ಹುಬ್ಬಳ್ಳಿ: ಶಕ್ತಿ ಯೋಜನೆ ಅನುಷ್ಠಾನಕ್ಕಾಗಿ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ (ಎನ್‌ಡಬ್ಲುಕೆಆರ್‌ಟಿಸಿ) ಮಹಿಳಾ ಪ್ರಯಾಣಿಕರಿಗೆ ನೀಡಿದ ಟಿಕೆಟಿನ ಒಟ್ಟು ವೆಚ್ಚದಲ್ಲಿ ₹575 ಕೋಟಿ (ಶೇ 21) ಮೊತ್ತವನ್ನು ರಾಜ್ಯ ಸರ್ಕಾರ ಮರು ಪಾವತಿಸುವುದು ಬಾಕಿ ಉಳಿದಿದೆ.
ಕಳೆದ ಏಪ್ರಿಲ್ ತಿಂಗಳಾಂತ್ಯಕ್ಕೆ ಶಕ್ತಿ ಯೋಜನೆ ಜಾರಿಯಾಗಿ 23 ತಿಂಗಳು ಕಳೆದಿವೆ. ಈ ಅವಧಿಯಲ್ಲಿ ಕೋಟ್ಯಂತರ ಸಂಖ್ಯೆಯಲ್ಲಿ ಮಹಿಳಾ ಪ್ರಯಾಣಿಕರು ಯೋಜನೆಯ ಸದುಪಯೋಗ ಮಾಡಿಕೊಂಡಿದ್ದಾರೆ. ಪ್ರತಿ ತಿಂಗಳು ಮಹಿಳಾ ಪ್ರಯಾಣಿಕರ ಸಂಖ್ಯೆ ಏರಿಕೆ ಆಗುತ್ತಿದೆ. ಆದರೆ ಸರ್ಕಾರದಿಂದ ಸಂಪೂರ್ಣ ಮರುಪಾವತಿ ಆಗುತ್ತಿಲ್ಲ.
2023ರಲ್ಲಿ ಯೋಜನೆ ಆರಂಭವಾದ ಮೊದಲು ಎರಡು ತಿಂಗಳು ಜೂನ್ ಮತ್ತು ಜುಲೈ ಅಂತ್ಯದಲ್ಲಿ ಕ್ರಮವಾಗಿ ₹65 ಕೋಟಿ ಮತ್ತು ₹112 ಕೋಟಿ ಮರುಪಾವತಿಸುವಂತೆ ವಾಯವ್ಯ ಸಾರಿಗೆ ಸಂಸ್ಥೆಯಿಂದ ಸರ್ಕಾರಕ್ಕೆ ಬೇಡಿಕೆ ಸಲ್ಲಿಸಲಾಗಿತ್ತು. ಇದೀಗ 2025ರ ಏಪ್ರಿಲ್ ಒಂದು ತಿಂಗಳಲ್ಲಿ ₹163 ಕೋಟಿ ಮರುಪಾವತಿಸುವಂತೆ ಕೋರಲಾಗಿತ್ತು.
‘ಶಕ್ತಿ ಯೋಜನೆ ಆರಂಭವಾದಾಗ ಪ್ರತಿ ತಿಂಗಳು ಕೊನೆಯಲ್ಲಿ ಶೇ 80ರಷ್ಟು ಮೊತ್ತವನ್ನು ರಾಜ್ಯ ಸರ್ಕಾರ
ದಿಂದ ಮರುಪಾವತಿ ಮಾಡಲಾಗುತ್ತಿತ್ತು. ಆನಂತರ ಶೇ 90ರವರೆಗೂ ಮರುಪಾವತಿ
ಬರುತ್ತಿದೆ. ಪ್ರತಿ ತಿಂಗಳು ಸ್ವಲ್ಪ ಪ್ರಮಾಣದಲ್ಲಿ ಉಳಿಕೆ ಆಗಿರುವುದೆಲ್ಲವೂ ಸೇರಿ ಈಗ ಶೇ 21ರಷ್ಟು ಬಾಕಿ ಉಳಿದಿದೆ. ಒಟ್ಟಾರೆ ಶಕ್ತಿ ಯೋಜನೆಯಿಂದ ಸಾರಿಗೆ ಸಂಸ್ಥೆಗಳ ಆರ್ಥಿಕ ಸ್ಥಿತಿ ಸುಧಾರಿಸಿ ಕೊಳ್ಳಲು ಸಾಧ್ಯವಾಗುತ್ತಿದೆ’ ಎಂದು ಎನ್‌ಡಬ್ಲು ಕೆಆರ್‌ಟಸಿ ಮುಖ್ಯ ಲೆಕ್ಕಾಧಿ ಕಾರಿ ಕೆ.ಎನ್.ಜಗದಂಬಾ ಹೇಳಿದರು.
‘ಕೋವಿಡ್‌ನಿಂದ ಆರಂಭಿಸಿ ಇದುವರೆಗೂ ಸಂಸ್ಥೆಯ ಮೇಲೆ ಸಾಲದ ಹೊರೆ ಹೆಚ್ಚಾಗಿದೆ. ರಾಜ್ಯ ಸರ್ಕಾರ ಶಕ್ತಿ ಯೋಜನೆ ಆರಂಭಿಸಿದ್ದರಿಂದ ಸ್ವಲ್ಪ ಪ್ರಮಾಣದಲ್ಲಿ ಆರ್ಥಿಕ ಪರಿಸ್ಥಿತಿ ಸುಧಾರಿಸುತ್ತಿದೆ. ಆದರೆ ಸಂಪೂರ್ಣವಾಗಿ ಸಂಸ್ಥೆಯು ನಷ್ಟದಿಂದ ಮುಕ್ತಿ ಆಗಿಲ್ಲ’ ಎಂದು ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಪ್ರಿಯಾಂಗಾ ಎಂ. ‘ಪ್ರಜಾವಾಣಿ’ಗೆ ತಿಳಿಸಿದರು.
‘ವಾಯವ್ಯ ಸಾರಿಗೆ ಸಂಸ್ಥೆ ವ್ಯಾಪ್ತಿಯಲ್ಲಿ ಕಳೆದ ವರ್ಷ 300ಕ್ಕೂ ಹೆಚ್ಚು ಹೊಸ ಬಸ್‌ಗಳು ಸೇರ್ಪಡೆಯಾಗಿವೆ. ಈ ವರ್ಷವೂ ಹೊಸ ಬಸ್‌ಗಳನ್ನು ಖರೀದಿಸಲು ರಾಜ್ಯ ಸರ್ಕಾರ ಅನುಮೋದನೆ ನೀಡಿದೆ. ಹೊಸ ಸಿಬ್ಬಂದಿ ನೇಮಕಾತಿಯನ್ನೂ ಪ್ರತಿ ವರ್ಷ ಮುಂದುವರಿಸಲಾಗಿದೆ. ಬಸ್ ಕಾರ್ಯಾಚರಣೆಗಾಗಿ ಸಂಸ್ಥೆಯಿಂದ ಮಾಡುವ ವೆಚ್ಚದ ಪ್ರಮಾಣವೂ ಏರಿಕೆ ಆಗಿದೆ’ ಎಂದರು.
ಶಕ್ತಿ ಯೋಜನೆ ವೆಚ್ಚವನ್ನು ರಾಜ್ಯ ಸರ್ಕಾರದಿಂದ ಪ್ರತಿ ತಿಂಗಳು ಮರುಪಾವತಿ ಮಾಡುತ್ತಿದ್ದರೂ ಸ್ವಲ್ಪ ಪ್ರಮಾಣದಲ್ಲಿ ಬಾಕಿ ಉಳಿಯುತ್ತಿದೆ.ಎಂ.ಪ್ರಿಯಾಂಗಾ, ಎನ್‌ಡಬ್ಲುಕೆಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕಿ
ಎನ್‌ಡಬ್ಲುಕೆಆರ್‌ಟಿಸಿ: ಶಕ್ತಿ ಯೋಜನೆ ವೆಚ್ಚ ಮರುಪಾವತಿ ವಿವರ(ಕೋಟಿಗಳಲ್ಲಿ)
ವರ್ಷ : ಒಟ್ಟು ವೆಚ್ಚ : ಸರ್ಕಾರದಿಂದ ಮರುಪಾವತಿ : ಬಾಕಿ
2023–24(ಜೂನ್‌ನಿಂದ) : 1076 : 792 : 284 (ಶೇ 26)
2024–25 : 1508 : 1232 : 275 (ಶೇ 18)
2025–26 (ಏಪ್ರಿಲ್) :163 : 147 : 16 : (ಶೇ10)
ಒಟ್ಟು : 2747 : 2172 : 575 (ಶೇ 21)
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.