ADVERTISEMENT

ಗದುಗಿನ ರೈತನಿಗೆ ₹ 5 ಲಕ್ಷ ವಂಚನೆ

ಫೈನಾನ್ಸ್‌ ವ್ಯವಸ್ಥಾಪಕನೆಂದು ನಂಬಿಸಿದ ವಂಚಕ; ಪ್ರಕರಣ ದಾಖಲು

​ಪ್ರಜಾವಾಣಿ ವಾರ್ತೆ
Published 1 ಮಾರ್ಚ್ 2021, 4:03 IST
Last Updated 1 ಮಾರ್ಚ್ 2021, 4:03 IST

ಹುಬ್ಬಳ್ಳಿ: ನಗರದ ದೇಸಾಯಿ ಕ್ರಾಸ್‌ನಲ್ಲಿರುವ ಎಚ್‌.ಡಿ.ಬಿ. ಫೈನಾನ್ಸ್‌ನ ಮಾರಾಟ ವ್ಯವಸ್ಥಾಪಕ ಎಂದು ನಂಬಿಸಿದ ವ್ಯಕ್ತಿಯೊಬ್ಬ ಗದುಗಿನ ಮುಂಡರಗಿಯ ಹಳ್ಳಿಗುಡಿ ಗ್ರಾಮದ ರೈತ ಗುಳ್ಳಪ್ಪ ಚನ್ನಳ್ಳಿ ಅವರಿಗೆ ಜೆಸಿಬಿ ಮಾರಾಟ ಮಾಡುವುದಾಗಿ ಹೇಳಿ ₹ 5 ಲಕ್ಷ ಪಡೆದು ವಂಚಿಸಿದ್ದಾನೆ.

ಧಾರವಾಡದ ಅರವಟಗಿಯ ಕೆಳಗಿನ ಓಣಿ ನಿವಾಸಿ ಶಿವಾನಂದ ದೋಪದಾಳ ವಿರುದ್ಧ ಉಪನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಫೆ.18 ರಂದು ಗುಳ್ಳಪ್ಪ ಅವರಿಗೆ ಎಚ್‌.ಡಿ.ಬಿ. ಫೈನಾನ್ಸ್‌ ಎದುರು ಆರೋಪಿ ಶಿವಾನಂದ, ಫೈನಾನ್ಸ್‌ನ ವ್ಯವಸ್ಥಾಪಕ ಎಂದು ಪರಿಚಯಿಸಿಕೊಂಡು ಓಎಲ್‌ಎಕ್ಸ್‌ನಲ್ಲಿ ಜೆಸಿಬಿ ಮಾರಾಟಕ್ಕಿದೆ ಎಂದು ನಂಬಿಸಿದ್ದ. ಜೆಸಿಬಿ ತೋರಿಸಿ ₹ 16 ಲಕ್ಷಕ್ಕೆ ವ್ಯವಹಾರ ಕುದುರಿಸಿ, ಗುಳ್ಳಪ್ಪ ಅವರಿಂದ ದಾಖಲೆಗಳ ಜೊತೆ ಮುಂಗಡವಾಗಿ ₹5 ಲಕ್ಷ ಪಡೆದಿದ್ದ. ನಂತರ ಜೆಸಿಬಿಯನ್ನೂ ನೀಡದೆ, ಹಣವನ್ನೂ ಮರಳಿಸದೆ ವಂಚನೆ ಮಾಡಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ADVERTISEMENT

ಒಟಿಪಿ ಪಡೆದು ₹ 80ಸಾವಿರ ವಂಚನೆ: ಧಾರವಾಡ ಕಲ್ಯಾಣ ನಗರದ ಜಯರಾಮ ಗುಮಾಸ್ತೆ ಅವರಿಗೆ ಎಸ್‌ಬಿಐ ಕ್ರೆಡಿಟ್‌ ಅಧಿಕಾರಿ ಎಂದು ಕರೆ ಮಾಡಿದ ವ್ಯಕ್ತಿ, ಅವರ ಕ್ರೆಡಿಟ್‌ ಕಾರ್ಡ್‌ನಿಂದ ₹ 80,018 ತನ್ನ ಖಾತೆಗೆ ವರ್ಗಾವಣೆ ಮಾಡಿಕೊಂಡಿದ್ದಾನೆ.

ಮುಂಬೈನ್‌ ಎಸ್‌ಬಿಐ ಕ್ರೆಡಿಟ್‌ ಕಾರ್ಡ್‌ ಕಚೇರಿಯಿಂದ ಕರೆ ಮಾಡುತ್ತಿರುವುದಾಗಿ ನಂಬಿಸಿದ ವಂಚಕ, ಹಳೆಯ ಕ್ರೆಡಿಟ್‌ ಕಾರ್ಡ್‌ ಬ್ಲಾಕ್‌ ಆಗಿದ್ದು, ಹೊಸ ಕ್ರೆಡಿಟ್‌ ಕಾರ್ಡ್‌ ಕಳುಹಿಸುತ್ತೇನೆ ಎಂದು, ಕೂರಿಯರ್‌ನಲ್ಲಿ ಅದನ್ನು ಅವರ ವಿಳಾಸಕ್ಕೆ ಕಳಹಿಸಿದ್ದಾನೆ. ನಂತರ ಕ್ರೆಡಿಟ್‌ ಕಾರ್ಡ್‌ ಮಾಹಿತಿ ಹಾಗೂ ಮೊಬೈಲ್‌ಗೆ ಬಂದ ಒಟಿಪಿ ಪಡೆದು ತನ್ನ ಖಾತೆಗೆ ಹಣ ವರ್ಗಾಯಿಸಿಕೊಂಡಿದ್ದಾನೆ. ಹುಬ್ಬಳ್ಳಿ ಸೈಬರ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.