ADVERTISEMENT

ಕಠಿಣ ಸಮಯ ಅವರಿಗೆ ಹೊರತು; ದೇಶಕ್ಕಲ್ಲ: ಅರುಣಕುಮಾರ್

ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಅಖಿಲ ಭಾರತ ಪ್ರಚಾರ ಪ್ರಮುಖ ಅರುಣಕುಮಾರ್

​ಪ್ರಜಾವಾಣಿ ವಾರ್ತೆ
Published 14 ಜನವರಿ 2020, 9:52 IST
Last Updated 14 ಜನವರಿ 2020, 9:52 IST
ಆರ್‌ಎಸ್‌ಎಸ್‌ ಅಖಿಲ ಭಾರತ ಪ್ರಚಾರ ಪ್ರಮುಕ ಅರುಣಕುಮಾರ್‌ ಮಾತನಾಡಿದರು–ಪ್ರಜಾವಾಣಿ ಚಿತ್ರ
ಆರ್‌ಎಸ್‌ಎಸ್‌ ಅಖಿಲ ಭಾರತ ಪ್ರಚಾರ ಪ್ರಮುಕ ಅರುಣಕುಮಾರ್‌ ಮಾತನಾಡಿದರು–ಪ್ರಜಾವಾಣಿ ಚಿತ್ರ   

ಹುಬ್ಬಳ್ಳಿ: ‘ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಹೋರಾಟ ನಡೆಸುತ್ತಿರುವವರು ದೇಶಕ್ಕೆ ಕಠಿಣ ಸಮಯ ಬಂದಿದೆ ಎಂದು ಅಪಪ್ರಚಾರ ಮಾಡುತ್ತಿದ್ದಾರೆ. ಆದರೆ, ಕಠಿಣ ಸಮಯ ಬಂದಿರುವುದು ಅವರಿಗೇ ಹೊರತು; ದೇಶಕಲ್ಲ’ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಅಖಿಲ ಭಾರತ ಪ್ರಚಾರ ಪ್ರಮುಖ ಅರುಣಕುಮಾರ್ ಅಭಿಪ್ರಾಯಪಟ್ಟರು.

ಸಮರ್ಥ ಭಾರತ ಟ್ರಸ್ಟ್ ವತಿಯಿಂದ ದೇಶಪಾಂಡೆ ನಗರದ ಸವಾಯಿ ಗಂಧರ್ವ ಸಭಾಂಗಣದಲ್ಲಿ ಸೋಮವಾರ ಪೌರತ್ವ (ತಿದ್ದುಪಡಿ) ಕಾಯ್ದೆ ಕುರಿತು ಏರ್ಪಡಿಸಲಾಗಿದ್ದ ಜನಜಾಗರಣ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ರಾಜಕೀಯ ಅಸ್ತಿತ್ವವನ್ನು ಉಳಿಸಿಕೊಳ್ಳುವ ಉದ್ದೇಶದಿಂದ ಕಾಯ್ದೆಯನ್ನು ನೆಪವಾಗಿಟ್ಟುಕೊಂಡು ಅನೇಕರು ಹೋರಾಟ ನಡೆಸುತ್ತಿದ್ದಾರೆ. ಹೋರಾಟದ ಹಿಂದೆ ವೋಟ್‌ ಬ್ಯಾಂಕ್‌ ರಾಜಕಾರಣವಿದೆ’ ಎಂದರು.

ADVERTISEMENT

‘ಎಸ್‌ಎಫ್‌ಐ, ಪಿಎಫ್‌ಐ, ಎನ್‌ಎಸ್‌ಯುಐ, ಅಂಬೇಡ್ಕರ್‌ ವಿದ್ಯಾರ್ಥಿ ಸಂಘ, ಪೆರಿಯಾರ್‌ ವಿದ್ಯಾರ್ಥಿ ಸಂಘಟನೆಗಳು ಕಳೆದ ಆರು ವರ್ಷಗಳಿಂದ ದೇಶದಲ್ಲಿ ಗೊಂದಲದ ವಾತಾವರಣ ಸೃಷ್ಟಿಸುವ ಪ್ರಯತ್ನ ನಡೆಸಿವೆ’ ಎಂದು ಆರೋಪಿಸಿದರು.

‘ಪೌರತ್ವ ಕಾಯ್ದೆಗೆ ತಿದ್ದುಪಡಿ ಮಾಡಿರುವುದು ಇದೇ ಮೊದಲಲ್ಲ. ಈ ಹಿಂದೆ ನೆಹರೂ, ಇಂದಿರಾಗಾಂಧಿ ಪ್ರಧಾನಿಯಾಗಿದ್ದ ಅವಧಿಯಲ್ಲೂ ತಿದ್ದುಪಡಿ ಮಾಡಲಾಗಿದೆ. ಆಗ ಇಲ್ಲದ ವಿರೋಧ ಈಗ ಏಕೆ’ ಎಂದು ಅವರು ಪ್ರಶ್ನಿಸಿದರು.

‘ದೇಶದ ಸುಭದ್ರತೆಗಾಗಿ ಪೌರತ್ವ ತಿದ್ದುಪಡಿ ಕಾಯ್ದೆಯನ್ನು ತರಲಾಗಿದೆ. ಈ ಹಿಂದೆ ಆಗಿರುವ ಐತಿಹಾಸಿಕ ತಪ್ಪನ್ನು ತಿದ್ದುಕೊಳ್ಳಲು ಇದೊಂದು ಸುವರ್ಣಾವಕಾಶವಾಗಿದೆ. ಇದನ್ನು ವಿರೋಧಿಸುವವರು ದೇಶವನ್ನು ವಿರೋಧಿಸಿದಂತೆ’ ಎಂದು ಹೇಳಿದರು.

ಆರ್‌ಎಸ್‌ಎಸ್‌ ಹುಬ್ಬಳ್ಳಿ ಮಹಾನಗರದ ಸಂಘ ಚಾಲಕ ಶಿವಾನಂದ ದೇಸಾಯಿ, ಪವನ್‌ ಸಾರಥಿ ಉಪಸ್ಥಿತರಿದ್ದರು.

ಭದ್ರತೆ: ಕಾರ್ಯಕ್ರಮದ ಹಿನ್ನೆಲೆಯಲ್ಲಿ ಸವಾಯಿ ಗಂದರ್ವ ಸಭಾಂಗಣಕ್ಕೆ ಪೊಲೀಸ್‌ ಬಿಗಿ ಭದ್ರತೆ ಏರ್ಪಡಿಸಲಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.