
ಹುಬ್ಬಳ್ಳಿ: ದೆಹಲಿಯಲ್ಲಿ ನಡೆದ ಸ್ಫೋಟ ಪ್ರಕರಣದ ಹಿನ್ನೆಲೆಯಲ್ಲಿ ಮಹಾನಗರ ಪೊಲೀಸರು ನಗರದಾದ್ಯಂತ ಕಟ್ಟೆಚ್ಚರ ವಹಿಸಿದ್ದು, ಅನುಮಾನಾಸ್ಪದ ವ್ಯಕ್ತಿಗಳ ಚಲನವಲನದ ಮೇಲೆ ವಿಶೇಷ ನಿಗಾ ವಹಿಸಿದ್ದಾರೆ.
ಹುಬ್ಬಳ್ಳಿ–ಧಾರವಾಡ ನಗರ ಪ್ರವೇಶಿಸುವ ಗಡಿ ಪ್ರದೇಶದಲ್ಲಿ ಅಳವಡಿಸಿರುವ ಸಿಸಿಟಿವಿ ಕ್ಯಾಮೆರಾಗಳನ್ನು ಪೊಲೀಸ್ ಅಧಿಕಾರಿಗಳ ಸಮ್ಮುಖದಲ್ಲಿ ಮಂಗಳವಾರ ಪರಿಶೀಲನೆ ನಡೆಸಲಾಯಿತು. ಹಾಳಾಗಿರುವ ಕ್ಯಾಮೆರಾಗಳನ್ನು ತಕ್ಷಣ ದುರಸ್ತಿಪಡಿಸಲು ಸೂಚಿಸಿದರು. ಅಲ್ಲದೆ, ನಗರದ ಪ್ರಮುಖ ವೃತ್ತಗಳಲ್ಲಿ ಅಳವಡಿಸಿರುವ ಸಿಸಿಟಿವಿ ಕ್ಯಾಮೆರಾಗಳನ್ನು ಸಹ ಪರಿಶೀಲಿಸಿ, ತಂತ್ರಜ್ಞರ ಸಹಾಯದಿಂದ ಅವುಗಳ ಸಂಪರ್ಕ ಜಾಲವನ್ನು ತಪಾಸಣೆ ನಡೆಸಿದರು.
ನಿಯಂತ್ರಣ ಕೊಠಡಿಗೆ ಬರುವ ಯಾವುದೇ ದೂರುಗಳನ್ನು ನಿರ್ಲಕ್ಷಿಸದಂತೆ, ಅನುಮಾನಾಸ್ಪದ ಕರೆಗಳಿದ್ದರೆ ತಕ್ಷಣ ಮೇಲಧಿಕಾರಿಗಳಿಗೆ ತಿಳಿಸುವಂತೆ ಸಿಬ್ಬಂದಿಗೆ ಸೂಚಿಸಲಾಗಿದೆ. ಸಾಮಾಜಿಕ ಜಾಲತಾಣಗಳ ಮೇಲೆ ವಿಶೇಷ ನಿಗಾ ಇಡಲಾಗಿದ್ದು, ಮೂರು ಪಾಳಿಯಲ್ಲಿ ಸಿಬ್ಬಂದಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಹೊರ ರಾಜ್ಯದ ನೋಂದಣಿ ಇರುವ ವಾಹನಗಳನ್ನು ಸೂಕ್ಷ್ಮವಾಗಿ ತಪಾಸಣೆ ನಡೆಸಲಾಗುತ್ತಿದೆ ಎಂದು ಪೊಲೀಸರು ಹೇಳುತ್ತಾರೆ.
ಉದ್ಯೋಗ, ವ್ಯಾಪಾರ ಅಥವಾ ಇನ್ನಿತರ ಕಾರಣಗಳಿಂದ ಅವಳಿನಗರಕ್ಕೆ
ಬರುವವರ ಸಂಖ್ಯೆ ಹೆಚ್ಚಿದ್ದು, ಅನುಮಾನಾಸ್ಪದ ವ್ಯಕ್ತಿಗಳ ಮಾಹಿತಿಯನ್ನು ನಗರ ಪ್ರವೇಶಿಸುವ ಮೊದಲೇ ಸಂಗ್ರಹಿಸಲಾಗುತ್ತಿದೆ. ಆಧಾರ್ ಕಾರ್ಡ್ ಹಾಗೂ ಪೂರಕ ದಾಖಲೆಗಳನ್ನು ಪಡೆಯದೆ, ಹೊರಗಿನಿಂದ ಬಂದ ವ್ಯಕ್ತಿಗಳಿಗೆ ವಸತಿ ಗೃಹಗಳಲ್ಲಿ ವಾಸ್ತವ್ಯ ನೀಡದಂತೆ ಎಚ್ಚರಿಕೆ ನೀಡಲಾಗಿದೆ. ಅನುಮಾನಾಸ್ಪದ ವಸ್ತುಗಳು ಕಂಡು ಬಂದರೆ ತಕ್ಷಣ ತಿಳಿಸಬೇಕೆಂದು ಸಹ ಸೂಚಿಸಲಾಗಿದೆ. ಭದ್ರತೆಗೆ ಹೆಚ್ಚುವರಿ ಸಿಬ್ಬಂದಿ ನಿಯೋಜಿಸಿರುವುದಾಗಿ ತಿಳಿಸಿದರು.
ಶ್ವಾನದಳ ಹಾಗೂ ಬಾಂಬ್ ನಿಷ್ಕ್ರಿಯ ದಳ ಸಿಬ್ಬಂದಿ ರೈಲು ನಿಲ್ದಾಣ, ವಿಮಾನ ನಿಲ್ದಾಣ ಹಾಗೂ ಪ್ರಮುಖ ಬಸ್ ನಿಲ್ದಾಣಗಳ ಪರಿಶೀಲನೆ ಕಾರ್ಯವನ್ನು ಮಂಗಳವಾರವೂ ಮುಂದುವರಿಸಿದ್ದರು. ಪ್ರಯಾಣಿಕರ ಬ್ಯಾಗ್‌ಗಳನ್ನು ತಪಾಸಣೆ ನಡೆಸಿ, ನಿಲ್ದಾಣದ ಆವರಣದ ಸುತ್ತೆಲ್ಲ ಪರಿಶೀಲನೆ ನಡೆಸಿದರು.
‘20ಕ್ಕೂ ಹೆಚ್ಚು ಚೆಕ್ ಪೋಸ್ಟ್’
‘ದೆಹಲಿ ಪ್ರಕರಣದ ಹಿನ್ನೆಲೆಯಲ್ಲಿ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಪ್ರತಿ ಠಾಣೆ ವ್ಯಾಪ್ತಿಯಲ್ಲಿ ಎರಡು ಚೆಕ್ ಪೋಸ್ಟ್ ಹಾಗೂ ಜಿಲ್ಲಾ ಗಡಿಪ್ರದೇಶದಲ್ಲಿ 20ಕ್ಕೂ ಹೆಚ್ಚು ಚೆಕ್ ಪೋಸ್ಟ್ ಹಾಕಲಾಗಿದೆ. ಪ್ರಮುಖ ಸ್ಥಳಗಳಲ್ಲಿ ಭದ್ರತೆ ಕೈಗೊಂಡು ನಿರಂತರವಾಗಿ ಪರಿಶೀಲನೆ ಮಾಡಲಾಗುತ್ತಿದೆ’ ಎಂದು ಪೊಲೀಸ್ ಕಮಿಷನರ್ ಎನ್. ಶಶಿಕುಮಾರ್ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.