ADVERTISEMENT

ಅಭಿನವ ಸಿದ್ಧಾರೂಢರ ಪಟ್ಟಾಭಿಷೇಕ ಸಂಭ್ರಮ

ಹುಬ್ಬಳ್ಳಿ ಶಾಂತಾಶ್ರಮ, ವಿಜಯಪುರದ ಷಣ್ಮುಖಾರೂಢಮಠಕ್ಕೆ ನೂತನ ಪೀಠಾಧಿಪತಿ

​ಪ್ರಜಾವಾಣಿ ವಾರ್ತೆ
Published 7 ನವೆಂಬರ್ 2019, 13:32 IST
Last Updated 7 ನವೆಂಬರ್ 2019, 13:32 IST
ಹುಬ್ಬಳ್ಳಿಯ ಶಾಂತಾಶ್ರಮ ಮತ್ತು ವಿಜಯಪುರದ ಷಣ್ಮುಖಾರೂಢಮಠದ ನೂತನ ಪೀಠಾಧಿಪತಿಯಾಗಿ ರಜತ ಸಿಂಹಾಸನಾರೋಹಣ ಮಾಡಿದ ಅಭಿನವ ಸಿದ್ಧಾರೂಢ ಸ್ವಾಮೀಜಿ ಅವರಿಗೆ ಮಠಾಧೀಶರು ಸುವರ್ಣ ಕಿರೀಟ ಧಾರಣೆ, ಪುಷ್ಪಾರ್ಚನೆ ಮಾಡಿದರು  –ಪ್ರಜಾವಾಣಿ ಚಿತ್ರ
ಹುಬ್ಬಳ್ಳಿಯ ಶಾಂತಾಶ್ರಮ ಮತ್ತು ವಿಜಯಪುರದ ಷಣ್ಮುಖಾರೂಢಮಠದ ನೂತನ ಪೀಠಾಧಿಪತಿಯಾಗಿ ರಜತ ಸಿಂಹಾಸನಾರೋಹಣ ಮಾಡಿದ ಅಭಿನವ ಸಿದ್ಧಾರೂಢ ಸ್ವಾಮೀಜಿ ಅವರಿಗೆ ಮಠಾಧೀಶರು ಸುವರ್ಣ ಕಿರೀಟ ಧಾರಣೆ, ಪುಷ್ಪಾರ್ಚನೆ ಮಾಡಿದರು  –ಪ್ರಜಾವಾಣಿ ಚಿತ್ರ   

ಹುಬ್ಬಳ್ಳಿ: ಅದ್ವೈತ ಪರಂಪರೆಯ ಹುಬ್ಬಳ್ಳಿಯ ಶಾಂತಾಶ್ರಮ ಮತ್ತು ವಿಜಯಪುರದ ಷಣ್ಮುಖಾರೂಢಮಠದ ನೂತನ ಪೀಠಾಧಿಪತಿಯಾಗಿ ನೇಮಕವಾಗಿರುವ ಅಭಿನವ ಸಿದ್ಧಾರೂಢ ಸ್ವಾಮೀಜಿ ಅವರ ಪಟ್ಟಾಭಿಷೇಕ ಮಹೋತ್ಸವ ಸಹಸ್ರಾರು ಭಕ್ತರು ಮತ್ತು ನಾಡಿದ ವಿವಿಧ ಮಠಾಧೀಶರ ಸಮ್ಮುಖದಲ್ಲಿ ಗುರುವಾರ ಶಾಸ್ತ್ರೋಕ್ತವಾಗಿ ನೆರವೇರಿತು.

ಶ್ರೀಗಳ ಪಟ್ಟಾಭಿಷೇಕಕ್ಕೂ ಮೊದಲು ಅವರ ಕೋರಿಕೆ ಮೇರೆಗೆ ಶಾಂತಾಶ್ರಮದ ಹಿರಿಯ ಶ್ರೀಗಳಾದ ಅಭಿನವ ಶಿವಪುತ್ರ ಸ್ವಾಮೀಜಿ ಪೀಠಾರೋಹಣ ಮಾಡಿದರು. ಬಳಿಕ ಅಭಿನವ ಸಿದ್ಧಾರೂಢ ಸ್ವಾಮೀಜಿ ಅವರು ರಜತ ಸಿಂಹಾಸನಾರೋಹಣ ಮಾಡಿದರು. ನೆರೆದಿದ್ದ ನೂರಾರು ಮಠಾಧೀಶರು ಅದ್ವೈತ ಮಂತ್ರಘೋಷಗಳ ಪಠಣದೊಂದಿಗೆ ಸುವರ್ಣ ಕಿರೀಟ ಧಾರಣೆ, ಪುಷ್ಪಾಭಿಷೇಕ ಮಾಡಿದರು.

ಪಟ್ಟಾಭಿಷಿಕ್ತರಾಗಿ ಮಾತನಾಡಿದ ಅಭಿನವ ಸಿದ್ಧಾರೂಢ ಸ್ವಾಮೀಜಿ, ‘ಶಿವಯೋಗಮಂದಿರ, ಬೆಳಗಾವಿಯ ರುದ್ರಾಕ್ಷಿಮಠದಲ್ಲಿ ಬೆಳೆದಿರುವನನ್ನ ಮೇಲೆ ಗುರುಗಳು ಯಾವುದೇ ತತ್ವ–ಸಿದ್ಧಾಂತದ ಭಾರವನ್ನು ಹೇರಿಲ್ಲ. ಇದೀಗ ಅದ್ವೈತ ಸಿದ್ಧಾಂತದ ಪ್ರತಿಪಾದಕ ಸಿದ್ಧಾರೂಢರನ್ನೇ ನನ್ನ ತಂದೆ–ತಾಯಿ, ಬಂಧು–ಬಳಗ ಎಂದು ತಿಳಿದುಕೊಂಡಿದ್ದೇನೆ. ಈ ಬಗ್ಗೆ ಯಾವುದೇ ಅನುಮಾನ ಬೇಡ’ ಎಂದು ಸ್ಪಷ್ಟಪಡಿಸಿದರು.

ADVERTISEMENT

‘ಸಿದ್ಧಾರೂಢರು ಒಬ್ಬ ಐತಿಹಾಸಿಕ ವ್ಯಕ್ತಿಯಾಗಿದ್ದಾರೆ. ಸ್ವಾತಂತ್ರ್ಯ ಹೋರಾಟಕ್ಕೂ ಅವರು ಸ್ಪೂತಿಯಾಗಿದ್ದರು. ಅವರ ಹಾದಿಯಲ್ಲೇ ಸಾಗುತ್ತೇನೆ. ಮಠವನ್ನು ಮುನ್ನೆಡೆಸುತ್ತೇನೆ’ ಎಂದರು.

‘ಬಸವಾದಿ ಶರಣರ ಕುರಿತು ಗ್ರಂಥಮಾಲೆಗಳನ್ನು ಹೊರತಂದಿರುವಂತೆ ನಾಡಿನ ಆರೂಢ ಪರಂಪರೆಯ ಪುಣ್ಯ ಪುರುಷರ ಕುರಿತು ಗ್ರಂಥಮಾಲೆಯನ್ನು ಹೊರತರುವಂತೆ ಈ ಹಿಂದೆ ಒಮ್ಮೆ ಗದುಗಿನ ತೋಂಟದಾರ್ಯ ಸಿದ್ಧಲಿಂಗಶ್ರೀಗಳು ಹೇಳಿದ್ದರು. ಈ ಕುರಿತು ಪ್ರಯತ್ನ ಮಾಡುತ್ತೇನೆ’ ಎಂದು ಹೇಳಿದರು.

‘ಮಠದ ಭಕ್ತರ ಮಕ್ಕಳಿಗೆ ಸಂಸ್ಕಾರ, ಭಾಷೆ, ಯೋಗ, ಧಾರ್ಮಿಕ ಶಿಕ್ಷಣ ನೀಡುವ ಕನಸಿದೆ. ಮಠಕ್ಕೆ ಪ್ರವೇಶಿಸಿಸುವವರು ಚಪ್ಪಲಿಯನ್ನು ಹೊರಗೆ ಬಿಟ್ಟು ಬರುವಂತೆ ಇನ್ನು ಮುಂದೆ ಜಾತಿ, ರಾಜಕಾರಣವನ್ನು ಬಿಟ್ಟು ಶಾಂತಾಶ್ರಮಕ್ಕೆ ಬರಬೇಕು’ ಎಂದು ಮನವಿ ಮಾಡಿದರು.

‘ಗುರುಗಳಾದ ಅಭಿನವ ಶಿವಪುತ್ರ ಸ್ವಾಮಿಗಳ ಸೇವೆ ಮಾಡಿಕೊಂಡು ವಿನಯಶೀಲತೆಯಿಂದ ಎಲ್ಲರೊಂದಿಗೆ ಬೆರೆತು ಕೆಲಸ ಮಾಡುವ ಹಂಬಲದಲ್ಲಿದ್ದು, ಇದಕ್ಕೆ ಅವಕಾಶ ಕಲ್ಪಿಸಬೇಕು’ ಎಂದು ಬೇಡಿಕೊಂಡರು.

‘ಬಡತನ, ಹಸಿವಿನ ಬಗ್ಗೆ ನೈಜ ಅನುಭವ ನನಗಿದೆ. ಬಾಲ್ಯದಲ್ಲಿ ಮನೆಯಲ್ಲಿ ಕಿತ್ತುತಿನ್ನುವ ಬಡತನವಿತ್ತು. ಮನೆಯಲ್ಲಿ ಊಟಕ್ಕೆ ಇಲ್ಲದಿರುವಾಗ ಅಕ್ಕಪಕ್ಕದ ಮನೆಯವರಿಂದ ಹಿಟ್ಟು ತಂದು ತಿಂದಿದ್ದೇವೆ. 14 ವರ್ಷದವನಿದ್ದಾಗ ವ್ಯಾಪಾರ ಮಾಡಿ ತಂದೆ, ತಾಯಿಗೆ ನೆರವಾಗಿದ್ದೇನೆ’ ಎಂದು ತಮ್ಮ ಬಾಲ್ಯದ ಕಷ್ಟದ ದಿನಗಳನ್ನು ನೆನಪಿಸಿಕೊಂಡರು.

ಶಾಂತಾಶ್ರಮದ ಹಿರಿಯ ಶ್ರೀಗಳಾದ ಅಭಿನವ ಶಿವಪುತ್ರ ಸ್ವಾಮೀಜಿ, ಬೀದರ್‌ನ ಶಿವಕುಮಾರ ಸ್ವಾಮೀಜಿ ಮಾತನಾಡಿ, ‘ಎಲ್ಲರನ್ನು ಪ್ರೀತಿಸಿ; ಆರೂಢರನ್ನು ಪ್ರಾರ್ಥಿಸಿ; ಸಿದ್ಧಾರೂಢರೇ ನಮ್ಮ ಪ್ರಾಣ ಮಾಡಿಕೊಂಡು ಮಠದಲ್ಲಿ ಇರಬೇಕು. ಮನಸ್ಸಿಗೆ ಒಲ್ಲೆ ಎನಿಸಿದರೆ ಯಾವಾಗಲಾದರೂ ಬಿಟ್ಟುಹೋಗಬಹುದು’ ಎಂದು ನೂತನ ಶ್ರೀಗಳಿಗೆ ಸಲಹೆ ನೀಡಿದರು.

ಅಭಿನವ ಸಿದ್ಧಾರೂಢ ಸ್ವಾಮೀಜಿ ಅವರ ಪೂರ್ವಾಶ್ರಮದ ತಂದೆ ಶರಣಯ್ಯ ಬೈಲಾಪುರಮಠ, ತಾಯಿ ಪಾರಮ್ಮ ಅವರು ಪುತ್ರದಾನ ಕಾರ್ಯಕ್ರಮ ನಡೆಸಿಕೊಟ್ಟರು. ವಿವಿದ ಮಠಾಧೀಶರು ನೂತನ ಶ್ರೀಗಳನ್ನು ಅಭಿನಂದಿಸಿದರು. ಗದಗ ತೋಂಟದಾರ್ಯ ಮಠದ ಸಿದ್ಧರಾಮ ಸ್ವಾಮೀಜಿ, ಇಂಚಲದ ಶಿವಾನಂದ ಭಾರತಿ ಸ್ವಾಮೀಜಿ, ಕೂಡಲಸಂಗಮದ ಬಸವಜಯ ಮೃತ್ಯುಂಜಯ ಸ್ವಾಮೀಜಿ ಸೇರಿದಂತೆ ನೂರಾರು ಮಠಾಧೀಶರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.