ಶಕ್ತಿನಗರ ಮನೆ ಬಳಿಯ ಚರಂಡಿಯಲ್ಲಿಯೇ ಕೊಳಚೆ ನೀರು ನಿಂತಿರುವುದು
ಹುಬ್ಬಳ್ಳಿ: ಸುಗಮ ಸಂಚಾರಕ್ಕೆ ಉತ್ತಮ ರಸ್ತೆ ಇಲ್ಲ. ಚರಂಡಿ ವ್ಯವಸ್ಥೆಯಿಲ್ಲ. ಬೀದಿ ದೀಪಗಳ ಸಮಸ್ಯೆ, ಸಕಾಲಕ್ಕೆ ಪೂರೈಕೆಯಾಗದ ಕುಡಿಯುವ ನೀರು, ಸ್ವಚ್ಛತೆ ಎನ್ನುವುದು ಇಲ್ಲಿ ಮರೀಚಿಕೆ.
ಇಂತಹ ಹಲವು ಸಮಸ್ಯೆಗಳ ನಡುವೆಯೇ ಇಲ್ಲಿನ ಮಂಜುನಾಥ ನಗರದ ಬಳಿಯ ಶಕ್ತಿನಗರ ಅರುಣ ಕಾಲೊನಿಯ ಬಡಾವಣೆಯ ನಿವಾಸಿಗಳು ನಿತ್ಯ ಬದುಕು ಸಾಗಿಸುತ್ತಿದ್ದಾರೆ.
ಬಡಾವಣೆಯಲ್ಲಿ ವ್ಯವಸ್ಥಿತ ರಸ್ತೆ, ಚರಂಡಿಗಳಿಲ್ಲ. ಎಲ್ಲೆಂದರಲ್ಲಿ ಕೊಳಚೆ ನೀರು ಹರಿಯುತ್ತಿರುತ್ತದೆ. ಇದರಲ್ಲಿಯೇ ವಾಹನ ಸವಾರರು ಹಾಗೂ ಪಾದಚಾರಿಗಳು ಸಂಚರಿಸುತ್ತಾರೆ.
ಇಲ್ಲಿನ ನಿವಾಸಿಗಳಿಗೆ ಸಕಾಲಕ್ಕೆ ಕುಡಿಯುವ ನೀರು ಪೂರೈಕೆ ಆಗುವುದಿಲ್ಲ. ಬೀದಿ ದೀಪಗಳಿಲ್ಲದ್ದ ಕಾರಣ ರಾತ್ರಿ ವೇಳೆ ಮಹಿಳೆಯರು, ಮಕ್ಕಳು ಓಡಾಡಲು ಭಯಪಡುತ್ತಾರೆ. ಶಕ್ತಿನಗರದಲ್ಲಿ ಸ್ವಚ್ಛತೆ ಎನ್ನುವುದು ಮರೀಚಿಕೆಯಾಗಿದೆ. ರಸ್ತೆ ಬದಿಯಲ್ಲಿ ಹಾಗೂ ಎಲ್ಲೆಂದರಲ್ಲಿ ತ್ಯಾಜ್ಯವನ್ನು ಎಸೆಯಲಾಗುತ್ತದೆ. ಈ ತ್ಯಾಜ್ಯದಿಂದ ದುರ್ವಾಸನೆ ಬರುತ್ತಿದೆ. ಸೊಳ್ಳೆಗಳ ಕಾಟವೂ ಹೆಚ್ಚಾಗಿದೆ. ಮಲೇರಿಯಾ, ಡೆಂಗಿ ಹರಡುವ ಭೀತಿ ಇದೆ ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸುತ್ತಾರೆ.
ಇಲ್ಲಿ ಶಕ್ತಿದೇವಿ ದೇವಸ್ಥಾನವಿದ್ದು, ಈ ಮಾರ್ಗದಲ್ಲಿನ ವಾಕಿಂಗ್ ಪಾತ್ ಹಾಳಾಗಿದೆ. ಗಿಡಗಂಟಿಗಳು ಬೆಳೆದಿವೆ. ಇದರಿಂದ ಪಾದಚಾರಿಗಳಿಗೆ ಹಾಗೂ ವಾಯುವಿಹಾರಿಗಳ ಸಂಚಾರಕ್ಕೆ ತೊಂದರೆಯಾಗುತ್ತಿದೆ.
ಇಲ್ಲಿನ ಬಹುತೇಕ ರಸ್ತೆಗಳ ಹಾಳಾಗಿದ್ದು, ವಾಹನಗಳ ಸಂಚಾರಕ್ಕೂ ತೊಂದರೆಯಾಗುತ್ತಿದೆ.
‘ವ್ಯವಸ್ಥಿತ ಚರಂಡಿ ಇಲ್ಲದ ಕಾರಣ, ಮಳೆ ಬಂದಾಗ ಕೊಳಚೆ ನೀರು ರಸ್ತೆಯ ಮೇಲೆಯೇ ಹರಿಯುತ್ತದೆ. ಮನೆಯ ಮುಂದೆಯೇ ಚರಂಡಿ ನೀರು ನಿಲ್ಲುತ್ತದೆ’ ಎಂದು ಶಕ್ತಿನಗರದ ನಿವಾಸಿ ಸುಪರ್ಣಾ ಜೈನ್ ಹೇಳುತ್ತಾರೆ.
‘ಅರುಣ ಕಾಲೊನಿಯಲ್ಲಿ ರಸ್ತೆ ದುರಸ್ತಿ ಹಾಗೂ ಚರಂಡಿ ವ್ಯವಸ್ಥೆ ಮಾಡಿಕೊಡಿ ಎಂದು ಹಲವು ಬಾರಿ ಪಾಲಿಕೆಯ ಅಧಿಕಾರಿಗಳಲ್ಲಿ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ’ ಎಂದು ನಿವಾಸಿಗಳಾದ ಅನಿಲ್ ಕುಮಾರ್ ಆರೋಪಿಸುತ್ತಾರೆ.
ಶಕ್ತಿನಗರದ ಅರುಣ ಕಾಲೊನಿಯಲ್ಲಿ ಉತ್ತಮ ರಸ್ತೆ, ಒಳಚರಂಡಿ ವ್ಯವಸ್ಥೆಯಿದೆ. ಒಂದು ವೇಳೆ ಸಮಸ್ಯೆಯಿದ್ದಲ್ಲಿ ಸರಿಪಡಿಸಲಾಗುವುದುಚಂದ್ರಶೇಖರ ಮಾಲಿಪಾಟೀಲ, ವಲಯಾಧಿಕಾರಿ, ಹು–ಧಾ ಮಹಾನಗರ ಪಾಲಿಕೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.