ADVERTISEMENT

ಮೀಸಲಾತಿ ತೆಗೆದುಹಾಕಲ್ಲ: ಕೇಂದ್ರ ಸಚಿವ ಪ್ರಲ್ಹಾದ ಜೋಶಿ

​ಪ್ರಜಾವಾಣಿ ವಾರ್ತೆ
Published 12 ಮೇ 2025, 13:53 IST
Last Updated 12 ಮೇ 2025, 13:53 IST
ಹುಬ್ಬಳ್ಳಿಯ ಬಿ.ವಿ.ಬಿ ಎಂಜಿನಿಯರಿಂಗ್‌ ಕಾಲೇಜಿನಲ್ಲಿ ಸೋಮವಾರ ಎಬಿವಿಪಿ ಆಯೋಜಿಸಿದ್ದ ‘ಸಂವಿಧಾನ–75: ಬದಲಾಯಿಸಿದ್ದು ಯಾರು, ಬಲಪಡಿಸಿದ್ದು ಯಾರು?’ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಗಣ್ಯರು ಪಾಲ್ಗೊಂಡಿದ್ದರು
ಹುಬ್ಬಳ್ಳಿಯ ಬಿ.ವಿ.ಬಿ ಎಂಜಿನಿಯರಿಂಗ್‌ ಕಾಲೇಜಿನಲ್ಲಿ ಸೋಮವಾರ ಎಬಿವಿಪಿ ಆಯೋಜಿಸಿದ್ದ ‘ಸಂವಿಧಾನ–75: ಬದಲಾಯಿಸಿದ್ದು ಯಾರು, ಬಲಪಡಿಸಿದ್ದು ಯಾರು?’ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಗಣ್ಯರು ಪಾಲ್ಗೊಂಡಿದ್ದರು   

ಹುಬ್ಬಳ್ಳಿ: ‘ಬಿಜೆಪಿ ಅಧಿಕಾರಕ್ಕೆ ಬಂದರೆ ಮೀಸಲಾತಿ ತೆಗೆದುಹಾಕುತ್ತಾರೆ ಎಂದು ಕಾಂಗ್ರೆಸ್‌ ಅಪಪ್ರಚಾರ ಮಾಡುತ್ತಿದೆ. ಸಾಮಾಜಿಕ ಅಸಮಾನತೆ ಹೋಗುವವರೆಗೆ ಮೀಸಲಾತಿ ಅವಶ್ಯಕತೆ ಇದೆ. ಯಾವುದೇ ಕಾರಣಕ್ಕೂ ಮೀಸಲಾತಿ ತೆಗೆದುಹಾಕಲ್ಲ’ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಪುನರುಚ್ಚರಿಸಿದರು.

ಇಲ್ಲಿನ ಬಿ.ವಿ.ಬಿ ಎಂಜಿನಿಯರಿಂಗ್‌ ಕಾಲೇಜಿನಲ್ಲಿ ಸೋಮವಾರ ಎಬಿವಿಪಿ ಆಯೋಜಿಸಿದ್ದ ವಿವಿಧ ಲೇಖಕರು ಬರೆದ ಲೇಖನಗಳ  ‘ಸಂವಿಧಾನ–75: ಬದಲಾಯಿಸಿದ್ದು ಯಾರು, ಬಲಪಡಿಸಿದ್ದು ಯಾರು?’ ಪುಸ್ತಕ ಬಿಡುಗಡೆಗೊಳಿಸಿ ಅವರು ಮಾತನಾಡಿದರು. 

‘ಸಮಾಜದಲ್ಲಿ ಸಮಾನತೆ ಸಾಧಿಸುವವರೆಗೆ ಮೀಸಲಾತಿ ಅವಶ್ಯಕತೆ ಇದೆ. ಇದನ್ನು ತೆಗೆಯಲು ಅಲ್ಲ, ಮುಟ್ಟಲು ಕೂಡ ಬಿಡುವುದಿಲ್ಲ’ ಎಂದು ಘೋಷಿಸಿದರು. 

ADVERTISEMENT

‘ಮೀಸಲಾತಿಯನ್ನು ಮುಂದುವರಿಸಬೇಕೆಂದು ಬಿಜೆಪಿ ಸರ್ಕಾರವು ಸಂವಿಧಾನಕ್ಕೆ ತಿದ್ದುಪಡಿ ಮಾಡಿದೆ. ಆದರೆ, ಜವಾಹರಲಾಲ್‌ ನೆಹರೂ ಪ್ರಧಾನಿಯಾಗಿದ್ದಾಗ ಮೀಸಲಾತಿ ವಿರೋಧಿಸಿ ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದರು. ರಾಜೀವ್‌ ಗಾಂಧಿ ಅವರು ಮೀಸಲಾತಿ ವಿರೋಧಿಸಿ ಲೋಕಸಭೆಯಲ್ಲಿ ಭಾಷಣ ಮಾಡಿದ್ದರು. ಈ ಇತಿಹಾಸವನ್ನು ಜನರು ತಿಳಿದುಕೊಳ್ಳಬೇಕು’ ಎಂದರು. 

ಪುಸ್ತಕದ ಕುರಿತು ಸಾಮಾಜಿಕ ಕಾರ್ಯಕರ್ತ ವಾದಿರಾಜ ಮಾತನಾಡಿ, ‘ವಿವಿಧ ಜಾತಿ, ಧರ್ಮ, ಆಹಾರ ಪದ್ಧತಿ ಹೊಂದಿರುವ  ವೈವಿಧ್ಯಮಯ ದೇಶ ಭಾರವನ್ನು ಮುನ್ನಡೆಸಲು ಅಂಬೇಡ್ಕರ್‌ ಅವರು ಅದ್ಭುತವಾದ ಸಂವಿಧಾನವನ್ನು ನೀಡಿದ್ದಾರೆ. ಸಂವಿಧಾನದ ಸಾರವನ್ನು ಈ ಪುಸ್ತಕದಲ್ಲಿ ವಿವಿಧ ಲೇಖಕರು ಸರಳವಾಗಿ ವಿವರಿಸಿದ್ದಾರೆ’ ಎಂದು ಹೇಳಿದರು. 

‘ಜೂನ್‌ನಿಂದ ನವೆಂಬರ್‌ ವರೆಗೆ ಎಬಿವಿಪಿ ವತಿಯಿಂದ ವಿವಿಧ ಕಾಲೇಜು ಹಾಗೂ ವಿಶ್ವವಿದ್ಯಾಲಯಗಳಲ್ಲಿ ಸಂವಿಧಾನ ಮತ್ತು ಅಂಬೇಡ್ಕರ್‌ ಬಗ್ಗೆ ಚರ್ಚಾಕೂಟಗಳನ್ನು ಏರ್ಪಡಿಸಲಿದ್ದು, ಅದಕ್ಕೆ ಈ ಪುಸ್ತಕವೇ ಆಧಾರ’ ಎಂದು ನುಡಿದರು. 

ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಸಿ.ಬಸವರಾಜು ಮಾತನಾಡಿ, ‘ದೇಶದ ಹಿತಾಸಕ್ತಿಗೆ ಅನುಗುಣವಾಗಿ ಸಂವಿಧಾನಕ್ಕೆ ತಿದ್ದುಪಡಿ ಮಾಡಲು ಅಂಬೇಡ್ಕರ್‌ ಅವರು ಅವಕಾಶ ಕಲ್ಪಿಸಿಕೊಟ್ಟಿದ್ದಾರೆ’ ಎಂದರು.

ಎಬಿವಿಪಿ ರಾಷ್ಟ್ರೀಯ ಕಾರ್ಯದರ್ಶಿ ಶ್ರವಣ ಬಿ.ರಾಜ್‌ ಮಾತನಾಡಿದರು. ಚಿತ್ರದುರ್ಗದ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಎಬಿವಿಪಿ ರಾಜ್ಯ ಘಟಕದ ಅಧ್ಯಕ್ಷ ಆನಂದ ಹೊಸೂರು ಸ್ವಾಗತಿಸಿದರು. ಎಬಿವಿಪಿ ಮುಖಂಡರಾದ ಸಚಿನ್‌ ಕುಳಗೇರಿ, ಅಮೃತಾ ಕೊಳ್ಳಿ ವೇದಿಕೆ ಮೇಲಿದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.