
ಹುಬ್ಬಳ್ಳಿ: ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರ್‌ಎಸ್‌ಎಸ್) ನಿಷೇಧಿಸಿ ರಾಷ್ಟ್ರವನ್ನು ರಕ್ಷಣೆ ಮಾಡಬೇಕು ಎಂದು ಆಗ್ರಹಿಸಿ ರಾಷ್ಟ್ರೀಯ ಅಹಿಂದ್ ಸಂಘಟನೆ ಸದಸ್ಯರು ನಗರದಲ್ಲಿ ಭಾನುವಾರ ಅರೆಬೆತ್ತಲೆ ಪ್ರತಿಭಟನೆ ನಡೆಸಿದರು.
ಬಿ.ಆರ್. ಅಂಬೇಡ್ಕರ್ ವೃತ್ತದಲ್ಲಿ ಸೇರಿದ ಪ್ರತಿಭಟನಕಾರರು, ‘ಸಂವಿಧಾನ ವಿರೋಧಿ ಆರ್‌ಎಸ್‌ಎಸ್’ ಎಂದು ಘೋಷಣೆ ಕೂಗಿದರು. ‘ಮನುಸ್ಮೃತಿ, ಮನುವಾದ ನಮಗೆ ಬೇಡ, ಅದಕ್ಕೆ ಧಿಕ್ಕಾರ’ ಎನ್ನುವ ಬರಹದ ಬ್ಯಾನರ್ ಸುಟ್ಟು ಆಕ್ರೋಶ ವ್ಯಕ್ತಪಡಿಸಿದರು.
ಅರೆಬೆತ್ತಲೆ ಮೆರವಣಿಗೆ ಮೂಲಕ ಚನ್ನಮ್ಮ ವೃತ್ತದವರೆಗೆ ತೆರಳಲು ಮುಂದಾದ ಅವರನ್ನು, ಪೊಲೀಸರು ಪ್ರಧಾನ ಅಂಚೆಕಚೇರಿ ಎದುರಿಗೆ ಬ್ಯಾರಿಕೇಡ್ ಹಾಕಿ ತಡೆದು, ವಶಕ್ಕೆ ಪಡೆದರು. ಹಳೇ ಸಿಎಆರ್ ಮೈದಾನಕ್ಕೆ ಕರೆದೊಯ್ದು, ಕೆಲ ಸಮಯದ ನಂತರ ಬಿಡುಗಡೆ ಮಾಡಿದರು.
ಇದಕ್ಕೂ ಪೂರ್ವ ಮಾತನಾಡಿದ ಸಂಘಟನೆಯ ರಾಜ್ಯ ಅಧ್ಯಕ್ಷ ಮುತ್ತಣ್ಣ ಶಿವಳ್ಳಿ, ‘ಜಾತ್ಯತೀತ ರಾಷ್ಟ್ರ ಭಾರತದಲ್ಲಿ ಮನುವಾದಿ ಮನಸ್ಥಿತಿಗಳ ಸಂಖ್ಯೆ ಹೆಚ್ಚುತ್ತಿದ್ದು, ಸಂವಿಧಾನದ ಆಶಯಕ್ಕೆ ಧಕ್ಕೆ ತರುತ್ತಿದ್ದಾರೆ. ಕಲಬುರಗಿಯ ಚಿತ್ತಾಪುರದಲ್ಲಿ ಭೀಮ್ ಆರ್ಮಿ ಸಂಘಟನೆ ಪಥಸಂಚಲನ ಹಮ್ಮಿಕೊಂಡಿದ್ದು, ಕೆಲವರಿಂದ ವಿರೋಧ ವ್ಯಕ್ತವಾಗುತ್ತಿದೆ. ಆರ್‌ಎಸ್‌ಎಸ್ ಕುರಿತು ಕೆಲವು ಪ್ರಶ್ನೆಗಳನ್ನು ಎತ್ತಿರುವ ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ಜೀವ ಬೆದರಿಕೆ ಹಾಕಿದ್ದು ಅಕ್ಷಮ್ಯ. ಡಾ. ಅಂಬೇಡ್ಕರ್ ಆಶಯಕ್ಕೆ ವಿರುದ್ಧವಾಗಿರುವ ಸಂಘಟನೆಯನ್ನು ತಕ್ಷಣ ನಿಷೇಧಿಸಬೇಕು’ ಎಂದು ಆಗ್ರಹಿಸಿದರು.
‘ಅಂಬೇಡ್ಕರ್ ಅವರು ನಿಡಿರುವ ಸಂವಿಧಾನವೇ ನಮಗೆ ಶ್ರೇಷ್ಠ ಗ್ರಂಥವಾಗಿದ್ದು, ಮನುವಾದದ ಮನುಸ್ಮೃತಿ ಬೇಡ’ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬಾಬಾಜಾನ್ ಮುಧೋಳ, ಗಂಗಾಧರ ದೊಡವಾಡ ಸೇರಿದಂತೆ ಮೂವತ್ತಕ್ಕೂ ಹೆಚ್ಚು ಮಂದಿ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.