ಮೇಯರ್ ಕಚೇರಿಯಲ್ಲಿ ಸಮಿತಿಯ ಅಂತಿಮ ವರದಿ
ಮೇಯರ್ ಈರೇಶ ಅಂಚಟಗೇರಿ ಅವರಿಗೆ ಪಾಲಿಕೆ ಮೇಯರ್ ಕಚೇರಿಯಲ್ಲಿ ಸಮಿತಿಯ ಅಂತಿಮ ವರದಿ   

ಹುಬ್ಬಳ್ಳಿ: ಈದ್ಗಾ ಮೈದಾನದಲ್ಲಿ ಗಣೇಶೋತ್ಸವ ವಿಷಯ ಕುರಿತು ಪಾಲಿಕೆ ಸಾಮಾನ್ಯ ಸಭೆಯಲ್ಲಿ ರಚಿಸಿದ್ದ ಸದನ ಸಮಿತಿಗೆ ಒಟ್ಟು 39 ಅರ್ಜಿಗಳು ಸಲ್ಲಿಕೆಯಾಗಿದ್ದವು ಎಂದು ಸಮಿತಿ ಅಧ್ಯಕ್ಷ ಸಂತೋಷ ಚವ್ಹಾಣ್ ಹೇಳಿದರು.

ಸೋಮವಾರ ಮೇಯರ್ ಈರೇಶ ಅಂಚಟಗೇರಿ ಅವರಿಗೆ ಪಾಲಿಕೆ ಮೇಯರ್ ಕಚೇರಿಯಲ್ಲಿ ಸಮಿತಿಯ ಅಂತಿಮ ವರದಿ ಸಲ್ಲಿಸಿ, ಮಾಧ್ಯಮದವರೊಂದಿಗೆ ಮಾತನಾಡಿದರು. 'ಗಣೇಶಮೂರ್ತಿ ಪ್ರತಿಷ್ಠಾಪಿಸುವಂತೆ 28 ಅರ್ಜಿಗಳು, ಪ್ರತಿಷ್ಠಾಪನೆಗೆ ವಿರೋಧಿಸಿ 11 ಅರ್ಜಿಗಳು ಸಲ್ಲಿಕೆಯಾಗಿದ್ದವು. ಆರು ಸಂಘಟನೆಗಳು ಮಾತ್ರ ತಾವೇ ಪ್ರತಿಷ್ಠಾಪಿಸುತ್ತೇವೆ ಎಂದು ಅರ್ಜಿ ಸಲ್ಲಿಸಿವೆ' ಎಂದರು.

'ಮೂರು ದಿನ ಸಮಿತಿ ಕಾರ್ಯ ನಿರ್ವಹಿಸಿದ್ದು, ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್ ಸೇರಿದಂತೆ ಎಲ್ಲ ಧಾರ್ಮಿಕ ಮುಖಂಡರನ್ನು ಭೇಟಿ ಮಾಡಿ ಅಭಿಪ್ರಾಯ ಸಂಗ್ರಹಿಸಿವೆ. ಅರ್ಜಿ ಹಾಗೂ ಅಭಿಪ್ರಾಯದ ಮೇಲೆ ವರದಿ ಸಿದ್ಧಪಡಿಸಲಾಗಿದೆ' ಎಂದು ಹೇಳಿದರು.

ADVERTISEMENT

'ಸಮಿತಿಯ ವರದಿಗೆ ತಮ್ಮ ವಿರೋಧವಿದೆ' ಎಂದು ಸಮಿತಿಯಲ್ಲಿದ್ದ ಇಬ್ಬರು ಕಾಂಗ್ರೆಸ್ ಸದಸ್ಯರು ಸಲ್ಲಿಸಿದ್ದ ಮನವಿಗೆ ಪ್ರತಿಕ್ರಿಯಿಸಿದ ಸಂತೋಷ, 'ಸಮಿತಿ ಸದಸ್ಯ ನಿರಂಜನ ಹಿರೇಮಠ ಅವರು ಸಮಿತಿಯ ಮೂರುದಿನ ಕಾರ್ಯದಲ್ಲಿ ಒಂದೂವರೆ ದಿನ ನಮ್ಮ ಜೊತೆ ಇದ್ದರು. ಇಮ್ರಾನ್ ಎಲಿಗಾರ ಅವರು ಇಂದು ಬೆಳಿಗ್ಗೆ ಮಾತ್ರ ಒಂದು ತಾಸು ಜೊತೆ ಇದ್ದರು. ಪಾಲಿಕೆ ವಿರೋಧ ಪಕ್ಷದ ನಾಯಕರು ಸಮಿತಿ ವಿರೋಧಿಸಿ ಮೇಯರ್ ಅವರಿಗೆ ಮನವಿ ನೀಡಿದಾಗ, ಇವರು ಸಹ ವಿರೋಧ ವ್ಯಕ್ತಪಡಿಸಿದ್ದಾರೆ. ಪ್ರತಿ ಬಾರಿ ಸಮಿತಿಯ ಸಭೆ ನಡೆಸುವಾಗಲೂ ಅವರನ್ನು ಸಂಪರ್ಕಿಸಿದ್ದೇವೆ. ಸಭೆಗೆ ತಮ್ಮನ್ನು ಕರೆದಿಲ್ಲ ಎನ್ನುವ ಅವರ ಆರೋಪದಲ್ಲಿ ಹುರುಳಿಲ್ಲ' ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.