ADVERTISEMENT

ವಿದ್ಯಾರ್ಥಿಗಳು ಪ್ರಶ್ನಿಸುವ ಗುಣ ಬೆಳೆಸಿಕೊಳ್ಳಬೇಕು: ಸಚಿವ ಸಂತೋಷ ಲಾಡ್

​ಪ್ರಜಾವಾಣಿ ವಾರ್ತೆ
Published 16 ಜುಲೈ 2025, 4:54 IST
Last Updated 16 ಜುಲೈ 2025, 4:54 IST
ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ಸುವರ್ಣ ಮಹೋತ್ಸವ ಸಭಾಭವನದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಸಚಿವ ಸಂತೋಷ ಲಾಡ್ ಉದ್ಘಾಟಿಸಿದರು
ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ಸುವರ್ಣ ಮಹೋತ್ಸವ ಸಭಾಭವನದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಸಚಿವ ಸಂತೋಷ ಲಾಡ್ ಉದ್ಘಾಟಿಸಿದರು   

ಧಾರವಾಡ: ‘ಸದೃಢ ದೇಶ ಕಟ್ಟಲು ಯುವಜನರ ಪಾತ್ರ ಮಹತ್ವದ್ದು. ವಿದ್ಯಾರ್ಥಿಗಳು ಪ್ರಶ್ನಿಸುವ ಮನೋಭಾವ ಬೆಳೆಸಿಕೊಳ್ಳಬೇಕು’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಹೇಳಿದರು.

ಕರ್ನಾಟಕ ವಿಶ್ವವಿದ್ಯಾಲಯದ ಸುವರ್ಣ ಮಹೋತ್ಸವ ಸಭಾಭವನದಲ್ಲಿ ಸೋಮವಾರ ನಡೆದ ಕರ್ನಾಟಕ ವಿ.ವಿ ಪರಿಶಿಷ್ಟ ಪಂಗಡ ಸಂಶೋಧನಾ ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳ ಸಂಘ ಹಾಗೂ ನೌಕರರ ಸಂಘದ ಉದ್ಘಾಟನಾ ಕಾರ್ಯಕ್ರಮ, ಸಾಧಕರಿಗೆ ಸನ್ಮಾನ ಹಾಗೂ ದ್ವಿತೀಯ ವರ್ಷದ ಸ್ನಾತಕೋತ್ತರ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭದಲ್ಲಿ ಮಾತನಾಡಿದರು.

‘ದೇಶವು ಬಿಜೆಪಿ, ಕಾಂಗ್ರೆಸ್ ಅಥವಾ ಯಾವುದೇ ಪಕ್ಷಕ್ಕೆ ಸೇರಿದ್ದಲ್ಲ. ಎಲ್ಲರೂ ಸೇರಿ ದೇಶ ಕಟ್ಟಬೇಕು. ದೇಶದಲ್ಲಿ ಒಳ್ಳೆಯ ವಿಚಾರಗಳು ಬೆಳೆಯಬೇಕು. ವಿದ್ಯಾರ್ಥಿಗಳು ವಿವಾದಗಳ ಕಡೆ ಹೆಚ್ಚು ಗಮನಹರಿಸದೇ ಅಧ್ಯಯನದಲ್ಲಿ ತೊಡಬೇಕು. ದೇಶಕ್ಕೆ ಕೊಡುಗೆ ನೀಡಬೇಕು’ ಎಂದು ಹೇಳಿದರು.

ADVERTISEMENT

‘ಬಿ.ಆರ್.ಅಂಬೇಡ್ಕರ್ ಅವರು ಹಿಂದೂ ಕೋಡ್ ಮೂಲಕ ಮಹಿಳೆಯರಿಗೆ ಆಸ್ತಿಯಲ್ಲಿ ಪಾಲು ಕಲ್ಪಿಸಿದರು. ಶೈಕ್ಷಣಿಕವಾಗಿ, ಆರ್ಥಿಕವಾಗಿ ಮಹಿಳೆಯರ ಸಬಲೀಕರಣಕ್ಕೆ ಆದ್ಯತೆ ನೀಡಿದರು. ಅವರ ಆದರ್ಶಗಳನ್ನು ಎಲ್ಲರೂ ಅಳವಡಿಸಿಕೊಳ್ಳಬೇಕು. ಅಂಬೇಡ್ಕರ್ ಅವರನ್ನು ಕೇವಲ ಎಸ್‍ಸಿ., ಎಸ್.ಟಿ ಸಮುದಾಯಕ್ಕೆ ಸೀಮಿತಗೊಳಿಸಬಾರದು’ ಎಂದರು.

ಹಂಪಿಯ ಕನ್ನಡ ವಿ.ವಿ ಪ್ರೊ.ಅಮರೇಶ ಯತಗಲ್ ಮಾತನಾಡಿ, ‘ಜನಪದ ಸಾಹಿತ್ಯದ ಚರಿತ್ರೆಗಳು ಬೇಡರ ಇತಿಹಾಸವನ್ನು ಹೇಳುತ್ತವೆ. ಸುರಪುರ ರಾಜರ ಇತಿಹಾಸ, ಸಂಗೊಳ್ಳಿ ರಾಯಣ್ಣ ಇತಿಹಾಸದಲ್ಲೂ ಬೇಡ ಜನಾಂಗದ ಉಲ್ಲೇಖಗಳು ಇವೆ. ವಾಲ್ಮೀಕಿ, ಬೇಡ ಜನಾಂಗದ ಇತಿಹಾಸ ಅವಲೋಕನದ ಅವಶ್ಯಕತೆ ಇದೆ’ ಎಂದು ತಿಳಿಸಿದರು.

ಪರೀಕ್ಷಾಂಗ ಕುಲಸಚಿವ ಪ್ರೊ. ನಿಜಲಿಂಗಪ್ಪ ಮಟ್ಟಿಹಾಳ ಮಾತನಾಡಿ, ‘ದೇಶದ ಎಲ್ಲ ಸಮುದಾಯಗಳು ತಮ್ಮ ಬೆಳವಣಿಗೆ ಶ್ರಮವಹಿಸುವುದರ ಜೊತೆಗೆ ಅಖಂಡ ಭಾರತ ಕಟ್ಟುವ ನಿಟ್ಟಿನಲ್ಲಿ ಶ್ರಮಿಸಬೇಕಿದೆ’ ಎಂದರು.

ಕರ್ನಾಟಕ ವಿಶ್ವವಿದ್ಯಾಲಯದ ಪರಿಶಿಷ್ಟ ಪಂಗಡ ನೌಕರರ ಸಂಘದ ಅಧ್ಯಕ್ಷ ಪ್ರೊ. ಕೃಷ್ಣ ನಾಯಕ ಅಧ್ಯಕ್ಷತೆ ವಹಿಸಿದ್ದರು. ರಾಜನಹಳ್ಳಿಯ ವಾಲ್ಮೀಕಿ ಪ್ರಸನ್ನಾನಂದ ಸ್ವಾಮೀಜಿ, ಜ್ಞಾನ ಸ್ವರೂಪಾನಂದ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಕುಲಸಚಿವ ಶಂಕರಪ್ಪ ವಣ್ಣಿಕ್ಯಾಳ, ಪ್ರೊ.ಎನ್.ಎಂ.ಸಾಲಿ, ಹಣಕಾಸು ಅಧಿಕಾರಿ ಪ್ರೊ.ಸಿ.ಕೃಷ್ಣಮೂರ್ತಿ, ಟಿ.ಈಶ್ವರ, ಭಾರತ ಮಗದೂರ, ವಕೀಲ ಕಲ್ಮೇಶ ಹಾವೇರಿಪೇಟ, ಮಹೇಶ ಹುಲ್ಲಣ್ಣನವರ, ರಾಬರ್ಟ್ ದದ್ದಾಪುರಿ, ಬಸವರಾಜ ಗೊರವರ, ಶ್ಯಾಮ ಮಲ್ಲನಗೌಡರ, ಮೋಹನ ಗುಡಸಲಮನಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.