ADVERTISEMENT

ಹುಬ್ಬಳ್ಳಿ: ಅನುದಾನಿತ ಶಿಕ್ಷಣ ಸಂಸ್ಥೆಗಳಲ್ಲಿ ಪಾರದರ್ಶಕ ನೇಮಕಾತಿಗೆ ನಿಯಮ

ನೇಮಕಾತಿ ಅಕ್ರಮಕ್ಕೆ ಅಂಕುಶ

​ಪ್ರಜಾವಾಣಿ ವಾರ್ತೆ
Published 29 ಜುಲೈ 2020, 15:12 IST
Last Updated 29 ಜುಲೈ 2020, 15:12 IST
ಮೇಜರ್‌ ಸಿದ್ಧಲಿಂಗಯ್ಯ ಎಸ್‌. ಹಿರೇಮಠ
ಮೇಜರ್‌ ಸಿದ್ಧಲಿಂಗಯ್ಯ ಎಸ್‌. ಹಿರೇಮಠ   

ಹುಬ್ಬಳ್ಳಿ: ಅನುದಾನಿತ ಶಿಕ್ಷಣ ಸಂಸ್ಥೆಗಳ ನೇಮಕಾತಿಗಳಲ್ಲಿ ನಡೆಯುವ ಅಕ್ರಮಕ್ಕೆ ಅಂಕುಶ ಹಾಕಲು ಶಿಕ್ಷಣ ಇಲಾಖೆ ಮುಂದಾಗಿದೆ. ಭ್ರಷ್ಟಾಚಾರ ಮತ್ತು ಸ್ವಜನ ಪಕ್ಷಪಾತಕ್ಕೆ ಆಸ್ಪದವಿಲ್ಲದೆ, ಪಾರದರ್ಶಕವಾಗಿ ಆಯ್ಕೆ ಪ್ರಕ್ರಿಯೆ ನಡೆಯುವಂತೆ ನಿಯಮಗಳನ್ನು ಬಿಗಿಗೊಳಿಸಿದೆ.

ನೇಮಕಾತಿಯಲ್ಲಿ ಪ್ರತಿಭೆಗಿಂತ, ಪ್ರಭಾವಿಗಳು ಮತ್ತು ಹಣ ಬಲವಿರುವರಿಗೆ ಮಾತ್ರ ಮನ್ನಣೆ ಸಿಗುತ್ತಿದೆ. ಸರ್ಕಾರ ರೂಪಿಸಿರುವ ನಿಯಮಗಳನ್ನು ಗಾಳಿಗೆ ತೂರಲಾಗುತ್ತಿದೆ. ಇಲಾಖೆಯ ಅಧಿಕಾರಿಗಳೂ ಇದರಲ್ಲಿ ಭಾಗಿಯಾಗಿದ್ದಾರೆ ಎಂಬ ಆರೋಪಗಳು ಕೇಳಿ ಬರುತ್ತಿದ್ದವು.

‘ಶಿಕ್ಷಣ ಸಂಸ್ಥೆಗಳು ನೇಮಕಾತಿ ಜಾಹೀರಾತನ್ನು ಹೆಚ್ಚು ಪ್ರಸಾರವುಳ್ಳ ರಾಜ್ಯ ಮಟ್ಟದ ಒಂದು ದಿನಪತ್ರಿಕೆ ಮತ್ತು ಜಿಲ್ಲಾ ಮಟ್ಟದ ಪತ್ರಿಕೆಗೆ ನೀಡಬೇಕು. ಆದರೆ, ಬಹುತೇಕ ಸಂಸ್ಥೆಗಳು ಬೇರೆ ಜಿಲ್ಲೆಯಲ್ಲಿ ಮಾತ್ರ ಪ್ರಕಟವಾಗುವಂತೆ ಸಣ್ಣ ಜಾಹೀರಾತು ನೀಡುತ್ತಿದ್ದವು. ಸ್ಥಳೀಯ ಆಕಾಂಕ್ಷಿಗಳಿಗೆ ಗೊತ್ತಾಗದಂತೆ ನೋಡಿಕೊಳ್ಳುತ್ತಿದ್ದವು’ ಎಂದು ಶಿಕ್ಷಣ ಇಲಾಖೆಯ ಧಾರವಾಡ ವಿಭಾಗದ ಹೆಚ್ಚುವರಿ ಆಯುಕ್ತ ಮೇಜರ್ ಸಿದ್ಧಲಿಂಗಯ್ಯ ಎಸ್‌. ಹಿರೇಮಠ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ADVERTISEMENT

‘ಸಿಂದಗಿ, ವಿಜಯಪುರ, ಹುಕ್ಕೇರಿ ಹಾಗೂ ಹಿರೇಕೆರೂರು ತಾಲ್ಲೂಕುಗಳ ಕೆಲ ಸಂಸ್ಥೆಗಳು, ಇದೇ ತಂತ್ರ ಅನುಸರಿಸಿದ್ದವು. ತಮಗೆ ಬೇಕಾದವರನ್ನು ಒಳಗೊಳಗೆ ನೇಮಕ ಮಾಡಿಕೊಂಡಿದ್ದವು. ಇದರ ಜಾಡು ಹಿಡಿದು ಹೋದಾಗ, ಇಲಾಖೆಯ ಅಧಿಕಾರಿಗಳು ಶಾಮೀಲಾಗಿರುವುದು ಗೊತ್ತಾಯಿತು’ ಎಂದು ಹೇಳಿದರು.

ಇಬ್ಬರ ಅಮಾನತು

‘ಅಕ್ರಮದಲ್ಲಿ ಭಾಗಿಯಾಗಿದ್ದ ಇಬ್ಬರು ಅಧಿಕಾರಿಗಳನ್ನು ಅಮಾನತುಗೊಳಿಸಲಾಗಿದೆ. ಮೂವರಿಗೆ ಕಾರಣ ಕೇಳಿ ನೋಟಿಸ್ ನೀಡಲಾಗಿದೆ. ಅಕ್ರಮಕ್ಕೆ ಕಡಿವಾಣ ಹಾಕಲು ನೇಮಕಾತಿ ನಿಯಮಗಳನ್ನು‌ ಬಿಗಿಗೊಳಿಸಿ, ಇಡೀ ಪ್ರಕ್ರಿಯೆ ಪಾರದರ್ಶಕವಾಗಿ ನಡೆಯುವಂತೆ ಮಾಡಲಾಗಿದೆ’ ಎಂದು ತಿಳಿಸಿದರು.

‘ನೇಮಕಾತಿ ಸಂದರ್ಶನ ಸಮಿತಿಯಲ್ಲಿ ಶಿಕ್ಷಣ ಇಲಾಖೆ ಅಧಿಕಾರಿ, ಒಬ್ಬ ತಜ್ಞ ಹಾಗೂ ಸಂಸ್ಥೆಯ ಒಬ್ಬ ಪ್ರತಿನಿಧಿ ಇರಬೇಕು. ಪತ್ರಿಕಾ ಜಾಹೀರಾತಿನಿಂದಿಡಿದು ಅಭ್ಯರ್ಥಿಗಳ ಶೈಕ್ಷಣಿಕ ಅರ್ಹತೆಯನ್ನು ಅಧಿಕಾರಿ ಪರಿಶೀಲಿಸಬೇಕು. ಯಾವುದೇ ನಿಯಮ ಉಲ್ಲಂಘನೆಯಾಗಿದ್ದರೂ ನೇಮಕಾತಿ ತಡೆ ಹಿಡಿಯಬೇಕು’ ಎಂದು ಹೇಳಿದರು.

‘ಸಂದರ್ಶನ ಸಮಿತಿಯ ತಜ್ಞ ಮತ್ತು ಇಲಾಖೆಯ ಅಧಿಕಾರಿ ಸಂಸ್ಥೆ ಸೂಚಿಸಿದವರಿಗೇ ಹೆಚ್ಚು ಅಂಕ ಕೊಟ್ಟು ಪ್ರತಿಭಾವಂತರಿಗೆ ಅನ್ಯಾಯ ಮಾಡುತ್ತಿದ್ದರು. ಈ ರೀತಿ ನಡೆಯುವ ನೇಮಕಾತಿಗಳಲ್ಲಿ ಲಕ್ಷಾಂತರ ರೂಪಾಯಿ ಭ್ರಷ್ಟಾಚಾರ ನಡೆದಿರುವ ಆರೋಪಗಳು ಕೇಳಿ ಬಂದಿದ್ದವು. ಇನ್ನು ಮುಂದೆ ಅದಕ್ಕೆ ಆಸ್ಪದವಿರುವುದಿಲ್ಲ’ ಎಂದರು.

***

ಅನುದಾನಿತ ಶಿಕ್ಷಣ ಸಂಸ್ಥೆಗಳ ನೇಮಕಾತಿ ಪ್ರಕ್ರಿಯೆಯಲ್ಲಿ ನಿಯಮ ಉಲ್ಲಂಘನೆಯಾದರೆ, ನೇಮಕಾತಿಯನ್ನು ತಡೆ ಹಿಡಿದು ತನಿಖೆ ಮಾಡಲಾಗುವುದು

– ಮೇಜರ್ ಸಿದ್ಧಲಿಂಗಯ್ಯ ಎಸ್‌. ಹಿರೇಮಠ, ಹೆಚ್ಚುವರಿ ಆಯುಕ್ತ, ಶಿಕ್ಷಣ ಇಲಾಖೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.