ADVERTISEMENT

ಹುಬ್ಬಳ್ಳಿ | ಚನ್ನಮ್ಮ ವೃತ್ತ–ಬಸವ ವನ ರಸ್ತೆ ಭಾಗಶಃ ಮುಕ್ತ: ಪ್ರಾಯೋಗಿಕ ಸಂಚಾರ

ಮೇಲ್ಸೇತುವೆ: ಡಾಂಬರ್‌ ರಸ್ತೆ ಬದಲು ಕಾಂಕ್ರಿಟ್‌ ರಸ್ತೆ ನಿರ್ಮಾಣ, ಖಾಸಗಿ ಬಸ್‌ಗಳಿಗಿಲ್ಲ ಪ್ರವೇಶ

ನಾಗರಾಜ್ ಬಿ.ಎನ್‌.
Published 1 ಸೆಪ್ಟೆಂಬರ್ 2025, 5:43 IST
Last Updated 1 ಸೆಪ್ಟೆಂಬರ್ 2025, 5:43 IST
ಹುಬ್ಬಳ್ಳಿಯ ಬಸವವನದ ಬಳಿ ಇರುವ ಭವಾನಿ ಆರ್ಕೇಡ್‌ ವಾಣಿಜ್ಯ ಕಟ್ಟಡದ ಎದುರು ನಡೆಯುತ್ತಿರುವ ಮೇಲ್ಸೇತುವೆ ಕಾಮಗಾರಿಯ ಕೆಳಭಾಗದ ರಸ್ತೆಯಲ್ಲಿನ ಸಾಮಗ್ರಿಗಳನ್ನು ತೆರವು ಮಾಡಿ ಸಂಚಾರಕ್ಕೆ ಮುಕ್ತಗೊಳಿಸಲಾಗಿದೆ – ಪ್ರಜಾವಾಣಿ ಚಿತ್ರ: ಗೋವಿಂದರಾಜ ಜವಳಿ
ಹುಬ್ಬಳ್ಳಿಯ ಬಸವವನದ ಬಳಿ ಇರುವ ಭವಾನಿ ಆರ್ಕೇಡ್‌ ವಾಣಿಜ್ಯ ಕಟ್ಟಡದ ಎದುರು ನಡೆಯುತ್ತಿರುವ ಮೇಲ್ಸೇತುವೆ ಕಾಮಗಾರಿಯ ಕೆಳಭಾಗದ ರಸ್ತೆಯಲ್ಲಿನ ಸಾಮಗ್ರಿಗಳನ್ನು ತೆರವು ಮಾಡಿ ಸಂಚಾರಕ್ಕೆ ಮುಕ್ತಗೊಳಿಸಲಾಗಿದೆ – ಪ್ರಜಾವಾಣಿ ಚಿತ್ರ: ಗೋವಿಂದರಾಜ ಜವಳಿ   

ಹುಬ್ಬಳ್ಳಿ: ಮೇಲ್ಸೇತುವೆಯ ತ್ವರಿತ ಕಾಮಗಾರಿಗಾಗಿ ನಾಲ್ಕೂವರೆ ತಿಂಗಳಿನಿಂದ ಬಂದ್‌ ಆಗಿದ್ದ ಚನ್ನಮ್ಮ ವೃತ್ತದಿಂದ ಬಸವ ವನದವರೆಗಿನ ರಸ್ತೆ, ಸೆ. 3ರಿಂದ ಸಾರ್ವಜನಿಕ ಸಂಚಾರಕ್ಕೆ ಭಾಗಶಃ ಮುಕ್ತವಾಗಲಿದೆ. ಈ ರಸ್ತೆಯಲ್ಲಿದ್ದ ಉಪನಗರ ಕೇಂದ್ರ (ಹಳೇ) ಬಸ್‌ ನಿಲ್ದಾಣ ಸಹ ಪುನರಾರಂಭವಾಗಲಿದ್ದು, ಅಗತ್ಯ ಸಿದ್ಧತೆಗಳು ನಡೆದಿವೆ.

ಚನ್ನಮ್ಮ ವೃತ್ತದಿಂದ ಭವಾನಿ ಆರ್ಕೇಡ್‌ ವಾಣಿಜ್ಯ ಕಟ್ಟಡದವರೆಗಿನ ಮೇಲ್ಸೇತುವೆ ಕಾಮಗಾರಿ ಪೂರ್ಣಗೊಂಡಿದೆ. ಗರ್ಡರ್‌ ಹಾಗೂ ಸ್ಲ್ಯಾಬ್‌ ಅಳವಡಿಕೆಗೆ ಹಾಕಲಾಗಿದ್ದ ಕಬ್ಬಿಣದ ರಾಡ್‌, ಶೀಟ್‌ ಹಾಗೂ ಇತರ ಸಾಮಗ್ರಿಗಳನ್ನು ತೆರವು ಮಾಡಲಾಗುತ್ತಿದೆ. ಈ ಭಾಗದಲ್ಲಿದ್ದ ಮಣ್ಣು ಹಾಗೂ ಕಟ್ಟಡ ಸಾಮಗ್ರಿಗಳನ್ನು ತೆರವು ಮಾಡಿ, ರಸ್ತೆಯನ್ನು ಮುಕ್ತಮಾಡಲಾಗಿದೆ.

ಮುಕ್ತವಾಗಲಿರುವ ರಸ್ತೆಯಲ್ಲಿ ಎರಡು ದಿನಗಳಿಂದ ಲಘು ವಾಹನಗಳನ್ನು ಪ್ರಾಯೋಗಿಕವಾಗಿ ಓಡಿಸಿ, ಸಾಧಕ– ಬಾಧಕಗಳನ್ನು ಪರೀಕ್ಷಿಸಲಾಗಿದೆ. ಸಾರಿಗೆ ಮತ್ತು ಪೊಲೀಸ್‌ ಇಲಾಖೆ ಜಂಟಿ ಕಾರ್ಯಾಚರಣೆ ನಡೆಸಿ, ವಾಹನಗಳ ಮಾರ್ಗ ಬದಲಾವಣೆ ಹಾಗೂ ಬಸ್‌ಗಳ ಸಂಚಾರದ ಕುರಿತು ರೂಪುರೇಷಗಳನ್ನು ಸಿದ್ಧಪಡಿಸಿವೆ. ಬಸ್‌ ನಿಲ್ದಾಣದ ಎಡಗಡೆಯ ಪ್ರವೇಶದ್ವಾರದ ಪಕ್ಕದಲ್ಲಿ ಇರುವ ಚಿಕ್ಕ ಕಟ್ಟಡ ತೆರವು ಮಾಡಿ, ಸುಗಮ ಸಂಚಾರಕ್ಕೆ ವ್ಯವಸ್ಥೆ ಮಾಡಿಕೊಳ್ಳಲು ತೀರ್ಮಾನಿಸಲಾಗಿದೆ.

ADVERTISEMENT

‘ನಿರೀಕ್ಷಿತ ವೇಗದಲ್ಲಿ ಕಾಮಗಾರಿ ಪೂರ್ಣಗೊಳ್ಳದಿದ್ದರೂ, ಸಾರ್ವಜನಿಕರ ಸಂಚಾರಕ್ಕೆ ಸಮಸ್ಯೆಯಾಗಬಾರದು ಎಂದು ಚನ್ನಮ್ಮ ವೃತ್ತದಿಂದ ಹುಬ್ಬಳ್ಳಿ ಆಪ್ಟಿಕಲ್ಸ್‌ವರೆಗೆ ರಸ್ತೆ ಮುಕ್ತಗೊಳಿಸಲಾಗುವುದು. ಅಲ್ಲಿಂದ ತುಸು ಮುಂದೆ ಸಾಗಿ, ಬಲಗಡೆ ಇರುವ ಭವಾನಿ ಆರ್ಕೇಡ್‌ ಕಟ್ಟಡದ ಕಡೆಗೆ ಹೊರಳಿ ಲಕ್ಷ್ಮಿ ವೇ ಬ್ರಿಡ್ಜ್‌ ಕಡೆಗೆ ಸಾಗಬೇಕು. ಅಲ್ಲಿಂದ ಗ್ಲಾಸ್‌ಹೌಸ್‌ ಮತ್ತು ಧಾರವಾಡ ಕಡೆಗೆ ಸಂಚರಿಸಲು ವ್ಯವಸ್ಥೆ ಮಾಡಲಾಗುತ್ತಿದೆ. ತೆರವಾಗಲಿರುವ ರಸ್ತೆಯಲ್ಲಿ ಏಕಮುಖ ವಾಹನ ಸಂಚಾರ ಇರಲಿದೆ’ ಎಂದು ಶಾಸಕ ಮಹೇಶ ಟೆಂಗಿನಕಾಯಿ ತಿಳಿಸಿದರು.

‘ಚನ್ನಮ್ಮ ವೃತ್ತದ ಕಡೆಯಿಂದ ಬರುವ ಆಟೊ, ಬೈಕ್‌, ಸಾರಿಗೆ ಸಂಸ್ಥೆ ವಾಹನಗಳು ಹಾಗೂ ಲಘು ವಾಹನಗಳು ಮಾತ್ರ ಬಸ್‌ ನಿಲ್ದಾಣದ ಎದುರು ಮುಕ್ತವಾಗುವ ರಸ್ತೆಯಲ್ಲಿ ಸಂಚರಿಸಬಹುದು. ಖಾಸಗಿ ಬಸ್‌ಗಳು, ಗೂಡ್ಸ್‌, ಲಾರಿ ಹಾಗೂ ಭಾರಿ ವಾಹನಗಳಿಗೆ ಪ್ರವೇಶ ನಿಷೇಧಿಸಲಾಗಿದೆ. ಗಣಪತಿ ವಿಸರ್ಜನಾ ಮೆರವಣಿಗೆಗೂ ಅವಕಾಶವಿಲ್ಲ’ ಎಂದು ವಿವರಿಸಿದರು.

ಈ ಕುರಿತು ಪ್ರತಿಕ್ರಿಯಿಸಿದ ವಾಯವ್ಯ ರಸ್ತೆ ಸಾರಿಗೆ ಸಂಸ್ಥೆ ವ್ಯವಸ್ಥಾಪಕ ನಿರ್ದೇಶಕಿ ಪ್ರಿಯಾಂಗಾ ಎಂ., ‘ಸೆ. 3ರಿಂದ ಉಪನಗರ ಕೇಂದ್ರ ಬಸ್‌ (ಹಳೇ) ನಿಲ್ದಾಣದಿಂದ ಪೂರ್ಣ ಪ್ರಮಾಣದಲ್ಲಿ ಬಸ್‌ಗಳ ಸಂಚಾರ ನಡೆಯಲಿದೆ. ಈಗಾಗಲೇ ಪ್ರಾಯೋಗಿಕವಾಗಿ ಕೆಲವು ಬಸ್‌ಗಳನ್ನು ಆ ಮಾರ್ಗದಲ್ಲಿ ಓಡಿಸಲಾಗಿದ್ದು, ಪೊಲೀಸ್‌ ಇಲಾಖೆಯು ಪರಿಶೀಲನೆ ನಡೆಸಿ ಒಪ್ಪಿಗೆ ನೀಡಿದೆ. ನಿಲ್ದಾಣದಲ್ಲಿ ಸ್ವಚ್ಛತೆ ಕಾರ್ಯ ಹಾಗೂ ಇತರ ಪೂರ್ವ ಸಿದ್ಧತೆ ನಡೆಯುತ್ತಿದೆ’ ಎಂದು ತಿಳಿಸಿದರು.

ದಿವ್ಯ ಪ್ರಭು
ಸಾರಿಗೆ ಸಂಸ್ಥೆಯವರು ಈಗಾಗಲೇ ಪ್ರಾಯೋಗಿಕವಾಗಿ ಬಸ್‌ಗಳನ್ನು ಓಡಿಸಿ ಪರಿಶೀಲಿಸಿದ್ದಾರೆ. ಸಾಧಕ–ಬಾಧಕಗಳ ಕುರಿತು ಚರ್ಚಿಸಿ ಸಾರ್ವಜನಿಕರಿಗೆ ರಸ್ತೆ ಮುಕ್ತಗೊಳಿಸಲಾಗುವುದು
ದಿವ್ಯಪ್ರಭು, ಜಿಲ್ಲಾಧಿಕಾರಿ
ರವೀಶ್‌ ಸಿ.ಆರ್‌.
ಬಂದ್‌ ಆಗಿರುವ ರಸ್ತೆಯಲ್ಲಿ ಪ್ರಾಯೋಗಿಕವಾಗಿ ವಾಹನಗಳ ಸಂಚಾರ ನಡೆಸಿ ಪರಿಶೀಲಿಸಲಾಗಿದೆ. ಒಮ್ಮೆ ರಸ್ತೆಯನ್ನು ಮುಕ್ತಗೊಳಿಸಿದರೆ ಸಂಚಾರ ದಟ್ಟಣೆ ಕಡಿಮೆಯಾಗಲಿದೆ
ರವೀಶ್‌ ಸಿ.ಆರ್‌. ಡಿಸಿಪಿ ಸಂಚಾರ ಮತ್ತು ಅಪರಾಧ ವಿಭಾಗ
ಕಾಂಕ್ರಿಟ್‌ ರಸ್ತೆ ನಿರ್ಮಾಣ: ಶಾಸಕ
‘ಬಂದ್‌ ಆಗಿರುವ ರಸ್ತೆಯ ಭಾಗಶಃ ಭಾಗ ಮಾತ್ರ ಮುಕ್ತಗೊಳಿಸಿ ಉಳಿದ ಭಾಗದಲ್ಲಿ ಕಾಮಗಾರಿ ಮುಂದುವರಿಯಲಿದೆ. ಬಸವ ವನದ ಬಳಿ ಮೇಲ್ಸೇತುವೆಗೆ ಆರು ಗರ್ಡರ್‌ ಅಳವಡಿಕೆ ಬಾಕಿ ಇರುವುದರಿಂದ ಹುಬ್ಬಳ್ಳಿ ಆಪ್ಟಿಕಲ್ಸ್ ವರೆಗೆ ಮಾತ್ರ ರಸ್ತೆ ಮುಕ್ತಗೊಳಿಸಲಾಗುತ್ತದೆ. ಈ ಮೊದಲು ಡಾಂಬರು ರಸ್ತೆ ಮಾಡಲು ನಿರ್ಧರಿಸಲಾಗಿತ್ತು. ವಿಪರೀತ ವಾಹನಗಳು ಸಂಚರಿಸುವುದರಿಂದ ಕಾಂಕ್ರಿಟ್‌ ರಸ್ತೆ ನಿರ್ಮಿಸಲು ಯೋಜಿಸಲಾಗಿದೆ. ಹೀಗಾಗಿ ಕಾಮಗಾರಿ ವಿಳಂಬವಾಗಿದೆ’ ಎಂದು ಶಾಸಕ ಮಹೇಶ ಟೆಂಗಿನಕಾಯಿ ತಿಳಿಸಿದರು. ‘ಮೊದಲ ಹಂತದ ಕಾಮಗಾರಿ ಪೂರ್ಣಗೊಂಡ ನಂತರವೇ ಉಪನಗರ ಪೊಲೀಸ್‌ ಠಾಣೆ ಕಟ್ಟಡ ತೆರವು ಹಾಗೂ ಆ ಭಾಗದಲ್ಲಿ ಮೇಲ್ಸೇತುವೆ ಕಾಮಗಾರಿ ಕೈಗೊಳ್ಳಲಾಗುವುದು’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.