ADVERTISEMENT

ಠೇವಣಿ ಕಳೆದುಕೊಳ್ಳುವ ಭಯದಿಂದ ಓಡುತ್ತಿದ್ದರು: ಸಚಿವ ಕೆ.ಎಸ್.ಈಶ್ವರಪ್ಪ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 12 ಅಕ್ಟೋಬರ್ 2020, 15:01 IST
Last Updated 12 ಅಕ್ಟೋಬರ್ 2020, 15:01 IST
ಕೆ.ಎಸ್.ಈಶ್ವರಪ್ಪ
ಕೆ.ಎಸ್.ಈಶ್ವರಪ್ಪ   

ದಾವಣಗೆರೆ: ‘ಹಿಂದೆ ಬಿಜೆಪಿಯಿಂದ ಟಿಕೆಟ್ ಕೊಡುತ್ತೇವೆ ಬಾ ಎಂದು ಕರೆದರೆ ಠೇವಣಿ ಕಳೆದುಕೊಳ್ಳುತ್ತೇವೆ ಎಂದು ಓಡುತ್ತಿದ್ದರು. ನಿಮ್ಮ ಸಹವಾಸವೇ ಬೇಡ ಎನ್ನುತ್ತಿದ್ದವರು, ಈಗ ಚುನಾವಣೆ ಎಂದರೆ ಬಿಜೆಪಿ ಗೆಲುವು ಎಂಬಂತೆ ಆಗಿದೆ. ಆಕಾಂಕ್ಷಿಗಳ ಸಂಖ್ಯೆಯೂ ಜಾಸ್ತಿಯಾಗಿದೆ‘ ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯಿತ್ ರಾಜ್ ಸಚಿವ ಕೆ.ಎಸ್. ಈಶ್ವರಪ್ಪ ಹೇಳಿದರು.

ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ‘ರಾಜ್ಯ ಹಾಗೂ ಕೇಂದ್ರದ ನಾಯಕರು ಒಮ್ಮತದಿಂದ ತೀರ್ಮಾನ ತೆಗೆದುಕೊಂಡಿದ್ದಾರೆ. ಅಭ್ಯರ್ಥಿ ಎಂಬುದು ಬಿಜೆಪಿ ವ್ಯಕ್ತಿ ಮುಖ್ಯವಲ್ಲ. ಪಕ್ಷ ಹಾಗೂ ಕಮಲದ ಚಿಹ್ನೆಯಿಂದ ಗೆಲ್ಲುತ್ತೇವೆ’ ಎಂದು ಈಶ್ವರಪ್ಪ ಹೇಳಿದರು.

‘ತಾಳಿದವನು ಬಾಳಿಯಾನು’

ADVERTISEMENT

ಬೇರೆ ಪಕ್ಷದಿಂದ 17 ಜನ ಬಿಜೆಪಿಗೆ ಬಂದಿದ್ದು, ಅವರಿಗೂ ಸಚಿವ ಸ್ಥಾನ ಕೊಡಬೇಕಾಗಿದೆ. ಉಳಿದ ಸ್ಥಾನಗಳನ್ನೂ ಇಡೀ ರಾಜ್ಯದಲ್ಲಿ ಹಂಚಬೇಕು. ತಾಳಿದವನು ಬಾಳೀಯಾನು ಎಂಬ ದಿಕ್ಕಿನಲ್ಲಿ ದಾವಣಗೆರೆ ಇದೆ. ಮುಂದಿನ ಇಲ್ಲಿನ ಶಾಸಕರಿಗೂ ಸಚಿವ ಸ್ಥಾನ ಸಿಗಬಹುದು’ ಎಂದರು.

ಮುನಿರತ್ನಗೆ ಟಿಕೆಟ್ ಸಿಗಲಿ

ಆರ್.ಆರ್.ನಗರ ಕ್ಷೇತ್ರದಲ್ಲಿ ಮುನಿರತ್ನಗೆ ನ್ಯಾಯವಾಗಿ ಟಿಕೆಟ್ ಸಿಗಬೇಕು ಎಂಬುದು ನನ್ನ ಅಪೇಕ್ಷೆ, ಅವರು ಪಕ್ಷಕ್ಕೆ ಸೇರ್ಪಡೆಯಾಗದಿದ್ದರೆ ಅವರು ಸರ್ಕಾರವೂ ಬರುತ್ತಿರಲಿಲ್ಲ. ಮಂತ್ರಿಗಳೂ ಆಗುತ್ತಿರಲಿಲ್ಲ. ಅವರ ಋಣ ತೀರಿಸಬೇಕಾದುದು ನಮ್ಮ ಕರ್ತವ್ಯ ಎಂದರು.

ಅರ್ಹತೆ ಇರುವವರಿಗೆ ಮೀಸಲಾತಿ

‘ಅರ್ಹತೆ ಇರುವ ಎಲ್ಲರೂ ಪರಿಶಿಷ್ಟ ವರ್ಗದ ಮೀಸಲಾತಿ ಕೇಳುವುದು ತಪ್ಪಲ್ಲ. ಕುರುಬರಿಗೆ ಪರಿಶಿಷ್ಟ ಪಂಗಡ ಸೌಲಭ್ಯಗಳನ್ನು ಕೊಡಬೇಕು ಎನ್ನುವ ಚರ್ಚೆ 1935ರಿಂದಲೂ ನಡೆಯುತ್ತಿದ್ದು, ದೆಹಲಿ-ಬೆಂಗಳೂರಿಗೆ ಫೈಲ್ ಓಡಾಡುತ್ತಿದೆ. ಉಪ್ಪಾರ,ಸವಿತಾ ಸಮಾಜ, ಕೋಳಿ ಸಮಾಜದವರೂಮೀಸಲಾತಿಗೆ ಬೇಡಿಕೆ ಇಟ್ಟಿದ್ದಾರೆ. ಈ ಬಗ್ಗೆ ಸರ್ಕಾರ ಸೂಕ್ತ ಸಂದರ್ಭದಲ್ಲಿ ನಿರ್ಧಾರ ಕೈಗೊಳ್ಳಲಿದೆ’ ಎಂದು ಈಶ್ವರಪ್ಪ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.