ADVERTISEMENT

ರಂಗಾಯಣದಿಂದ ‘ಸಾಮ್ರಾಟ ಅಶೋಕ’ ಡಿ. 27ರಂದು

​ಪ್ರಜಾವಾಣಿ ವಾರ್ತೆ
Published 25 ಡಿಸೆಂಬರ್ 2020, 12:01 IST
Last Updated 25 ಡಿಸೆಂಬರ್ 2020, 12:01 IST

ಧಾರವಾಡ: ‘ಉತ್ತರ ಕರ್ನಾಟಕ ರಂಗಭೂಮಿ ಅಭಿವೃದ್ಧಿ ಉದ್ದೇಶದಿಂದ ಸ್ಥಾಪನೆಯಾಗಿರುವ ಇಲ್ಲಿನ ರಂಗಾಯಣ ಹಲವು ಚಟುವಟಿಕೆಗಳ ಮೂಲಕ ಕ್ರಿಯಾಶೀಲವಾಗಿದೆ. ಅದರ ಮುಂದುವರಿಕೆಯಾಗಿ ನೂತನ ರೆಪರ್ಟರಿ ಕಲಾವಿದರು ಅಭಿನಯಿಸಿರುವ ‘ಸಾಮ್ರಾಟ ಅಶೋಕ’ ನಾಟಕದ ಮೊದಲ ಪ್ರದರ್ಶನ ಇದೇ 27 ರಂದು ಪ್ರಸ್ತುತಗೊಳ್ಳಲಿದೆ’ ಎಂದು ರಂಗಾಯಣ ನಿರ್ದೇಶಕ ರಮೇಶ ಪರವಿನಾಯ್ಕರ್ ಶುಕ್ರವಾರ ಹೇಳಿದರು.

‘ದಯಾಪ್ರಕಾಶ ಸಿನ್ಹಾ ರಚಿಸಿದ ಮೂಲ ಹಿಂದಿ ನಾಟಕವನ್ನು ಡಾ.ಶಶಿಧರ ನರೇಂದ್ರ ಕನ್ನಡಕ್ಕೆ ಅನುವಾದಿಸಿದ್ದಾರೆ. ಮೂಲತಃ ಹುಬ್ಬಳ್ಳಿಯವರಾದ, ಸದ್ಯ ದೆಹಲಿಯಲ್ಲಿ ನೆಲೆಸಿರುವ ವೀಣಾ ಶರ್ಮಾ ನಾಟಕ ನಿರ್ದೇಶಿಸಿದ್ದಾರೆ’ ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದರು.

‘ಭಾನುವಾರ ಸಂಜೆ 6.30ಕ್ಕೆ ರಂಗಾಯಣ ಆವರಣದಲ್ಲಿರುವ ಬಯಲು ರಂಗಮಂದಿರದಲ್ಲಿ ನಾಟಕ ಪ್ರದರ್ಶನಗೊಳ್ಳಲಿದ್ದು, ಹಿರಿಯ ವೃತ್ತಿ ರಂಗಭೂಮಿ ನಟಿ ಲಕ್ಷ್ಮಿಬಾಯಿ ಏಣಗಿ ಪ್ರದರ್ಶನ ಉದ್ಘಾಟಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಶಾಸಕ ಅರವಿಂದ ಬೆಲ್ಲದ, ವಿಧಾನ ಪರಿಷತ್ ಸದಸ್ಯ ಶಾಂತಾರಾಮ ಸಿದ್ದಿ, ಜಿಲ್ಲಾಧಿಕಾರಿ ನಿತೇಶ ಪಾಟೀಲ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಿ. ಕೃಷ್ಣಕಾಂತ, ರಂಗಸಮಾಜ ಸದಸ್ಯ ಹಿಪ್ಪರಗಿ ಸಿದ್ದರಾಮ ಪಾಲ್ಗೊಳ್ಳಲಿದ್ದಾರೆ’ ಎಂದು ಮಾಹಿತಿ ನೀಡಿದರು

ADVERTISEMENT

‘ನೂತನ ರೆಪರ್ಟರಿ ಕಲಾವಿದರ ಆಯ್ಕೆ ನಂತರ, ನಗರದಲ್ಲಿ ಮೊದಲ ಬಾರಿಗೆ ನಾಟಕ ಪ್ರದರ್ಶನಗೊಳ್ಳುತ್ತಿದ್ದು, ನಂತರದ ದಿನಗಳಲ್ಲಿ ರಾಜ್ಯ ಹಾಗೂ ಹೊರ ರಾಜ್ಯಗಳು ಸೇರಿ ಒಟ್ಟು 24 ಪ್ರದರ್ಶನಗಳನ್ನು ನೀಡಲು ಯೋಜನೆ ರೂಪಿಸಲಾಗಿದೆ’ ಎಂದು ಹೇಳಿದರು.

ರಂಗಾಯಣ ಆಡಳಿತಾಧಿಕಾರಿ ಡಾ.ಗೋಪಾಲಕೃಷ್ಣ ಮಾತನಾಡಿ, ‘ಕೊವಿಡ್ ಕಾರಣದಿಂದ ಮನೆಯೊಳಗೆ ಬಂಧಿಯಾಗಿದ್ದವರಿಗೆ ಈ ನಾಟಕ ಪ್ರದರ್ಶನ ಹೊಸ ಉತ್ಸಾಹ ನೀಡಲಿದೆ. ಐತಿಹಾಸಿಕ ಕಥೆ ಹೊಂದಿರುವ ನಾಟಕ, ಹೊಸ ಚಿಂತನೆಗೆ ಹಚ್ಚುವ ಭರವಸೆ ಇದೆ. ಕಲಾ ಪ್ರಕಾರಗಳು ಮನುಷ್ಯನಿಗೆ ಹೊಸ ಚೈತನ್ಯ ನೀಡುತ್ತವೆ. ಆ ನಿಟ್ಟಿನಲ್ಲಿ ಈ ಪ್ರದರ್ಶನ ಕುರಿತು ದೊಡ್ಡ ನೀರಿಕ್ಷೆ ಇದೆ’ ಎಂದರು.

ನಿರ್ದೇಶಕಿ ವೀಣಾ ಶರ್ಮಾ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.