ಹುಬ್ಬಳ್ಳಿ: ‘ಸಮಾಜದಲ್ಲಿ ಇಂದಿಗೂ ಅಸ್ಪೃಶ್ಯತೆ ಜೀವಂತವಾಗಿದೆ. ಸೇವಾ ಕಾರ್ಯದ ಮೂಲಕ ಇಂಥ ಅನಿಷ್ಟ ಪದ್ಧತಿಯನ್ನು ತೊಲಗಿಸಬೇಕಿದೆ’ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘ ಬೆಂಗಳೂರಿನ ಕ್ಷೇತ್ರ ಕಾರ್ಯವಾಹ ಎನ್.ತಿಪ್ಪೇಸ್ವಾಮಿ ಹೇಳಿದರು.
ನಗರದ ಶ್ರೀನಿವಾಸ ಗಾರ್ಡನ್ ಸಭಾಂಗಣದಲ್ಲಿ ಬುಧವಾರ ಏರ್ಪಡಿಸಿದ್ದ ಸೇವಾಭಾರತಿ ರಜತ ಮಹೋತ್ಸವ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.
ಸಮಾಜದಲ್ಲಿ ಮೇಲು, ಕೀಳು, ಸ್ಪೃಶ್ಯ–ಅಸ್ಪೃಶ್ಯ ಎನ್ನುವ ಸಮಸ್ಯೆ ಇಲ್ಲ ಎಂದು ಹೇಳುವಂತಾಗಬೇಕು. ಅವಕಾಶ ವಂಚಿತರಿಗೆ ಸರ್ಕಾರದಿಂದ ಎಲ್ಲ ಸೌಲಭ್ಯ ನೀಡಲಾಗುತ್ತಿದೆ ಎಂದು ಪ್ರತಿಪಾದಿಸುವವರು ಸಾಕಷ್ಟಿದ್ದಾರೆ. ವಾಸ್ತವವಾಗಿ ಅವಕಾಶ ವಂಚಿತರಿಗೆ ದೇವಸ್ಥಾನಗಳಿಗೆ ಪ್ರವೇಶ ನೀಡದಿರುವುದು, ರುದ್ರಭೂಮಿ ಕೊಡದಿರುವ ಸಮಸ್ಯೆಗಳು ಇಂದಿಗೂ ಇವೆ. ಸಮಾಜದಲ್ಲಿರುವ ಶಕ್ತಿವಂತರು ಮುಂದೆ ಬಂದು ಅವಕಾಶ ವಂಚಿತರನ್ನು ಮೇಲೆತ್ತಬೇಕಿದೆ. ಇದಕ್ಕಾಗಿ ಸೇವಾ ಮನೋಭಾವ ರೂಢಿಸಿಕೊಳ್ಳುವ ಅಗತ್ಯವಿದೆ ಎಂದು ಹೇಳಿದರು.
ದುರ್ಬಲರನ್ನು ಮುಖ್ಯವಾಹಿನಿಗೆ ತರುವ ಕೆಲಸವನ್ನು ಸೇವಾ ಭಾರತಿ ಟ್ರಸ್ಟ್ ಕೂಡಾ ಮಾಡುತ್ತಿದೆ. ಸಮಾಜದಲ್ಲಿ ಸಾಮರಸ್ಯ ತರುವುದಕ್ಕಾಗಿ ಸಂಘ ಪರಿವಾರ ನಿರಂತರವಾಗಿ ತೊಡಗಿಸಿಕೊಂಡಿದೆ ಎಂದರು.
ಸಂಸದ ಜಗದೀಶ ಶೆಟ್ಟರ್ ಮಾತನಾಡಿ, ಸೇವಾ ಭಾರತಿ ಕಾರ್ಯಕ್ರಮಗಳಲ್ಲಿ ಮೊದಲಿನಿಂದಲೂ ಭಾಗವಹಿಸುತ್ತಾ ಬಂದಿದ್ದೇನೆ. ಸೇವೆಯ ಮೂಲಕ ಸಾಮಾಜಿಕ ಪರಿವರ್ತನೆ ಮಾಡುತ್ತಿರುವುದು ನಿಜಕ್ಕೂ ಮಾದರಿಯಾಗಿದೆ. ಈ ಸೇವೆ ಇನ್ನಷ್ಟು ವಿಸ್ತಾರವಾಗಬೇಕು. ಸಮಾಜದಲ್ಲಿ ಇನ್ನೂ ಹೆಚ್ಚಿನ ರೀತಿಯಲ್ಲಿ ಜಾಗೃತಿ ಕಾರ್ಯಗಳನ್ನು ಪರಿಣಾಮಕಾರಿಯಾಗಿ ಮಾಡಬೇಕು ಎಂದು ಸಲಹೆ ನೀಡಿದರು.
ಸೇವಾಭಾರತಿ ಟ್ರಸ್ಟ್ ಕಾರ್ಯದರ್ಶಿ ರಘು ಅಕಮಂಚಿ ಪ್ರಾಸ್ತಾವಿಕವಾಗಿ ಮಾತನಾಡಿ, ಸೇವಾ ಭಾರತಿ ಉತ್ತರ ಕರ್ನಾಟಕದಲ್ಲಿ ಮೌನ ಕ್ರಾಂತಿ ಮಾಡುತ್ತಿದೆ. ರಜತ ಮಹೋತ್ಸವದ ಮೂಲಕ ಸೇವೆಯನ್ನು ಮನೆಮನೆಗೆ ತಲುಪಿಸುವ ಉದ್ದೇಶ ಹೊಂದಲಾಗಿದೆ. ಸಾಮರಸ್ಯ ತರುವ ಕಾರ್ಯ, ಪರಿಸರ ಜಾಗೃತಿ, ಸೇವಾ ಡಾಕ್ಟರ್ಸ್ ಯೋಜನೆ ಸೇರಿದಂತೆ ಹತ್ತಾರು ಕಾರ್ಯ ಚಟುವಟಿಕೆಗಳನ್ನು ಯೋಜಿಸಲಾಗಿದೆ ಎಂದು ಹೇಳಿದರು.
ಸಾನ್ನಿಧ್ಯ ವಹಿಸಿದ್ದ ಮೂರುಸಾವಿರ ಮಠದ ಗುರುಸಿದ್ಧ ರಾಜಯೋಗೀಂದ್ರ ಸ್ವಾಮೀಜಿ ಅವರು ರಜತ ಮಹೋತ್ಸವ ಉದ್ಘಾಟಿಸಿ, ಮಾತನಾಡಿದರು.
ರಾಷ್ಟ್ರೀಯ ಸೇವಾ ಭಾರತೀಯ ರಾಷ್ಟ್ರೀಯ ಅಧ್ಯಕ್ಷ ಪನ್ನಾಲಾಲ ಬನ್ಸಾಲಿ ಅವರು ರಜತ ಮಹೋತ್ಸವ ಲೋಗೊ ಬಿಡುಗಡೆಗೊಳಿಸಿದರು. ನಂದಿನಿ ಕಶ್ಯಪ ಮಜೇಥಿಯಾ ಅವರು ಸೇವಾ ಭಾರತಿ ಕಿರುಚಿತ್ರ ಬಿಡುಗಡೆಗೊಳಿಸಿದರು.
ನಿವೃತ್ತ ಪ್ರಾಧ್ಯಾಪಕ ಎಚ್.ಡಿ.ಪಾಟೀಲ ಸ್ವಾಗತಿಸಿದರು. ಸೇವಾ ಭಾರತಿ ಟ್ರಸ್ಟ್ ಅಧ್ಯಕ್ಷ ಪೂರ್ಣಚಂದ್ರರಾವ ಘಂಟಸಾಲ ಅವರು ರಜತ ಮಹೋತ್ಸವ ಸಮಾರೋಹ ಸಮಿತಿಯ ಪದಾಧಿಕಾರಿಗಳನ್ನು ಘೋಷಿಸಿದರು.
ಡಾ.ವಿಜಯ ಮಹಾಂತೇಶ ಪೂಜಾರಿ ನಿರೂಪಿಸಿದರು. ಸಂಗೀತ ಶಿಕ್ಷಕಿ ಜ್ಯೋತಿ ಲಕ್ಷ್ಮೀ ಪ್ರಾರ್ಥಿಸಿದರು.
ಸಾಂಸ್ಕೃತಿಕ ಕಾರ್ಯಕ್ರಮ: ಹುಬ್ಬಳ್ಳಿಯ ಮಾತೃಛಾಯಾ ಬಾಲಕಲ್ಯಾಣ ಕೇಂದ್ರ, ಗದುಗಿನ ಅರುಣೋದಯ ವಿಶೇಷ ಮಕ್ಕಳ ಶಾಲೆಯ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಸುಜಯ ಶಾನಭಾಗ ಅವರ ತಂಡದಿಂದ ‘ವೀರಭಾರತಿ’ ವಿಶೇಷ ದೇಶಭಕ್ತಿ ನೃತ್ಯವು ಗಮನ ಸೆಳೆಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.