ADVERTISEMENT

ಹುಬ್ಬಳ್ಳಿ| ಕಲಿಕಾ ಗುಣಮಟ್ಟ ವೃದ್ಧಿಗೆ ಶಾಲಾ ಸಂದರ್ಶನ: 476 ಸಂದರ್ಶಕ ತಂಡಗಳ ರಚನೆ

ಶಿವರಾಯ ಪೂಜಾರಿ
Published 9 ನವೆಂಬರ್ 2025, 5:17 IST
Last Updated 9 ನವೆಂಬರ್ 2025, 5:17 IST
ಧಾರವಾಡ ನಗರದ ಸರ್ಕಾರಿ ಪ್ರಾಥಮಿಕ ಶಾಲೆಗೆ ಬೆಳಗಾವಿ ವಿಭಾಗದ ಹೆಚ್ಚುವರಿ ಆಯುಕ್ತ ಈಶ್ವರ ಉಳ್ಳಾಗಡ್ಡಿ ಭೇಟಿ ನೀಡಿ ಮಕ್ಕಳ ಕಲಿಕಾ ಗುಣಮಟ್ಟ ಪರಿಶೀಲಿಸಿದರು
ಧಾರವಾಡ ನಗರದ ಸರ್ಕಾರಿ ಪ್ರಾಥಮಿಕ ಶಾಲೆಗೆ ಬೆಳಗಾವಿ ವಿಭಾಗದ ಹೆಚ್ಚುವರಿ ಆಯುಕ್ತ ಈಶ್ವರ ಉಳ್ಳಾಗಡ್ಡಿ ಭೇಟಿ ನೀಡಿ ಮಕ್ಕಳ ಕಲಿಕಾ ಗುಣಮಟ್ಟ ಪರಿಶೀಲಿಸಿದರು   

ಹುಬ್ಬಳ್ಳಿ: ಸರ್ಕಾರಿ ಹಾಗೂ ಅನುದಾನಿತ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ಕಲಿಕಾ ಗುಣಮಟ್ಟ ವೃದ್ಧಿಸಲು ಹಾಗೂ ಪರೀಕ್ಷಾ ಫಲಿತಾಂಶ ಸುಧಾರಿಸಲು ಶಾಲಾ ಶಿಕ್ಷಣ ಇಲಾಖೆ ಬೆಳಗಾವಿ ವಿಭಾಗದಿಂದ ‘ಶಾಲಾ ಸಂದರ್ಶನ’ ಅಭಿಯಾನ ಆರಂಭಿಸಲಾಗಿದೆ.

ಆರಂಭಿಕ ಸಾಕ್ಷರತೆ ಮತ್ತು ಸಂಖ್ಯಾಜ್ಞಾನ (ಎಫ್.ಎಲ್.ಎನ್‌), ಪಾಠ ಆಧಾರಿತ ಮೌಲ್ಯಾಂಕನ (ಎಲ್.ಬಿ.ಎ) ಹಾಗೂ ಎಸ್‌ಎಸ್‌ಎಲ್‌ಸಿ ಫಲಿತಾಂಶ ಸುಧಾರಣೆಗಾಗಿ 29 ಅಂಶಗಳನ್ನು ಈ ಅಭಿಯಾನ ಒಳಗೊಂಡಿದೆ. ಇದರ ಅನುಷ್ಠಾನದ ಪ್ರಗತಿ ಪರಿವೀಕ್ಷಣೆಗೆ ಉಪ ನಿರ್ದೇಶಕರು, ಕ್ಷೇತ್ರ ಶಿಕ್ಷಣಾಧಿಕಾರಿಗಳು, ಡಯಟ್‌ ಉಪನ್ಯಾಸಕರು, ಮೇಲ್ವಿಚಾರಣೆ ಅಧಿಕಾರಿಗಳನ್ನು ಒಳಗೊಂಡಂತೆ ಜಿಲ್ಲಾ ಮತ್ತು ತಾಲ್ಲೂಕು ಹಂತದಲ್ಲಿ ತಲಾ ಏಳು ತಂಡಗಳನ್ನು ರಚಿಸಲಾಗಿದೆ.

ಶಿರಸಿ, ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಗಳು ಸೇರಿ 9 ಜಿಲ್ಲೆಗಳು ಬೆಳಗಾವಿ ವಿಭಾಗದ ವ್ಯಾಪ್ತಿಯಲ್ಲಿವೆ. 11,711 ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳು, 1,906 ಅನುದಾನಿತ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಿವೆ. ಬಾಗಲಕೋಟೆ ಜಿಲ್ಲೆಯಲ್ಲಿ 49, ಬೆಳಗಾವಿ– 56, ಚಿಕ್ಕೋಡಿ– 63, ಧಾರವಾಡ– 56, ಗದಗ– 49, ಹಾವೇರಿ– 56, ಉತ್ತರಕನ್ನಡ– 42, ಶಿರಸಿ– 49, ವಿಜಯಪುರ ಜಿಲ್ಲೆಯಲ್ಲಿ 56 ತಂಡ ಸೇರಿ ಒಟ್ಟು 476 ತಂಡಗಳನ್ನು ರಚಿಸಲಾಗಿದೆ. ತಂಡಗಳು ಈಗಾಗಲೇ ಪ್ರತಿ ಶಾಲೆಗಳಿಗೆ ಭೇಟಿ ನೀಡಿ ಮೇಲ್ವಿಚಾರಣೆ ನಡೆಸುತ್ತಿದ್ದು, ನವೆಂಬರ್‌ 30ರವರೆಗೆ ಈ ಅಭಿಯಾನ ನಡೆಯಲಿದೆ.

ADVERTISEMENT

‘ಎಫ್‌ಎಲ್‌ಎನ್ ಯೋಜನೆ ಅನ್ವಯ ಪ್ರತಿಯೊಂದು ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಆರಂಭಿಕ ಸಾಕ್ಷರತೆ, ಸಂಖ್ಯಾಜ್ಞಾನ, ಭಾಷಾ ಜ್ಞಾನದ ಕುರಿತು ಶಿಕ್ಷಕರಿಂದ ಪಾಠ ಮಾಡಲಾಗುತ್ತಿದೆ. ನಿಗದಿತ ಸಮಯದೊಳಗೆ ಈ ಯೋಜನೆಯ ಗುರಿ ಸಾಧಿಸುವುದು ಶಿಕ್ಷಕರ ಜವಾಬ್ದಾರಿಯಾಗಿದೆ. ಹೀಗಾಗಿ ಸಂದರ್ಶನ ತಂಡದವರು ಪ್ರತಿ ಶಾಲೆಗೆ ಭೇಟಿ ನೀಡಿ ಪ್ರತಿ ವಿದ್ಯಾರ್ಥಿಯ ಕಲಿಕಾ ಪ್ರಗತಿಯನ್ನು ಖುದ್ದಾಗಿ ಪರಿಶೀಲಿಸಲಿದ್ದಾರೆ’ ಎಂದು ಶಾಲಾ ಶಿಕ್ಷಣ ಇಲಾಖೆ ಬೆಳಗಾವಿ ವಿಭಾಗದ ಹೆಚ್ಚುವರಿ ಆಯುಕ್ತ ಈಶ್ವರ ಉಳ್ಳಾಗಡ್ಡಿ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

‘ಸಂದರ್ಶನ ತಂಡದವರು ವಿದ್ಯಾರ್ಥಿಗಳ ಕಲಿಕಾ ಪ್ರಗತಿಯ ಜತೆಗೆ ಶಾಲೆಗಳಲ್ಲಿ ಅಗತ್ಯ ಮೂಲಸೌಕರ್ಯ, ಮಕ್ಕಳ ಸುರಕ್ಷತೆಗೆ ಶಾಲೆಯಲ್ಲಿ ಕೈಗೊಂಡ ಕ್ರಮಗಳು, ಶಿಕ್ಷಕರ ಬೋಧನಾ ಚಟುವಟಿಕೆ ಪರಿಶೀಲನೆ ಮಾಡಲಿದ್ದಾರೆ. ಇದರಿಂದ ಶಾಲೆಗಳಲ್ಲಿನ ಕಲಿಕಾ ಪ್ರಗತಿಯ ಮಾಹಿತಿ ಲಭ್ಯವಾಗಲಿದ್ದು, ಇದರನ್ವಯ ಅಗತ್ಯ ಕ್ರಿಯಾಯೋಜನೆ ತಯಾರಿಸಿ ಪ್ರತಿ ವಿದ್ಯಾರ್ಥಿಯ ಕಲಿಕಾ ಸಾಮರ್ಥ್ಯ ವೃದ್ಧಿಗೆ ಕ್ರಮ ವಹಿಸಲಾಗುವುದು’ ಎಂದು ತಿಳಿಸಿದರು.

‘ಶೇ 100ರಷ್ಟು ಫಲಿತಾಂಶದ ಗುರಿ’

‘ಪ್ರತಿ ವಿದ್ಯಾರ್ಥಿಗೆ ಕನ್ನಡ ಇಂಗ್ಲಿಷ್ ಓದಲು ಬರೆಯಲು ಹಾಗೂ ಸಾಮಾನ್ಯ ಲೆಕ್ಕಗಳು ಬರಬೇಕು ಎನ್ನುವುದು ಈ ಅಭಿಯಾನದ ಉದ್ದೇಶ. ಶಾಲಾ ಸಂದರ್ಶಕರು ನೀಡುವ ವರದಿ ಆಧರಿಸಿ ಶಾಲೆಗಳಲ್ಲಿ ಕಲಿಕಾ ಗುಣಮಟ್ಟ ಹೆಚ್ಚಿಸಲಾಗುವುದು. ಜನವರಿಯಲ್ಲಿ ಮತ್ತೊಮ್ಮೆ ಎಲ್ಲ ಶಾಲೆಗಳಿಗೆ ಸಂದರ್ಶಕರು ಭೇಟಿ ನೀಡಿ ಅನುಪಾಲನಾ ಮಾಹಿತಿ ನೀಡಲಿದ್ದಾರೆ. ಬೆಳಗಾವಿ ವಿಭಾಗದ ಎಲ್ಲ ಶಾಲೆಗಳ ಎಸ್‌ಎಸ್‌ಎಲ್‌ಸಿ ಪರೀಕ್ಷಾ ಫಲಿತಾಂಶ ಶೇ 100ರಷ್ಟು ಬರಬೇಕು ಎಂಬ ಗುರಿಯೊಂದಿಗೆ ಹಲವು ಯೋಜನೆಗಳನ್ನು ರೂಪಿಸಲಾಗುತ್ತಿದೆ’ ಎಂದು ಈಶ್ವರ ಉಳ್ಳಾಗಡ್ಡಿ ಹೇಳಿದರು. ‘ಶಾಲೆಯಲ್ಲಿ ಮಕ್ಕಳ ಕಲಿಕೆಗೆ ಸಂಬಂಧಿಸಿದ ಯಾವುದೇ ಅಹವಾಲುಗಳಿದ್ದರೆ ಪಾಲಕರು ಸಂದರ್ಶನ ತಂಡದೊಂದಿಗೆ ಸಮಾಲೋಚಿಸಿ ಪರಿಹಾರ ಕಂಡುಕೊಳ್ಳಬಹುದು’ ಎಂದು ಅವರು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.