ADVERTISEMENT

ಸಕಾಲದಲ್ಲಿ ನಡೆಯದ ದುರಸ್ತಿ: ಅಭಿವೃದ್ಧಿಯ ಸಾಕ್ಷಿ ನುಡಿವ ರಸ್ತೆಗಳು

ಹದಗೆಟ್ಟ ಬಹುತೇಕ ರಸ್ತೆಗಳು

​ಪ್ರಜಾವಾಣಿ ವಾರ್ತೆ
Published 27 ಆಗಸ್ಟ್ 2021, 6:15 IST
Last Updated 27 ಆಗಸ್ಟ್ 2021, 6:15 IST
ವ್ಯಾಪಾರ ಚಟುವಟಿಕೆಯ ಕೇಂದ್ರವಾದ ಹುಬ್ಬಳ್ಳಿಯ ದಾಜೀಬಾನಪೇಟೆ ರಸ್ತೆ ಹದಗೆಟ್ಟು ಜಲ್ಲಿ ಕಲ್ಲುಗಳು ಎದ್ದಿವೆ –ಪ್ರಜಾವಾಣಿ ಚಿತ್ರ: ಗೋವಿಂದರಾಜ ಜವಳಿ
ವ್ಯಾಪಾರ ಚಟುವಟಿಕೆಯ ಕೇಂದ್ರವಾದ ಹುಬ್ಬಳ್ಳಿಯ ದಾಜೀಬಾನಪೇಟೆ ರಸ್ತೆ ಹದಗೆಟ್ಟು ಜಲ್ಲಿ ಕಲ್ಲುಗಳು ಎದ್ದಿವೆ –ಪ್ರಜಾವಾಣಿ ಚಿತ್ರ: ಗೋವಿಂದರಾಜ ಜವಳಿ   

ಹುಬ್ಬಳ್ಳಿ: ವಾಣಿಜ್ಯನಗರಿ ಹುಬ್ಬಳ್ಳಿ ದಶದಿಕ್ಕುಗಳಿಗೂ ಸಂಪರ್ಕ ಸೇತು. ಉತ್ತರ ಕರ್ನಾಟಕ ಭಾಗದ ಜಿಲ್ಲೆಗಳ ಪ್ರಮುಖ ವ್ಯಾಪಾರ ಕೇಂದ್ರವಾಗಿರುವ ನಗರಕ್ಕೆ, ರಾಜ್ಯವಷ್ಟೇ ಅಲ್ಲದೆ ಹೊರರಾಜ್ಯಗಳಿಂದ ಬಂದು–ಹೋಗುವವರು ಹೆಚ್ಚು. ಬೆಂಗಳೂರು ನಂತರದ ಎರಡನೇ ಅತಿ ದೊಡ್ಡ ಮಹಾನಗರ. ಸ್ಮಾರ್ಟ್‌ ಸಿಟಿಯಡಿ ಅಭಿವೃದ್ಧಿಯಾಗುತ್ತಿರುವ ದೇಶದ ನಗರಗಳ ಪೈಕಿ ಹುಬ್ಬಳ್ಳಿಯೂ ಒಂದು.

ಇಷ್ಟೆಲ್ಲಾ ಗರಿಗಳಿಗಿರುವ ನಗರದ ರಸ್ತೆಗಳತ್ತ ಕಣ್ಣು ಹಾಯಿಸಿದರೆ, ಹೆಮ್ಮೆಗಿಂತ ಬೇಸರವಾಗುವುದೇ ಹೆಚ್ಚು. ಅಭಿವೃದ್ಧಿಯ ಮಾನದಂಡವಾದ ಇಲ್ಲಿನ ರಸ್ತೆಗಳು ದುಃಸ್ಥಿತಿಗೆ ತಲುಪಿವೆ. ಬೆರಳೆಣಿಕೆಯಷ್ಟು ಹೊರತುಪಡಿಸಿದರೆ, ಗಲ್ಲಿ ರಸ್ತೆಗಳಿಂದ ಹಿಡಿದು ಮುಖ್ಯ ರಸ್ತೆಗಳೂ ಹದ ಗೆಟ್ಟಿವೆ. ಸವಾರರಿಗೆ ತಗ್ಗು–ಗುಂಡಿಗಳ ದರ್ಶನ ಸಿಗದ ರಸ್ತೆಗಳೇ ಅಪರೂಪ.

ಇದ್ಯಾವ ಸೀಮೆಯ ಅಭಿವೃದ್ಧಿ

ADVERTISEMENT

ರಸ್ತೆಗಳ ಸ್ಥಿತಿ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ದಾಜೀಬಾನಪೇಟೆಯ ವ್ಯಾಪಾರಿ ಸುನೀಲ್ ಪೂಜಾರಿ, ‘ಇದ್ಯಾವ ಸೀಮೆಯ ಅಭಿವೃದ್ಧಿ ನೋಡಿ’ ಎಂದು ತಮ್ಮ ಅಂಗಡಿ ಎದುರಿನ ರಸ್ತೆಯಲ್ಲಿ ಹರಡಿಕೊಂಡಿದ್ದ ಜಲ್ಲಿಕಲ್ಲುಗಳನ್ನು ತೋರಿಸಿದರು. ಒಳ ಚರಂಡಿ ಕಾಮಗಾರಿಗಾಗಿ ಕೆಲವು ತಿಂಗಳುಗಳ ಹಿಂದೆ ಅಗೆದಿದ್ದ ರಸ್ತೆಯ ಮರು ದುರಸ್ತಿ ನಡೆಯದ್ದರಿಂದ ಆ ರಸ್ತೆ ಕಚ್ಚಾ ರಸ್ತೆಯಾಗಿ ಮಾರ್ಪಟ್ಟಿದೆ.

‘ಮಳೆ ಬಂದರೆ ರಸ್ತೆಯಿಡೀ ಕೆಸರಾಗುತ್ತದೆ. ರಾಡಿ ಹಾದುಕೊಂಡೇ ಗ್ರಾಹಕರು ಅಂಗಡಿಗೆ ಬರಬೇಕು. ಬಿಸಿಲು ಬಂದರೆ ದೂಳು ನುಗ್ಗುತ್ತದೆ. ಬಟ್ಟೆ ಅಂಗಡಿಯವರ ಸ್ಥಿತಿಯಂತೂ ಹೇಳತೀರದು. ಗ್ರಾಹಕರನ್ನು ಸೆಳೆಯಲು ಹೊರಗಡೆ ಬಟ್ಟೆಗಳನ್ನು ನೇತು ಹಾಕದ ಸ್ಥಿತಿ ಇದೆ’ ಎಂದು ಹದಗೆಟ್ಟ ರಸ್ತೆಗಳ ಪರಿಣಾಮಗಳನ್ನು ಎಳೆಎಳೆಯಾಗಿ ಬಿಚ್ಚಿಟ್ಟರು.

ಪ್ಲಾನಿಂಗ್ ಇಲ್ಲದ ಕಾಮಗಾರಿಗಳು

‘ಪ್ಲಾನಿಂಗ್ ಇಲ್ಲದ ಕಾಮಗಾರಿಗಳೇ ರಸ್ತೆಗಳು ಹದಗೆಡಲು ಕಾರಣ’ ಎಂದು ಮಾತು ಆರಂಭಿಸಿದ ಸ್ಥಳೀಯ ನಿವಾಸಿ ಭೀಮರಾಜ ಜೈನ್, ‘ಒಳ ಚರಂಡಿ ನಿರ್ಮಾಣ, ಕೇಬಲ್ ಅಳವಡಿಕೆ, ಪಾದಚಾರಿ ಮಾರ್ಗ ನಿರ್ಮಾಣದಂತಹ ಕೆಲಸಗಳನ್ನು ಹಂತ ಹಂತವಾಗಿ ಕೈಗೊಳ್ಳಬೇಕು. ಇಲ್ಲದಿದ್ದರೆ, ಎಲ್ಲ ಕಡೆ ರಸ್ತೆಗಳು ಹದಗೆಡದೆ ಇನ್ನೇನಾಗುತ್ತವೆ ಹೇಳಿ’ ಎಂದರು.

ಮಾದರಿ ರಸ್ತೆಗಳೂ ಉಂಟು

ನಗರದಲ್ಲಿ ಹದಗೆಟ್ಟ ರಸ್ತೆಗಳೇ ಹೆಚ್ಚಾಗಿದ್ದರೂ, ಶಿರೂರು ಪಾರ್ಕ್‌ನಲ್ಲಿ ನಿರ್ಮಿಸಿರುವ ಟೆಂಡರ್ ಶ್ಯೂರ್ ರಸ್ತೆ ಸದ್ಯ ನಗರದ ಮಾದರಿ ರಸ್ತೆ. ದೇಶಪಾಂಡೆ ನಗರ, ವಿದ್ಯಾನಗರ, ರಣದಮ್ಮ ಕಾಲೊನಿ ಸೇರಿದಂತೆ ಕೆಲ ಪ್ರದೇಶಗಳಲ್ಲಿ ನಿರ್ಮಿಸಿರುವ ಕಾಂಕ್ರೀಟ್ ರಸ್ತೆಗಳು ಕೂಡ ಮೆಚ್ಚುಗೆಗೆ ಪಾತ್ರವಾಗಿವೆ. ಬೆರಳೆಣಿಕೆಯಷ್ಟಿರುವ ಇಂತಹ ರಸ್ತೆಗಳ ಸಂಖ್ಯೆ ಹೆಚ್ಚಾಗಲಿ ಎನ್ನುತ್ತಾರೆ ಸ್ಥಳೀಯರು.

‘ಟೆಂಡರ್ ಶ್ಯೂರ್ ರಸ್ತೆಗಳು ನಗರ ದೆಲ್ಲೆಡೆ ನಿರ್ಮಾಣವಾಗಬೇಕು. ಒಮ್ಮೆ ರಸ್ತೆ ನಿರ್ಮಿಸಿದರೆ ಕಾಮಗಾರಿಗಾಗಿ ಅಗೆದು ವಿರೂಪಗೊಳಿಸಬಾರದು. ಮಾಡಿದರೂ ಮುಂಚಿನಂತೆಯೇ ಮರು ನಿರ್ಮಾಣ ಮಾಡಬೇಕು’ ಎಂದು ಶಿರೂರು ಪಾರ್ಕ್‌ನಲ್ಲಿ ಅಂಗಡಿ ಹೊಂದಿರುವ ವೀರೇಶ ಅಂಗಡಿ ಒತ್ತಾಯಿಸಿದರು.

‘ಮಳೆ ನಿಂತ ಬಳಿಕ ದುರಸ್ತಿ’

‘ಮಹಾನಗರ ಪಾಲಿಕೆ ಜತೆಗೆ ಲೋಕೋಪಯೋಗಿ ಹಾಗೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ವ್ಯಾಪ್ತಿಯ ರಸ್ತೆಗಳೂ ಇವೆ. ಒಂದೂವರೆ ವರ್ಷದಿಂದ ಪಾಲಿಕೆಯ ಸಿಬ್ಬಂದಿ ಕೋವಿಡ್ ನಿರ್ವಹಣೆ ಕೆಲಸಗಳಲ್ಲೇ ಹೆಚ್ಚಾಗಿ ತೊಡಗಿಸಿಕೊಂಡಿದ್ದರಿಂದ ರಸ್ತೆಗಳ ದುರಸ್ತಿ ಕಾರ್ಯ ಸಕಾಲದಲ್ಲಿ ನಡೆಯಲಿಲ್ಲ’ ಎಂದು ಪಾಲಿಕೆ ಆಯುಕ್ತ ಡಾ. ಸುರೇಶ ಇಟ್ನಾಳ್ ಹೇಳಿದರು.

‘ಮಳೆಗಾಲವಾದ್ದರಿಂದ ರಸ್ತೆಗಳ ದುರಸ್ತಿ ಮತ್ತು ನಿರ್ಮಾಣವನ್ನು ತಕ್ಷಣಕ್ಕೆ ಕೈಗೊಂಡಿಲ್ಲ. ಮಳೆ ನಿಂತ ಬಳಿಕ, ದುರಸ್ತಿ ಕಾರ್ಯ ಸೇರಿದಂತೆ ಮಂದಗತಿಯಲ್ಲಿ ಸಾಗುತ್ತಿರುವ ಕಾಮಗಾರಿಗಳು ಬೇಗ ಮುಗಿಯಲಿವೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.