
ತ್ರಿವರ್ಣ ಧ್ವಜ
ಹುಬ್ಬಳ್ಳಿ: ‘ಭಾರತವನ್ನು ಇಬ್ಭಾಗ ಮಾಡಲು ಸಾಕಷ್ಟು ಕ್ಷುದ್ರ ಶಕ್ತಿಗಳು ಪ್ರಯತ್ನಿಸುತ್ತಿವೆ. ಹಿಂದೂಗಳು ಒಗ್ಗಟ್ಟಾಗಿ ಅದನ್ನು ತಡೆಯಲು ಮುಂದಾಗಬೇಕು’ ಎಂದು ಆರ್‌ಎಸ್‌ಎಸ್ ಅಖಿಲ ಭಾರತೀಯ ವ್ಯವಸ್ಥಾ ಪ್ರಮುಖ ಮಂಗೇಶ ಭೇಂಡೆ ಹೇಳಿದರು.
ಇಲ್ಲಿನ ನವನಗರದ ಹಳೇ ಕೆಎಚ್‌ಬಿ ಕಾಲೊನಿಯ ಬಜರಂಗಿ ಮೈದಾನದಲ್ಲಿ ನವನಗರ, ಗಾಮನಗಟ್ಟಿ, ಅಮರಗೋಳ, ಸುತಗಟ್ಟಿ, ರಾಯಾಪುರ ಹಿಂದೂ ಸಮ್ಮೇಳನ ಸಮಿತಿ ವತಿಯಿಂದ ಭಾನುವಾರ ಹಮ್ಮಿಕೊಂಡಿದ್ದ ಹಿಂದೂ ಸಮಾವೇಶದಲ್ಲಿ ಅವರು ಮಾತನಾಡಿದರು.
‘ಈ ಹಿಂದೆ ಕುತಂತ್ರದಿಂದ ಬ್ರಿಟಿಷರು ಸೇರಿದಂತೆ ಅನೇಕರು ದೇಶವನ್ನು ಆಳಿದ್ದಾರೆ. ಮತ್ತೀಗ ಅಂತಹದ್ದೇ ಕುತಂತ್ರ ನಡೆಯುತ್ತಿದೆ. ಹೀಗಾಗಿ ಹಿಂದೂಗಳೆಲ್ಲ ಒಂದಾಗಬೇಕು’ ಎಂದರು.
‘ಸಮಸ್ತ ಜಗತ್ತು ಸುಖದಿಂದ ಇರಬೇಕು ಎಂದು ಹಿಂದೂಗಳು ಬಯಸುತ್ತಾರೆ. ಸಂಸ್ಕೃತ, ಜ್ಞಾನವನ್ನು ಜಗತ್ತಿಗೆ ನೀಡಿದವರು ನಾವು. ಇಂಥ ಪವಿತ್ರ ರಾಷ್ಟ್ರ ಉಳಿಸಲು ಜಾತಿ-ಭೇದ ಮರೆತು ಹೋರಾಡಬೇಕು’ ಎಂದು ಹೇಳಿದರು.
ಗದಗನ ಶಿವಾನಂದ ಬೃಹನ್ಮಠದ ಸದಾಶಿವಾನಂದ ಸ್ವಾಮೀಜಿ ಸಾನ್ನಿಧ್ಯ ವಹಿಸಿ ಮಾತನಾಡಿದರು. ನಿವೃತ್ತ ಪ್ರಾಧ್ಯಾಪಕ ಸಿ.ಎಂ. ಮಠ ಅಧ್ಯಕ್ಷತೆ ವಹಿಸಿದ್ದರು. ಶಾಸಕ ಅರವಿಂದ ಬೆಲ್ಲದ, ಸ್ವಾಮಿ ಮಹಾಜನಶೆಟ್ಟರ್, ಸುಭಾಷಸಿಂಗ್ ಜಮಾದಾರ, ಜಯತೀರ್ಥ ಕಟ್ಟಿ, ನರೇಂದ್ರ ಕುಲಕರ್ಣಿ, ಬಸವರಾಜ ಕುಂದಗೋಳಮಠ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.