ADVERTISEMENT

ಆರ್‌ಆರ್‌ಬಿ ಕಚೇರಿ ಹುಬ್ಬಳ್ಳಿಗೆ: ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ ಅಂಗಡಿ

ಹುಬ್ಬಳ್ಳಿ– ಚೆನ್ನೈ ನೂತನ ರೈಲಿಗೆ ಚಾಲನೆ

​ಪ್ರಜಾವಾಣಿ ವಾರ್ತೆ
Published 14 ಸೆಪ್ಟೆಂಬರ್ 2019, 19:45 IST
Last Updated 14 ಸೆಪ್ಟೆಂಬರ್ 2019, 19:45 IST
ಸುರೇಶ ಅಂಗಡಿ
ಸುರೇಶ ಅಂಗಡಿ   

ಹುಬ್ಬಳ್ಳಿ: ಬೆಂಗಳೂರಿನಲ್ಲಿರುವ ರೈಲ್ವೆ ನೇಮಕಾತಿ ಮಂಡಳಿ (ಆರ್‌ಆರ್‌ಬಿ) ಕಚೇರಿಯನ್ನು ಹುಬ್ಬಳ್ಳಿಗೆ ಸ್ಥಳಾಂತರಿಸಲಾಗುವುದು ಎಂದು ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ ಅಂಗಡಿ ಹೇಳಿದರು.

ಇಲ್ಲಿನ ರೈಲ್ವೆ ನಿಲ್ದಾಣದಲ್ಲಿ ಶನಿವಾರ ಹುಬ್ಬಳ್ಳಿ– ಚೆನ್ನೈ ನೂತನ ರೈಲಿಗೆ ಚಾಲನೆ ನೀಡಿ ಮಾತನಾಡಿದ ಅವರು ‘ಹೊರ ರಾಜ್ಯದ ವಿದ್ಯಾರ್ಥಿಗಳು ಕರ್ನಾಟಕಕ್ಕೆ ಬಂದು ರೈಲ್ವೆ ಪರೀಕ್ಷೆ ಬರೆಯುತ್ತಾರೆ. ಆದರೆ, ನಮ್ಮ ರಾಜ್ಯದವರು ಹೊರ ರಾಜ್ಯದಲ್ಲಿ ಪರೀಕ್ಷೆ ಬರೆಯಲು ಆಸಕ್ತಿ ತೋರಿಸುತ್ತಿಲ್ಲ. ರೈಲ್ವೆಯಲ್ಲಿ ನೌಕರಿಗೆ ಸಾಕಷ್ಟು ಅವಕಾಶಗಳಿದ್ದರೂ ಬಳಸಿಕೊಳ್ಳುತ್ತಿಲ್ಲ. ಆದ್ದರಿಂದ ಹುಬ್ಬಳ್ಳಿಗೆ ಕಚೇರಿ ಸ್ಥಳಾಂತರಿಸಿದರೆ ಈ ಭಾಗದ ಜನರಿಗೆ ಅನುಕೂಲವಾಗುತ್ತದೆ ಎನ್ನುವ ಕಾರಣಕ್ಕೆ ಈ ತೀರ್ಮಾನ ಕೈಗೊಳ್ಳಲಾಗಿದೆ. ಆದಷ್ಟು ಬೇಗನೆ ಸ್ಥಳಾಂತರಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ’ ಎಂದರು.

‘ಶಿವಮೊಗ್ಗ ಜಿಲ್ಲೆಯ ತಾಳಗುಪ್ಪಕ್ಕೆ ಮಂಜೂರಾಗಿದ್ದ ರೈಲ್ವೆ ಕೋಚ್‌ ಟರ್ಮಿನಲ್‌ ಅನ್ನು ಕೋಟೆ ಗಂಗೂರು ಬಳಿ ಆರಂಭಿಸಲಾಗುವುದು’ ಎಂದು ತಿಳಿಸಿದರು.

ADVERTISEMENT

‘ರೈಲುಗಳು ಈಗ ಪ್ರತಿ ಗಂಟೆಗೆ 75ರಿಂದ 80 ಕಿ.ಮೀ. ವೇಗದಲ್ಲಿ ಓಡುತ್ತಿವೆ. ರಾಜ್ಯದಲ್ಲಿ ಬಾಕಿ ಉಳಿದಿರುವ ಜೋಡಿ ಮಾರ್ಗ ನಿರ್ಮಾಣ ಕಾರ್ಯ ಪೂರ್ಣಗೊಂಡ ಬಳಿಕ ಗಂಟೆಗೆ 110 ಕಿ.ಮೀ ವೇಗದಲ್ಲಿ ಓಡಿಸಬಹುದು. 2021ರ ವೇಳೆಗೆ ಜೋಡಿ ಮಾರ್ಗದ ಕಾರ್ಯ ಪೂರ್ಣಗೊಳಿಸಿ ಮುಂಬೈನಿಂದ– ಬೆಂಗಳೂರಿಗೆ ‘ವಂದೇ ಭಾರತ’ ರೈಲು ಓಡಿಸಲಾಗುವುದು’ ಎಂದರು.

‘ಕರ್ನಾಟಕ ಮತ್ತು ಗೋವಾದ ಪ್ರವಾಸಿ ತಾಣಗಳ ವೀಕ್ಷಣೆಗೆ ಶೀಘ್ರದಲ್ಲಿಯೇ ‘ಗೋಲ್ಡನ್ ಚಾರಿಯಟ್’ ರೈಲು ಸೌಲಭ್ಯ ಕಲ್ಪಿಸಲಾಗುವುದು. ರಾಜ್ಯ ಪ್ರವಾಸೋದ್ಯಮ ಇಲಾಖೆ ಇದರ ನಿರ್ವಹಣೆ ಮಾಡದಿದ್ದರೆ, ಕೇಂದ್ರವೇ ನಿರ್ವಹಣೆ ಮಾಡಲಿದೆ’ ಎಂದು ಅಂಗಡಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.